ಕಲಬುರಗಿ: ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳಲ್ಲಿ ಕ್ರಮವಾಗಿ ಭೀಮಾ ಹಾಗೂ ಮಾಂಜ್ರಾ ನದಿ ಪ್ರವಾಹ ತಗ್ಗಿದ್ದು, ಮಳೆ ಬಿಡುವು ಕೊಟ್ಟಿದ್ದರಿಂದ ಮಂಗಳವಾರ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿದ್ದು, ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಆದರೆ, ಕಲಬುರಗಿ ಜಿಲ್ಲೆಯ ಜೇವರ್ಗಿ, ಅಫಜಲಪುರ, ಚಿತ್ತಾಪುರ ತಾಲ್ಲೂಕಿನ ಹಲವು ಗ್ರಾಮಗಳನ್ನು ಆವರಿಸಿದ ಪ್ರವಾಹ ಪೂರ್ಣವಾಗಿ ಇಳಿಯದೇ ಇದ್ದುದರಿಂದ ಜನರು ಕಾಳಜಿ ಕೇಂದ್ರಗಳಲ್ಲೇ ಆಶ್ರಯ ಪಡೆದಿದ್ದಾರೆ.
ಬೀದರ್ ಜಿಲ್ಲೆಯ ಮಾಂಜ್ರಾ, ಕಾರಂಜಾ ನದಿಯಲ್ಲಿ ಪ್ರವಾಹ ಹೆಚ್ಚಿದ್ದ ರಿಂದ ಹುಲಸೂರ, ಭಾಲ್ಕಿ, ಕಮಲನಗರ, ಔರಾದ್ ಹಾಗೂ ಬೀದರ್ ತಾಲ್ಲೂಕಿನಲ್ಲಿ ಪ್ರವಾಹ ಬಂದು ಹಲವು ಕಡೆ ಸಂಪರ್ಕ ಕಡಿತಗೊಂಡಿತ್ತು. ಮಹಾರಾಷ್ಟ್ರ ದೊಂದಿಗೆ ಸಂಪರ್ಕ ಸ್ಥಗಿತಗೊಂಡಿತ್ತು.
ಮಾಂಜ್ರಾ ನದಿಯಲ್ಲಿ ಪ್ರವಾಹ ಇಳಿಮುಖಗೊಂಡಿದ್ದರಿಂದ ನೀರಿನ ಹರಿವು ತಗ್ಗಿದೆ. ಬಹುತೇಕ ಕಡೆಗಳಲ್ಲಿ ವಾಹನ ಸಂಚಾರ ಪುನರಾರಂಭ ಗೊಂಡಿದೆ. ಹೊಲ ಗದ್ದೆಗಳಿಂದ ನೀರು ತಗ್ಗಿದೆ. ಆದರೆ, ನಾಯಿ, ಹಂದಿ ಸೇರಿದಂತೆ ಇತರೆ ಜಾನುವಾರಗಳ ಕಳೆ ಬರ ಹರಿದು ಬರುತ್ತಿದ್ದು, ನದಿ ತೀರದ ಗ್ರಾಮಸ್ಥರು ಹೊಸ ಸಮಸ್ಯೆ ಎದುರಿಸುತ್ತಿದ್ದಾರೆ.
ಯಾದಗಿರಿ ಜಿಲ್ಲೆಯಲ್ಲಿ ನೆರೆ ನೀರು ತಗ್ಗಿದ್ದು, ಕಾಳಜಿ ಕೇಂದ್ರಗಳಲ್ಲಿನ ಬಹುತೇಕರು ತಮ್ಮ ಮನೆಗಳತ್ತ ಮುಖ ಮಾಡಿದ್ದಾರೆ. ಶಿವನೂರು, ನಾಯ್ಕಲ್ ಮತ್ತು ಹುರಸಗುಂಡಗಿಯ ಕೆಲವರು ಮಾತ್ರ ಕಾಳಜಿ ಕೇಂದ್ರಗಳಲ್ಲಿ ಉಳಿದುಕೊಂಡಿದ್ದಾರೆ. ಪ್ರವಾಹಕ್ಕೆ ತುತ್ತಾದ ಪ್ರದೇಶಗಳ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಉಂಟಾಗಿದೆ. ನೆರೆ ಪ್ರದೇಶಗಳಲ್ಲಿ ಫಿನಾಯಿಲ್, ಬ್ಲೀಚಿಂಗ್ ಪೌಡರ್ ಬಳಸಿ ಸ್ವಚ್ಛತೆಯ ಕಾರ್ಯ ಭರದಿಂದ ಸಾಗಿದೆ.
ರಾಯಚೂರು ಜಿಲ್ಲೆಯಲ್ಲಿ ಕೃಷ್ಣಾ ನದಿ ಪ್ರವಾಹ ನಿಧಾನವಾಗಿ ಇಳಿಮುಖವಾಗುತ್ತಿದೆ. ಆದರೆ, ರಾಯಚೂರು ತಾಲ್ಲೂಕಿನ ಗುರ್ಜಾಪುರ ಬ್ರಿಜ್ ಕಂ ಬ್ಯಾರೇಜ್ ಮೇಲಿನ ನೀರು ಕಡಿಮೆಯಾಗಿಲ್ಲ. ಗುರ್ಜಾಪುರ ಹಾಗೂ ಕಾಡ್ಲೂರು ಸುತ್ತಮುತ್ತಲಿನ 20 ಗ್ರಾಮಗಳ ಜನ ಶಕ್ತಿನಗರ ಮಾರ್ಗವಾಗಿ ಯಾದಗಿರಿ ತೆರಳಬೇಕಾಗಿದೆ.
ಸೋಲಾಪುರ- ವಿಜಯಪುರ ಹೆದ್ದಾರಿ ಬಂದ್
ವಿಜಯಪುರ: ಮಹಾರಾಷ್ಟ್ರದ ಸೋಲಾಪುರ, ರಾಜ್ಯದ ವಿಜಯಪುರ ನಡುವೆ ರಾಷ್ಟ್ರೀಯ ಹೆದ್ದಾರಿಯು ಜಲಾವೃತಗೊಂಡಿದ್ದು, ವಾಹನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಕಳೆದ ಕೆಲ ದಿನಗಳಿಂದ ಸತತ ಮಳೆಯಾಗುತ್ತಿದ್ದು, ಸೀನಾ ನದಿಯು ಅಪಾಯ ಮಟ್ಟದಲ್ಲಿ ಹರಿಯುತ್ತಿದೆ. ದಕ್ಷಿಣ ಸೋಲಾಪುರ ತಾಲ್ಲೂಕಿನ ಹತ್ತೂರ ಗ್ರಾಮದ ಬಳಿ ಸೋಲಾಪುರ ಮತ್ತು ವಿಜಯಪುರ ರಾಷ್ಟ್ರೀಯ ಹೆದ್ದಾರಿಯ ಮೇಲೆ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ. ವಾಹನ ಸಂಚಾರ ಬುಧವಾರ ಆರಂಭವಾಗುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.