ADVERTISEMENT

ರಾಜ್ಯದಲ್ಲಿ ಇನ್ನಷ್ಟು ವೈದ್ಯಕೀಯ ಕಾಲೇಜು ಆರಂಭ: ಡಾ.ಶರಣಪ್ರಕಾಶ್ ಪಾಟೀಲ

ಸಮುದಾಯ ಆರೋಗ್ಯ ಕುರಿತ ರಾಜ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:56 IST
Last Updated 22 ನವೆಂಬರ್ 2025, 5:56 IST
<div class="paragraphs"><p>ಕಲಬುರಗಿಯ ಜಿಮ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಮುದಾಯ ಆರೋಗ್ಯ ಕುರಿತ ವೈದ್ಯರ ಸಮ್ಮೇಳನವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು. ಡಾ.ಮೀನಾಕ್ಷಿ, ಡಾ.ಆನಂದ ಕೃಷ್ಣನ್, ಡಾ.ರಂಗನಾಥ್, ಡಾ.ಅಜಯ್ ಕುಮಾರ್, ಡಾ.ಶಿವಕುಮಾರ್ ಸಿ.ಆರ್, ಡಾ.ಉಮೇಶ್ ಎಸ್.ಆರ್, ಡಾ.ಶರಣಬಸಪ್ಪ ಕ್ಯಾತನಾಳ ಭಾಗವಹಿಸಿದ್ದರು&nbsp; </p></div>

ಕಲಬುರಗಿಯ ಜಿಮ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಸಮುದಾಯ ಆರೋಗ್ಯ ಕುರಿತ ವೈದ್ಯರ ಸಮ್ಮೇಳನವನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಉದ್ಘಾಟಿಸಿದರು. ಡಾ.ಮೀನಾಕ್ಷಿ, ಡಾ.ಆನಂದ ಕೃಷ್ಣನ್, ಡಾ.ರಂಗನಾಥ್, ಡಾ.ಅಜಯ್ ಕುಮಾರ್, ಡಾ.ಶಿವಕುಮಾರ್ ಸಿ.ಆರ್, ಡಾ.ಉಮೇಶ್ ಎಸ್.ಆರ್, ಡಾ.ಶರಣಬಸಪ್ಪ ಕ್ಯಾತನಾಳ ಭಾಗವಹಿಸಿದ್ದರು 

   

ಪ್ರಜಾವಾಣಿ ಚಿತ್ರ

ಕಲಬುರಗಿ: ‘ಮೆರಿಟ್ ಇರುವ ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಸೀಟು ನೀಡುವುದು ಹಾಗೂ ಬಡ ರೋಗಿಗಳಿಗೆ ಉಚಿತ ಆರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಇನ್ನಷ್ಟು ಸರ್ಕಾರಿ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಲಾಗುವುದು’ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ ಪಾಟೀಲ ತಿಳಿಸಿದರು.

ADVERTISEMENT

ನಗರದ ಜಿಮ್ಸ್ ವೈದ್ಯಕೀಯ ಕಾಲೇಜಿನ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮುದಾಯ ಆರೋಗ್ಯ ಕುರಿತ ರಾಜ್ಯ ಮಟ್ಟದ ಸಮ್ಮೇಳನಕ್ಕೆ ಚಾಲನೆ ನೀಡಿದ ಅವರು, ‘ಎರಡು ಇಎಸ್‌ಐಸಿ ವೈದ್ಯಕೀಯ ಕಾಲೇಜು ಸೇರಿದಂತೆ 24 ಸರ್ಕಾರಿ ವೈದ್ಯಕೀಯ ಕಾಲೇಜುಗಳು ರಾಜ್ಯದಲ್ಲಿದ್ದು, ಹೊಸದಾಗಿ ಬಾಗಲಕೋಟೆ, ರಾಮನಗರ ಹಾಗೂ ಕನಕಪುರದಲ್ಲಿ ವೈದ್ಯಕೀಯ ಕಾಲೇಜುಗಳು ಆರಂಭವಾಗಲಿವೆ. ಇನ್ನಷ್ಟು ಹೊಸ ವೈದ್ಯಕೀಯ ಕಾಲೇಜಗಳ ಆರಂಭಕ್ಕೆ ಸಿದ್ಧತೆ ನಡೆದಿದೆ’ ಎಂದರು.

‘ನಾನು ವೈದ್ಯಕೀಯ ಶಿಕ್ಷಣ ಸಚಿವನಾಗಿ ಎರಡನೇ ಅವಧಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ಒಂದು ಪರಿಕಲ್ಪನೆ ಇಟ್ಟುಕೊಂಡು ಸರ್ಕಾರಿ ವೈದ್ಯ ಸೇವೆಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ನಾನು ಯಾವುದೇ ಕಾರ್ಪೊರೇಟ್ ಆಸ್ಪತ್ರೆಗಳ ವಿರೋಧಿಯಲ್ಲ. ಆದರೆ, ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಸರ್ಕಾರದ ವತಿಯಿಂದ ವೈದ್ಯಕೀಯ ಸೌಲಭ್ಯ ಕಲ್ಪಿಸುವುದು ನನ್ನ ಕರ್ತವ್ಯವಾಗಿದೆ. ಅದರ ಭಾಗವಾಗಿಯೇ ಕಲಬುರಗಿಯಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆ ಆರಂಭ, 100 ಹಾಸಿಗೆ ಇದ್ದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯನ್ನು 300 ಹಾಸಿಗೆಗೆ ಮೇಲ್ದರ್ಜೆಗೇರಿಸುವುದು, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಟ್ರಾಮಾ ಕೇರ್ ಸೆಂಟರ್, ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ, ಡಯಾಬಿಟಾಲಾಜಿ ಕೇಂದ್ರ ಆರಂಭಿಸಲಾಗುತ್ತಿದೆ’ ಎಂದು ಹೇಳಿದರು.

ರಾಜ್ಯದ ಎಲ್ಲ ಕೇಂದ್ರ ಸ್ಥಾನಗಳಲ್ಲಿ ನಿಮ್ಹಾನ್ಸ್ ಕೇಂದ್ರಗಳನ್ನು ಆರಂಭಿಸುವಂತೆ ಕೇಂದ್ರ ಆರೋಗ್ಯ ಸಚಿವರಿಗೆ ಸಲಹೆ ನೀಡಿದ್ದೇನೆ. ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ನಿಮ್ಹಾನ್ಸ್‌ನಂತಹ ಸಂಸ್ಥೆಗಳನ್ನು ಕಲಬುರಗಿ, ಮೈಸೂರಿನಲ್ಲಿ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಕಮ್ಯುನಿಟಿ ಮೆಡಿಸಿನ್ ವಿಭಾಗದ ಡಾ.ಆನಂದ ಕೃಷ್ಣನ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ಮಲೇರಿಯಾ, ಡೆಂಗಿ, ಚಿಕನ್‌ಗೂನ್ಯದಂತಹ ರೋಗಗಳು ಉತ್ಪತ್ತಿಯಾಗುತ್ತಿವೆ. ಇದಕ್ಕೆ ವೈದ್ಯರು ಹೆಚ್ಚಿನ ಆಸಕ್ತಿ ವಹಿಸಿ ತಪಾಸಣೆ ಮಾಡಿ ರೋಗಿಗಳನ್ನು ಗುಣಮುಕ್ತ ಮಾಡಬೇಕು’ ಎಂದು ಹೇಳಿದರು.

ಜಿಮ್ಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಗುರುರಾಜ್ ಎನ್.ಎ. ಮಾತನಾಡಿದರು.

ಇದೇ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಮಟ್ಟದಲ್ಲಿ ಅತಿ ಹೆಚ್ಚು ಸಾಧನೆ ಮಾಡಿದ ಡಾ.ಜಯಶ್ರೀ ಪಟ್ಟಣಕರ್, ಡಾ.ನಾಗರಾಜಾಚಾರಿ ಅಗಡಿ, ಡಾ.ಶೈಲಜಾ ಪಾಟೀಲ, ಡಾ.ಮೊಹಮ್ಮದ್ ವಸೀಮ್ ಫರಾಜ್ ಅನ್ಸಾರಿ, ಡಾ.ವಾಣಿ ಎಚ್. ಚಳಗೇರಿ, ಡಾ.ಡಿ. ಸುನಿಲ್ ಕುಮಾರ್ ಸೇರಿದಂತೆ 11 ವೈದ್ಯರಿಗೆ ಜೀವಮಾನದ ಸಾಧನೆಗಾಗಿ ಸನ್ಮಾನಿಸಲಾಯಿತು. 

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ, ಜಿಮ್ಸ್ ನಿರ್ದೇಶಜ ಡಾ.ಉಮೇಶ್ ಎಸ್.ಆರ್, ಜಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಸಿ.ಆರ್, ಸಮ್ಮೇಳನದ ಆಯೋಜಕರಾದ ಡಾ.ಅಜಯಕುಮಾರ್ ಜಿ., ಡಾ.ಮೀನಾಕ್ಷಿ ಎಂ. ದವಡೆ, ಡಾ.ರಮೇಶ್, ಡಾ.ಟಿ.ಎಸ್.ರಂಗನಾಥ್, ಡಾ.ಗಿರೀಶ್ ಬಿ. ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.