ಕಲಬುರಗಿ: ‘ಸೇಡಂ ಹಾಗೂ ವಾಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಗಳನ್ನು ನೋಡಿದರೆ ರಿಪಬ್ಲಿಕ್ ಆಫ್ ಕಲಬುರಗಿ ಎಂಬುದು ನಿಜವಾಗುತ್ತಿದೆ. ಕಲಬುರಗಿಗೆ ತನ್ನದೇ ಆದ ಕಾನೂನು ಇದ್ದು, ದೇಶ ಮತ್ತು ರಾಜ್ಯಕ್ಕೆ ಅನ್ವಯಿಸುವ ನ್ಯಾಯ, ನೀತಿ ಇಲ್ಲಿ ಅನ್ವಯಿಸುತ್ತಿಲ್ಲ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಕಿಡಿಕಾರಿದರು.
ಕಾಂಗ್ರೆಸ್ ಕಾರ್ಯಕರ್ತರ ಹಲ್ಲೆಯಿಂದ ನಗರದ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯ್ಯಾರಿ ಅವರನ್ನು ಬುಧವಾರ ಭೇಟಿಯಾದ ಬಳಿಕ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.
‘ಈ ಹಿಂದೆ ಜಿಲ್ಲೆಯ ಕಾಂಗ್ರೆಸ್ ಸಚಿವರು ಮತ್ತು ಮುಖಂಡರು ಬಿಜೆಪಿಯ ನಾಯಕರು ಹಾಗೂ ಕಾರ್ಯಕರ್ತರನ್ನು ಓಡಾಡಲು ಬಿಡುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದರು. ಈಗ ಅದನ್ನು ನಿಜ ಮಾಡಲು ಹೊರಟಿದ್ದಾರೆ. ನಾವೂ ಸುಮ್ಮನೆ ಕೂರುವುದಿಲ್ಲ. ಜಿಲ್ಲೆಯ ಎಸ್‌ಪಿ ಅವರಂತೂ ಏನೂ ಮಾಡುವುದಿಲ್ಲ. ಡಿಜಿ ಅವರನ್ನು ಕಂಡು, ಅವರಿಗೆ ದೂರು ಸಲ್ಲಿಸುತ್ತೇನೆ. ನಮ್ಮ ಕಾರ್ಯಕರ್ತರನ್ನು ರಕ್ಷಿಸುವ ಕೆಲಸ ಮಾಡುತ್ತೇವೆ’ ಎಂದರು.
‘ನೀರು ಪೂರೈಕೆಯಲ್ಲಿನ ತಾರತಮ್ಯ ಖಂಡಿಸಿ ವೀರಣ್ಣ ಅವರು ವಿಡಿಯೊವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಅದನ್ನು ನೋಡಿ ಕಾಂಗ್ರೆಸ್‌ನ ಪೃಥ್ವಿರಾಜ್ ಹಾಗೂ ಆತನ ಜತೆಗೆ ಇದ್ದವರು ವೀರಣ್ಣನ ಮೇಲೆ ಹಲ್ಲೆ ಮಾಡಿದ್ದಾರೆ. ಶೆಟರ್ ಬಾಗಿಲಿಗೆ ದೊಡ್ಡ ಕಲ್ಲಿನಿಂದ ಎತ್ತಿಹಾಕಿ ಮುರಿಯುತ್ತಿರುವ ವಿಡಿಯೊಗಳಿವೆ. ಇಲ್ಲಿಯವರೆಗೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ’ ಎಂದು ಆರೋಪಿಸಿದರು.
‘ಸೇಡಂನಲ್ಲಿ ಸಹ ಪುರಸಭೆ ಅಧ್ಯಕ್ಷ ಮತ್ತು ಮುಖ್ಯಾಧಿಕಾರಿ ಚರಂಡಿ ಸಂಬಂಧ ನಮ್ಮ ಪಕ್ಷದ ಕಾರ್ಯಕರ್ತರಾದ ತಂದೆ– ಮಗನನ್ನು ಕರೆಯಿಸಿಕೊಂಡು, ಹಲ್ಲೆ ಮಾಡಿಸಿದ್ದಾರೆ. ಅಧಿಕಾರಿಗಳ ವಿರುದ್ಧ ದೂರು ಕೊಡದಂತೆ ಹೆದರಿಸಿದ್ದು, ಮಂತ್ರಿಗಳ ಒತ್ತಡದಿಂದ ಪೊಲೀಸರೂ ಎಫ್‌ಐಆರ್ ಮಾಡಿಕೊಳ್ಳಲಿಲ್ಲ’ ಎಂದು ದೂರಿದರು.
ಶಾಸಕ ಬಸವರಾಜ ಮತ್ತಿಮಡು, ಗ್ರಾಮೀಣ ಘಟಕದ ಅಧ್ಯಕ್ಷ ಅಶೋಕ ಬಗಲಿ, ಮುಖಂಡರಾದ ಶಿವರಾಜ ಪಾಟೀಲ ರದ್ದೇವಾಡಗಿ, ಹರ್ಷಾನಂದ ಗುತ್ತೇದಾರ, ಪರಶುರಾಮ್ ಯಾದಗಿರಿ, ಬಸವರಾಜ, ಶೋಭಾ ಬಾಣಿ, ಸಂತೋಷ ಹಾದಿಮನಿ, ಅಂಬಾರಾಯ ಅಷ್ಟಗಿ, ಶಿವರಾಜ ಮೂಲಗೆ, ಶಿವು ಅಷ್ಟಗಿ ಉಪಸ್ಥಿತರಿದ್ದರು.
‘ರಾಜ್ಯ ಸರ್ಕಾರಕ್ಕೆ ಮಾನ–ಮರ್ಯಾದೆ ಇಲ್ಲ’
‘ರಾಜ್ಯ ಸರ್ಕಾರಕ್ಕೆ ನಾಚಿಕೆ ಮಾನ–ಮರ್ಯಾದೆ ಇಲ್ಲ. ನನ್ನನ್ನು ಐದು ತಾಸು ಕೂಡಿ ಹಾಕಿದ್ದರೂ ಇದುವರೆಗೂ ಪ್ರಕರಣ ದಾಖಲಿಸಲಿಲ್ಲ. ಅದೇ ನಮ್ಮ ಕಾರ್ಯಕರ್ತರು ಏನಾದರು ಮಾತನಾಡಿದರೆ ಗೂಂಡಾ ಕಾಯ್ದೆ ಅಡಿ ತಕ್ಷಣವೇ ಕೇಸ್ ಹಾಕುತ್ತಾರೆ’ ಎಂದು ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಗ್ಯಾರಂಟಿ ಬಿಟ್ಟರೆ ಬೇರೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ. ಜನರಿಗೆ ಮಕ್ಮಲ್ ಟೋಪಿ ಹಾಕಿ ಜನರ ರಕ್ತವನ್ನು ಹೋರುತ್ತಿದೆ. ಮುಂದೆ ಜನರೇ ಬುದ್ಧಿ ಕಲಿಸುತ್ತಾರೆ. ನಮ್ಮ ವಿರುದ್ಧ 40 ಪರ್ಸೆಂಟ್ ಎಂದೆಲ್ಲಾ ಆರೋಪ ಮಾಡಿದ್ದರು. ಯಾವುದೇ ಪುರಾವೆ ಕೊಡಲು ಆಗಲಿಲ್ಲ. ಈಗ ಅವರದ್ದೇ ಪಕ್ಷದ ಶಾಸಕರು ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಉತ್ತರಿಸಬೇಕು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.