ಕಮಲಾಪುರ: ರಾಜ್ಯ ಸರ್ಕಾರವು, ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಸಾಲ ಯೋಜನೆ ಅಡಿಯಲ್ಲಿ ರಾಜ್ಯದಲ್ಲಿ ಒಟ್ಟು 500 ಕರ್ನಾಟಕ ಪಬ್ಲಿಕ್ ಶಾಲೆ(ಕೆಪಿಎಸ್) ಶಾಲೆಗಳನ್ನು ಮಂಜೂರುಗೊಳಿಸಿದೆ. ಇದರಲ್ಲಿ ಕಲ್ಯಾಣ ಕರ್ನಾಟಕಕ್ಕೆ 94 ಶಾಲೆಗಳು ಮಂಜೂರಾಗಿವೆ.
ನವೆಂಬರ್‌ನಲ್ಲಿಯೇ ಮಕ್ಕಳ ದಾಖಲಾತಿ ಆರಂಭವಾಗಲಿದ್ದು, 2026–27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸೇವೆ ನೀಡಲಿವೆ. ಈ ಸಂಬಂಧ ಅಕ್ಟೋಬರ್ 15ರಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ವಿಶೇಷಾಧಿಕಾರಿ ಹಾಗೂ ಪದನಿಮಿತ್ತ ಶುಭಮಂಗಳಾ ಆರ್.ವಿ. ಅವರು ಆದೇಶ ಹೊರಡಿಸಿದ್ದಾರೆ.
ರಾಜ್ಯ ಸರ್ಕಾರದ ಆಯವ್ಯಯ ಅನುದಾನ ಹಾಗೂ ಏಷ್ಯನ್ ಡೆವಲಪಮೆಂಟ್ ಬ್ಯಾಂಕ್(ಏಡಿಬಿ) ಸಾಲ ಯೋಜನೆ ಅಡಿಯಲ್ಲಿ 500 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತಿಕರಿಸಲಾಗಿದೆ. ಸದ್ಯ ಕಲ್ಯಾಣ ಕರ್ನಾಟಕದ 94 ಸೇರಿ 474 ಶಾಲೆಗಳು ಆಯ್ಕೆಯಾಗಿವೆ. ಇನ್ನು 26 ಶಾಲೆಗಳ ಆಯ್ಕೆ ಪ್ರಕ್ರಿಯೆ ಬಾಕಿ ಇದೆ.
ಪ್ರತಿ ಶಾಲೆಗೆ ಅಂದಾಜು ₹ 4 ಕೋಟಿ ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯ, ಶಾಲಾ ಅವರಣದ ಅಗತ್ಯಕ್ಕೆ ತಕ್ಕಂತೆ ಕಟ್ಟಡ ನಿರ್ಮಾಣ, ಮಕ್ಕಳನ್ನು ಕರೆದೊಯ್ಯಲು ಉಚಿತ ಸಾರಿಗೆ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.
ಪೂರ್ವ ಪ್ರಾಥಮಿಕ ಶಿಕ್ಷಣದಿಂದ ಪಿಯುಸಿವರೆಗೆ ಒಂದೇ ಕ್ಯಾಂಪಸ್‌ನಲ್ಲಿ ವ್ಯಾಸಂಗ ಮಾಡಲು ಅವಕಾಶ ಕಲ್ಪಿಸಿಕೊಡುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಹೆಚ್ಚಿಸುವ ರಾಜ್ಯ ಸರ್ಕಾರವು, ಕರ್ನಾಟಕ ಪಬ್ಲಿಕ್ ಶಾಲೆಗಳನ್ನು(ಕೆಪಿಎಸ್) ಪ್ರಾರಂಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.