ADVERTISEMENT

‘ನಾಡು ಕಟ್ಟಲು ಶ್ರಮಿಸೋಣ’

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2018, 13:00 IST
Last Updated 4 ನವೆಂಬರ್ 2018, 13:00 IST
ಅಪ್ಪಾ ಪಬ್ಲಿಕ್ ಶಾಲೆಯ ಚಿಣ್ಣರು ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು
ಅಪ್ಪಾ ಪಬ್ಲಿಕ್ ಶಾಲೆಯ ಚಿಣ್ಣರು ರಾಜ್ಯೋತ್ಸವ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಪ್ರಸ್ತುತ ಪಡಿಸಿದರು   

ಕಲಬುರ್ಗಿ: ‘ಕನ್ನಡ ನಾಡು–ನುಡಿ ಕಟ್ಟಲು, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ನಾವೆಲ್ಲರೂ ಶ್ರಮಿಸೋಣ’ ಎಂದು ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು.

ನಗರದ ಅಪ್ಪಾ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಈಚೆಗೆ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕನ್ನಡ ನಾಡಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನಾವೆಲ್ಲರೂ ಸಂಕಲ್ಪದಿಂದ ದುಡಿಯಬೇಕು. ಕನ್ನಡಕ್ಕಾಗಿ ಕೈ ಎತ್ತು, ನಿನ್ನ ಕೈ ಕಲ್ಪವೃಕ್ಷವಾಗುತ್ತದೆ, ಬೆರಳೆತ್ತು ಗೋವರ್ಧನಗಿರಿ ಆಗುತ್ತದೆ, ಧ್ವನಿ ಎತ್ತು ಪಾಂಚಜನ್ಯ ಮೊಳಗುತ್ತದೆ ಎಂದು ಕುವೆಂಪು ಹೇಳಿದ್ದಾರೆ. ಅವರ ವಾಣಿಯನ್ನು ನಾವೆಲ್ಲರೂ ಪಾಲಿಸಬೇಕು’ ಎಂದರು.

ADVERTISEMENT

ಮಕ್ಕಳು ಪ್ರಸ್ತುತಪಡಿಸಿದ ಕನ್ನಡ ನಾಡಿನ ಗತ ವೈಭವವನ್ನು ಸಾರುವ ನೃತ್ಯ ರೂಪಕಗಳು ಎಲ್ಲರ ಮನ ಸೆಳೆದವು. ನಾಡಿನ ಹಿರಿಮೆ, ಗರಿಮೆ ಸಾರುವ ನಾಡಿನ ಸಾರ್ವಭೌಮರ, ಕವಿ ಪುಂಗವರ, ದಾಸರ, ಸಂತರ, ವಚನಕಾರರ ಜ್ಞಾನಪೀಠ ಪುರಸ್ಕೃತರ ಛದ್ಮವೇಷ ಧರಿಸಿದ ಮಕ್ಕಳು ಎಲ್ಲರನ್ನೂ ಆಕರ್ಷಿಸಿದರು.

ಜನಪದ ಕಲೆಗಳಾದ ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ, ಯಕ್ಷಗಾನ ವೇಷಭೂಷಣಗಳು ಮನಸೂರೆಗೊಂಡವು.

ಶ್ರೀ ಶರಣಬಸವ ವಿಶ್ವವಿದ್ಯಾಲಯದ ಪ್ರಾಣಿವಿಜ್ಞಾನ ವಿಭಾಗದ ಮುಖ್ಯಸ್ಥ ರಾಮಕೃಷ್ಣ ರೆಡ್ಡಿ, ಅಪ್ಪಾ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಶಂಕರಗೌಡ ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.