ADVERTISEMENT

ಜಿಲ್ಲೆಯ 1,713 ಕೊಠಡಿಗಳು ಶಿಥಿಲ

ಬಿರುಕು ಬಿಟ್ಟ ಗೋಡೆ, ಸೋರುವ ಸೂರಿನಡಿ ಜೀವಭಯದಲ್ಲೇ ವಿದ್ಯಾರ್ಥಿಗಳ ಕಲಿಕೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2025, 3:00 IST
Last Updated 4 ಅಕ್ಟೋಬರ್ 2025, 3:00 IST
ಅಫಜಲಪುರ ತಾಲ್ಲೂಕಿನ ಜೇವರ್ಗಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ
ಅಫಜಲಪುರ ತಾಲ್ಲೂಕಿನ ಜೇವರ್ಗಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಥಿಲಾವಸ್ಥೆಯಲ್ಲಿರುವ ಕಟ್ಟಡ   

ಕಲಬುರಗಿ: ಅದೊಂದು ಸರ್ಕಾರಿ ಶಾಲೆ. 1ರಿಂದ 7ನೇ ತರಗತಿ ತನಕ ಕಲಿಕೆ. ಜೋರು ಮಳೆಯಾದರೆ, ಮಕ್ಕಳಿಗೆ ರಜೆ. ಒಟ್ಟು 177 ಮಕ್ಕಳಿದ್ದು, ಆರು ಕೊಠಡಿಗಳಿವೆ. ಅದರಲ್ಲಿ ನಾಲ್ಕು ಕೋಣೆಗಳು ಬಿರುಕುಬಿಟ್ಟು ಸೋರುತ್ತಿವೆ...

ಇದು ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಜೇವರ್ಗಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದುಸ್ಥಿತಿ.

ಕೊಠಡಿಗಳ ಛತ್ತಿನ ಸಿಮೆಂಟ್‌ ಕಿತ್ತು, ಕಬ್ಬಿಣದ ಸರಳು ಕಾಣುತ್ತಿವೆ. ಗೋಡೆಗಳು ಬಿರುಕು ಬಿಟ್ಟು ಅಪಾಯ ಆಹ್ವಾನಿಸುತ್ತಿವೆ. ವಿದ್ಯಾರ್ಥಿಗಳನ್ನು ಕೊಠಡಿಗಳಲ್ಲಿ ಕೂರಿಸಲು ಹೆದರುವಷ್ಟು ಶಾಲಾ ಕೊಠಡಿಗಳು ಜೀರ್ಣಗೊಂಡಿವೆ. ಹೀಗಾಗಿ ಕೊಠಡಿಗಳ ಹೊರಗಿನ ಕಾರಿಡಾರ್‌ನಲ್ಲೇ ನಿತ್ಯ ಪಾಠ–ಪ್ರವಚನ ನಡೆಯುತ್ತಿದೆ. ವಿದ್ಯಾರ್ಥಿಗಳು ಪೂರ್ಣ ಪ್ರಮಾಣದಲ್ಲಿ ಶಾಲೆಗೆ ಬಂದರೆ, ಸದೃಢವಾದ ಮುಖ್ಯ ಶಿಕ್ಷಕರ ಕಚೇರಿಯಲ್ಲೂ ‍ಪಾಠ ಮಾಡೋದು ಅನಿವಾರ್ಯ. ಜಿಲ್ಲೆಯ ಶೇ 40ರಷ್ಟು ಶಾಲಾ ಕೊಠಡಿಗಳ ಸ್ಥಿತಿ ಇದನ್ನೇ ಹೋಲುವಂತಿದೆ.

ADVERTISEMENT

ಜಿಲ್ಲೆಯಲ್ಲಿ 1,752 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 298 ಪ್ರೌಢ ಶಾಲೆಗಳು ಸೇರಿ ಒಟ್ಟು 2,050 ಶಾಲೆಗಳಿವೆ. ಇದರಲ್ಲಿ ಪ್ರಾಥಮಿಕ ಶಾಲೆಗಳಲ್ಲಿ 11,174, ಪ್ರೌಢ ಶಾಲೆಗಳಲ್ಲಿ 3,392 ಸೇರಿ ಒಟ್ಟು 14,566 ಕೊಠಡಿಗಳಿವೆ. ಈ ಪೈಕಿ ಪ್ರಾಥಮಿಕ ಶಾಲೆಗಳ 1,346, ಪ್ರೌಢ ಶಾಲೆಗಳ 367 ಸೇರಿದಂತೆ 1,713 ಕೊಠಡಿಗಳು ಜೀರ್ಣಾವಸ್ಥೆಯಲ್ಲಿವೆ. ವಿದ್ಯಾರ್ಥಿಗಳ ಜೀವಕ್ಕೆ ಅಪಾಯವೊಡ್ಡುತ್ತಿವೆ.

ಇನ್ನುಳಿದಂತೆ ಪ್ರಾಥಮಿಕ ಶಾಲೆಗಳ 1,421, ಪ್ರೌಢಶಾಲೆಗಳ 356 ಸೇರಿದಂತೆ 1,777 ಕೊಠಡಿಗಳು ದೊಡ್ಡಮಟ್ಟದ ದುರಸ್ತಿ ಬೇಡುತ್ತಿವೆ. ಜೊತೆಗೆ ಪ್ರಾಥಮಿಕ ಶಾಲೆಗಳ 1,794, ಪ್ರೌಢಶಾಲೆಗಳ 621 ಸೇರಿದಂತೆ ಒಟ್ಟು 2,415 ಕೊಠಡಿಗಳು ಸಣ್ಣ ಪ್ರಮಾಣದ ದುರಸ್ತಿಗೆ ಕಾದುಕುಳಿತಿವೆ.

ಹೊಸ ಕೊಠಡಿಗೆ ಪ್ರಸ್ತಾವ:

ಜಿಲ್ಲೆ ವಿವಿಧ ತಾಲ್ಲೂಕುಗಳ ಪ್ರಾಥಮಿಕ ಶಾಲೆಗೆ 1,412 ಹಾಗೂ ಪ್ರೌಢಶಾಲೆಗಳಲ್ಲಿ 348 ಸೇರಿದಂತೆ ಒಟ್ಟು 1,760 ಹೆಚ್ಚುವರಿ ಹೊಸ ಕೊಠಡಿಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯಿಂದ ಪ್ರಸ್ತಾವ ಸಲ್ಲಿಸಲಾಗಿದೆ. ಈ ನಡುವೆ ಸರ್ಕಾರದ ವಿವಿಧ ಅನುದಾನದಡಿ ಜಿಲ್ಲೆಯಲ್ಲಿ 623 ಹೊಸ ಕೊಠಡಿಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.

ಅಫಜಲಪುರ ತಾಲ್ಲೂಕಿನ ಜೇವರ್ಗಿ (ಬಿ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಚಾವಣಿಯ ಸಿಮೆಂಟ್ ಉದುರಿ ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.