ADVERTISEMENT

‘ಇಷ್ಟಲಿಂಗ ಪೂಜೆಯಿಂದ ಒಂದೇ ಜನ್ಮದಲ್ಲಿ ಮುಕ್ತಿ’

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 14:42 IST
Last Updated 21 ಜುಲೈ 2019, 14:42 IST
ಕಲಬುರ್ಗಿಯ ಶಾಂತಲಿಂಗೇಶ್ವರ ಕಲ್ಯಾಣ ಮಂಪಟದಲ್ಲಿ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಿದ್ಧಾಂತ ಶಿಖಾಮಣಿ ಪ್ರವಚನದ ಸಂದರ್ಭದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು
ಕಲಬುರ್ಗಿಯ ಶಾಂತಲಿಂಗೇಶ್ವರ ಕಲ್ಯಾಣ ಮಂಪಟದಲ್ಲಿ ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರು ಸಿದ್ಧಾಂತ ಶಿಖಾಮಣಿ ಪ್ರವಚನದ ಸಂದರ್ಭದಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಭಾಗವಹಿಸಿದ್ದರು   

ಕಲಬುರ್ಗಿ: ‘ವೀರಶೈವ ಧರ್ಮದಲ್ಲಿ ಹೇಳಲಾದ ಇಷ್ಟಲಿಂಗ ಪೂಜೆಯು ಒಂದುಶ್ರೇಷ್ಠವಾದ ವ್ರತ ಹಾಗೂ ಒಂದೇ ಜನ್ಮದಲ್ಲಿ ಮುಕ್ತಿಯನ್ನು ಕೊಡುವಂಥದ್ದು’ ಎಂದು’ ಕಾಶಿ ಪೀಠದ ಪೀಠಾಧಿಪತಿ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ನಗರದ ಶಾಂತಲಿಂಗೇಶ್ವರ ಕಲ್ಯಾಣ ಮಂಪಟದಲ್ಲಿ ಆಷಾಢ ಮಾಸ ನಿಮಿತ್ತ ಸಾಮೂಹಿಕ ಇಷ್ಟಲಿಂಗ ಪೂಜೆ ಹಾಗೂ ಸಿದ್ಧಾಂತ ಶಿಖಾಮಣಿಯ ಆಧ್ಯಾತ್ಮಿಕ ಆಶೀರ್ವಚನ ನೀಡಿದ ಅವರು, ‘ನಮ್ಮ ದೇಶದ ಧಾರ್ಮಿಕ ಪರಂಪರೆಯಲ್ಲಿ ಅನೇಕ ವೃತಗಳಿವೆ. ಅವುಗಳಲ್ಲಿ ಬಹುತೇಕ ನೈಮಿತ್ತಕ ವೃತಗಳು. ಆದರೆ ಇಷ್ಟಲಿಂಗ ಪೂಜೆಯು ಮಾತ್ರ ನಿತ್ಯವೃತವಾಗಿರುತ್ತದೆ. ಇದಕ್ಕೆ ಶಿರೋವ್ರತ, ಪಾಶುಪತವ್ರತ ಹಾಗೂ ಮಹಾವ್ರತವೆಂಬುವುದಾಗಿಯೂ ಕರೆಯುತ್ತಾರೆ. ನಮ್ಮ ದೇಹದಲ್ಲಿ ಇರುವ ಎಲ್ಲ ಅವಯವಗಳಲ್ಲಿ ಶಿರಸ್ಸು ಹೇಗೆ ಶ್ರೇಷ್ಠವಾಗಿರುತ್ತದೆಯೋ ಅದರಂತೆ ಎಲ್ಲ ವ್ರತಗಳಲ್ಲಿ ಇದು ಶ್ರೇಷ್ಠವಾಗಿರುವುದರಿಂದ ಇದಕ್ಕೆ ಶಿರೋವ್ರತ ಎಂದು ಕರೆಯುವರು. ಈ ವ್ರತ ಆಚರಿಸುವುದರಿಂದ ಪಶುವಾದ ಜೀವನು ಯತಿಯಾದ ಶಿವನೊಂದಿಗೆ ಸಾಮರಸ್ಯವನ್ನು ಪಡೆಯುವುದರಿಂದ ಇದಕ್ಕೆ ಪಾಶುಪತವ್ರತ ಎಂದು ಕರೆಯುವರು’ ಎಂದರು.

‘ಎಲ್ಲಾ ವ್ರತಗಳಲ್ಲಿ ಮಹತ್ತರವಾದ ಕಾರಣ ಇದಕ್ಕೆ ಮಹಾವ್ರತವೆಂದು ಕರೆಯುವರು. ಈ ವ್ರತವನ್ನು ಬ್ರಹ್ಮಚಾರಿಗಳು, ಗೃಹಸ್ಥರು, ವಾನಪ್ರಸ್ಥರು, ಸನ್ಯಾಸಿಗಳು ಮತ್ತು ವಿಧವಾಸ್ತ್ರೀಯರು, ವಿಧುರ ಪುರುಷರು ಪಾಲಿಸಬಹುದು. ಅದರಂತೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಹಾಗೂ ಅಂತ್ಯಜರು ವ್ರತವನ್ನು ಪಾಲಿಸಲು ಅರ್ಹರಾಗಿರುತ್ತಾರೆ. ಹೀಗೆ ಯಾವುದೇ ವರ್ಣಾಶ್ರಮಗಳ ಭೇದಭಾವವಿಲ್ಲದೇ ಸರ್ವರಿಗೂ ಸಮಾನವಾದ ಹಕ್ಕನ್ನು ಕೊಟ್ಟ ಈ ಲಿಂಗಪೂಜೆ ಮಹಾವ್ರತವು ಸರ್ವ ಶ್ರೇಷ್ಠ ವ್ರತವಾಗಿರುವುದಲ್ಲದೇ ಒಂದೇ ಜನ್ಮದಲ್ಲಿ ಮುಕ್ತಿಯನ್ನು ಸಹ ಕೊಡುವಂಥದ್ದು ಎಂಬ ವಿಚಾರವನ್ನು ಆಗಮಗಳಲ್ಲಿ ಶಿವನೇ ಪಾರ್ವತಿಗೆ ಬೋಧಿಸಿದ್ದಾನೆ’ ಎಂದು ಹೇಳಿದರು.

ADVERTISEMENT

ಸೋಮವಾರ ಬೆಳಿಗ್ಗೆ 8ಕ್ಕೆಸರ್ವಧರ್ಮದವರು ಜಾತಿ ಭೇದವಿಲ್ಲದೇ ಎಲ್ಲ ಸಮುದಾಯದವರು ಇಷ್ಟಲಿಂಗ ಪೂಜೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗಿದೆ. ಎಲ್ಲರೂ ಒಗ್ಗೂಡಿ ಸಹಸ್ರ ಲಿಂಗಾರ್ಚನೆಯನ್ನು ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಹಮ್ಮಿಕೊಳ್ಳಲಾಗಿದೆ. ಎಲ್ಲರೂ ಇದರ ಪ್ರಯೋಜನೆಯನ್ನು ಪಡೆದುಕೊಳ್ಳಬೇಕು ಎಂದು ವೀರಭದ್ರ ಶಿವಾಚಾರ್ಯರು ತಿಳಿಸಿದರು.

ಹಿರಿಯ ಸಾಹಿತಿ ಡಾ. ಶಿವರಾಜ ಪಾಟೀಲ ಮಹಾಂತಪೂರ ಕಾಶಿಪೀಠದ ಪರಂಪರೆಯ ಬಗ್ಗೆ ವಿಸ್ತಾರವಾಗಿ ತಿಳಿಸಿದರು. ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಗೋಳಾದ ಚನ್ನಮಲ್ಲ ಶಿವಾಚಾರ್ಯರು, ಮಂದೇವಾಲ ಹಿಪ್ಪರಗಿಯ ಸಿದ್ದಲಿಂಗ ಶಿವಾಚಾರ್ಯರು, ಹರಸೂರ ಶ್ರೀಮಠದ ಸ್ವಾಮೀಜಿ, ಜೈನಾಪೂರದ ರೇಣುಕಾಶಿವಾಚಾರ್ಯರು, ಜಗದೇವಿ ಶರಣಮ್ಮ, ಮಹಾದೇವಿ ತಾಯಿ, ಶಿವಕುಮಾರ ಟೊಣ್ಣೆ, ಸಂಗಪ್ಪ ಪಾಳಾ, ಸುನೀಲ ರೇವೂರ, ಅಪ್ಪಾರಾವ ಬೆಣ್ಣೂರ, ಪತ್ರಕರ್ತ ಚಂದ್ರಕಾಂತ ಹಾವನೂರ, ಇದ್ದರು.

ಕಡಗಂಚಿಯ ಪಂಪಾಪತಿ ದೇವರು ಸ್ವಾಗತಿಸಿದರು. ಭದ್ರಯ್ಯ ಸ್ವಾಮಿ ಅವರಿಂದ ವೇದಘೋಷ ಜರುಗಿತು. ಕಲ್ಲಿನಾಥ ಸ್ವಾಮಿ, ಗುರುಲಿಂಗಯ್ಯ ಹಿತ್ತಲಶಿರೂರ ಸಂಗೀತ ಜರುಗಿತು. ಡಾ. ಶಿವಶರಣಪ್ಪ ಸರಸಂಬಾ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.