ADVERTISEMENT

ಬುದ್ಧ ವಿಹಾರದಲ್ಲಿ ಕಠಿಣ ವಸ್ತ್ರ ಸಮರ್ಪಣೆ ಸಡಗರ

ಬುದ್ಧ ವಿಹಾರದಲ್ಲಿ ‘ವರ್ಷಾವಾಸ’ ಮುಗಿಸಿದ ಬಿಕ್ಕುಗಳಿಗೆ ಗೌರವ ಅರ್ಪಣೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2025, 6:05 IST
Last Updated 6 ನವೆಂಬರ್ 2025, 6:05 IST
ಕಲಬುರಗಿಯ ಬುದ್ಧ ವಿಹಾರದಲ್ಲಿ ಕಠಿಣ ವಸ್ತ್ರ ಸಮರ್ಪಣೆಗೂ ಮುನ್ನ ಸಾಲುಗಟ್ಟಿ ಬಂದ ಬೌದ್ಧ ಬಿಕ್ಕುಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು
ಕಲಬುರಗಿಯ ಬುದ್ಧ ವಿಹಾರದಲ್ಲಿ ಕಠಿಣ ವಸ್ತ್ರ ಸಮರ್ಪಣೆಗೂ ಮುನ್ನ ಸಾಲುಗಟ್ಟಿ ಬಂದ ಬೌದ್ಧ ಬಿಕ್ಕುಗಳನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು   

ಕಲಬುರಗಿ: ನಗರದ ಹೊರವಲಯದ ಬುದ್ಧ ವಿಹಾರದಲ್ಲಿ ಬುಧವಾರ ‘ಕಠಿಣ ವಸ್ತ್ರ’ ಸಮರ್ಪಣೆ ಸಡಗರ ಮನೆ ಮಾಡಿತ್ತು.

ಕಳೆದ ಮೂರು ತಿಂಗಳಿಂದ ಬುದ್ಧ ವಿಹಾರದಲ್ಲೇ ನೆಲೆ ನಿಂತಿರುವ ಥಾಯ್ಲೆಂಡ್‌ನ 20ಕ್ಕೂ ಅಧಿಕ ಬಿಕ್ಕುಗಳು ಗೌರಿ ಹುಣ್ಣಿಮೆ ದಿನ ತಮ್ಮ ‘ವರ್ಷಾವಾಸ’ ಸಂಪನ್ನಗೊಳಿಸಿದರು. ಈ ಅಂಗವಾಗಿ ಬುದ್ಧ ವಿಹಾರದಲ್ಲಿ ಅನೇಕ ಧಾರ್ಮಿಕ ವಿಧಿವಿಧಾನಗಳು ಜರುಗಿದವು.

ವರ್ಷಾವಾಸದ ಅಂತ್ಯದ ಸಂಕೇತವಾಗಿ ಬೆಳಿಗ್ಗೆ 10 ಗಂಟೆ ಹೊತ್ತಿಗೆ ಬಿಕ್ಕುಗಳು ಸಾಲುಗಟ್ಟಿ ‘ಬುದ್ಧ’ನನ್ನು ಸ್ಮರಿಸುತ್ತ ಸಾಂಕೇತಿಕವಾಗಿ ಸಂಚಾರ ಆರಂಭಿಸಿದರು. ಅವರಿಗೆ ಬೌದ್ಧ ಧರ್ಮದ ಮಹಾಉಪಾಸಕರು, ಉಪಾಸಕರು ಹಣ್ಣು–ಹಂಪಲು, ಆಹಾರ ತಿನಿಸುಗಳನ್ನು ದಾನಗೈದರು. ಅದನ್ನು ತೆಗೆದುಕೊಂಡು ಹೋದ ಬಿಕ್ಕುಗಳು ಊಟ ಮಾಡಿದರು.

ADVERTISEMENT

ನಂತರ ಕಠಿಣ ವಸ್ತ್ರ ಸಮರ್ಪಣೆಯ ಆಚರಣೆಗಳು ಶುರುವಾದವು. ಮತ್ತೆ ಹಿರಿಯ ಬಿಕ್ಕುಗಳ ನೇತೃತ್ವದಲ್ಲಿ ಸಾಲಾಗಿ ಬಂದ ಎಲ್ಲ ಬಿಕ್ಕುಗಳನ್ನು ಉಪಾಸಕರು, ಅನುಯಾಯಿಗಳು ಬಗೆ–ಬಗೆಯ ಪುಷ್ಪದಳಗಳನ್ನು ಚೆಲ್ಲಿ, ಚಾಮರ ಹಿಡಿದು ಸ್ವಾಗತಿಸಿದರು. ಹಲವು ಶ್ವೇತವಸ್ತ್ರಧಾರಿ ಉಪಾಸಕರು ಅವರ ಹಿಂದೆ ಕಠಿಣ ವಸ್ತ್ರ (ಹೊಸಬಟ್ಟೆ), ತರಹೇವಾರಿ ಹಣ್ಣು–ಹಂಪಲು, ಬಿಕ್ಕುಗಳ ನಿತ್ಯದ ಬದುಕಿಗೆ ಅಗತ್ಯವಾದ ವಸ್ತುಗಳನ್ನು ಹಿಡಿದು ಬಿಕ್ಕುಗಳನ್ನು ಹಿಂಬಾಲಿಸಿದರು.

ಬಿಕ್ಕುಗಳು ಒಂದು ಬುದ್ಧ ವಿಹಾರಕ್ಕೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ಬೌದ್ಧ ಮಂದಿರ ಪ್ರವೇಶಿಸಿದರು.

ಬಳಿಕ ಅರ್ಧಗಂಟೆ ಕಾಲ ತ್ರಿಸರಣ, ಪಂಚಶೀಲ ಪಠಣ ನಡೆಯಿತು. ಹಿರಿಯ ಬಿಕ್ಕು ಥಾಯ್ಲೆಂಡ್‌ನ ಆಜಾನ್‌ ಫನ್‌ ಉಪದೇಶ ನೀಡಿದರು. ವರ್ಷಾವಾಸದ ಮಹತ್ವ, ಕಠಿಣ ವಸ್ತ್ರ ಸಮರ್ಪಣೆಯ ಹಿನ್ನೆಲೆ ಮೇಲೆ ಬೆಳಕು ಚೆಲ್ಲಿದರು. ಅವರು ನೀಡಿದ ಸಂದೇಶವನ್ನು ಜೊತೆಗಿದ್ದ ಇಬ್ಬರು ಬಿಕ್ಕುಗಳು ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಗೆ ಅನುವಾದಿಸಿದ್ದು ವಿಶೇಷವಾಗಿತ್ತು.

ಬಳಿಕ ಹಿರಿಯ ಬಿಕ್ಕುಗಳಿಗೆ ಮಹಾಉಪಾಸಕಿ, ಮಲ್ಲಿಕಾರ್ಜುನ ಖರ್ಗೆ ಅವರ ಪತ್ನಿ ರಾಧಾಬಾಯಿ ಖರ್ಗೆ ಸೇರಿದಂತೆ ಹಲವು ಉಪಾಸಕರು ‘ಕಠಿಣ ವಸ್ತ್ರ’ ಸಮರ್ಪಿಸಿದರು.

ಸಮಾರಂಭದಲ್ಲಿ ಆಶ್ರಯ ಫೌಂಡೇಷನ್‌ ಅಧ್ಯಕ್ಷ ಸಿದ್ಧಾರ್ಥ ಹಟ್ಟಿಯಂಬೈರ್‌,  ಶಾಂತಪ್ಪ ಸೂರನ್‌, ಭೀಮರಾವ್‌ ಟಿ.ಟಿ., ಮಹಾಂತಪ್ಪ ಸಂಗಾವಿ, ಸಿದ್ಧಾರ್ಥ ಬುದ್ಧ ವಿಹಾರ ಟ್ರಸ್ಟ್‌ ಆಡಳಿತಾಧಿಕಾರಿ ರಮೇಶ ಬೇಗಾರ, ಚಂದ್ರಶೇಖರ ದೊಡ್ಡಮನಿ, ಬಾಬು ವಂಟಿ ಸೇರಿದಂತೆ ನೂರಾರು ಉಪಾಸಕರು ಪಾಲ್ಗೊಂಡಿದ್ದರು.

ಥಾಯ್ಲೆಂಡ್‌ ಮತ್ತು ಭಾರತದ ನಡುವೆ ಬೌದ್ಧ ಧರ್ಮದ ಸಾಂಸ್ಕೃತಿಕ ಸಂಬಂಧಗಳು ಬೆಸೆದುಕೊಳ್ಳಲಿ. ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಇನ್ನಷ್ಟು ಗಟ್ಟಿಕೊಳ್ಳಲಿ
ಸಿರಿಲಕ್‌ ಮೈಥೈ ಅಧ್ಯಕ್ಷೆ ಎಂ.ಸೀಡ್ಸ್‌ ಫೌಂಡೇಷನ್‌
ಜೀವನದಲ್ಲಿ ಸಂಪೂರ್ಣವಾಗಿ ಬೌದ್ಧ ಧರ್ಮ ಅಳವಡಿಸಿಕೊಳ್ಳಬೇಕು. ಆ ಮೂಲಕ ವಿಶ್ವದಲ್ಲಿ ಶಾಂತಿ ಮತ್ತು ಸಹೋದರತೆ ಸ್ಥಾಪಿಸಬೇಕು
ಗಗನ ಮಲಿಕ್‌ ಅಧ್ಯಕ್ಷ ಗಗನ ಮಲಿಕ್ ಫೌಂಡೇಷನ್‌

‘ಅತ್ಯಂತ ಪವಿತ್ರ ಸಮಾರಂಭ’

ಧರ್ಮೋಪದೇಶ ನೀಡಿದ ಥಾಯ್ಲೆಂಡ್‌ನ ಹಿರಿಯ ಬಿಕ್ಕು ಆಜಾನ್‌ ಫನ್‌ ‘ಕಠಿಣ ವಸ್ತ್ರ ಸಮರ್ಪಣೆ ಅತ್ಯಂತ ಪವಿತ್ರ ಸಮಾರಂಭ. ಮೂರು ತಿಂಗಳ ವರ್ಷಾವಾಸ ಮುಗಿಸುವ ಬಿಕ್ಕುಗಳಿಗೆ ಸಲ್ಲುವ ಗೌರವ ಇದಾಗಿದೆ. ಬಿಕ್ಕುಗಳ ಅನುಯಾಯಿಗಳು ಮಹಾಉಪಾಸಕರು ಉಪಾಸಕರು ವರ್ಷಾವಾಸ ಅವಧಿಯಲ್ಲಿ ತಾಳ್ಮೆಯಿಂದ ಹೆಣೆದು ಕೊಡುವ ವಸ್ತ್ರವಾಗಿ ಗುರುತಿಸಿಕೊಂಡಿದೆ. ವರ್ಷಾವಾಸ ಸಾಧಕರಿಗೆ ಇಂಥ ಗೌರವ ದಕ್ಕುತ್ತದೆ’ ಎಂದರು.

ಏನಿದು ‘ವರ್ಷಾವಾಸ?’

ಪತ್ರಿ ವರ್ಷದ ಮಳೆ ಸುರಿಯುವ ಮೂರು ತಿಂಗಳು ಬೌದ್ಧಧರ್ಮದ ಬಿಕ್ಕುಗಳು ಸಂಚಾರ ಸ್ಥಗಿತಗೊಳಿಸಿ ಒಂದೆಡೆ ನೆಲೆ ನಿಲ್ಲುವ ಅವಧಿಯಾಗಿದೆ. ಧರ್ಮಪ್ರಚಾರದ ಅಂಗವಾಗಿ ಸಂಚರಿಸುವ ಬೌದ್ಧ ಬಿಕ್ಕುಗಳು ಈ ಅವಧಿಯಲ್ಲಿ ಪ್ರವಾಸ ತ್ಯಜಿಸಿ ತೀವ್ರತರ ಧ್ಯಾನ ಅಧ್ಯಯನದಲ್ಲಿ ತೊಡಗುತ್ತಾರೆ. ಮಳೆಗಾಲದಲ್ಲಿ ಅರಳುವ ಸಸ್ಯಗಳು ಹಾಗೂ ಪುಟಾಣಿ ಜೀವಿಗಳಿಗೆ ಹಾನಿಯಾಗದಂತೆ ತಡೆಯುವುದು ಇದರ ಉದ್ದೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.