ADVERTISEMENT

‘ಜನಕಲ್ಯಾಣಕ್ಕೆ ಒತ್ತು ನೀಡಿದ ರಾಷ್ಟ್ರನಾಯಕ ಖರ್ಗೆ’

ಪ್ರೊ.ಎಚ್‌.ಟಿ. ಪೋತೆ ಬರೆದ ಕೃತಿ ಬಿಡುಗಡೆ ಮಾಡಿದ ಪ್ರೊ. ಕೆ.ಇ. ರಾಧಾಕೃಷ್ಣ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 13:35 IST
Last Updated 13 ಆಗಸ್ಟ್ 2022, 13:35 IST
‘ಮಲ್ಲಿಕಾರ್ಜುನ ಖರ್ಗೆ ಜೀವನ ಕಥನ’ ಕೃತಿಯನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಪ್ರೊ.ಕೆ.ಇ. ರಾಧಾಕೃಷ್ಣ ಅವರು ಪುಸ್ತಕಗಳನ್ನು ತಲೆಯ ಮೇಲಿಟ್ಟುಕೊಂಡು ಗೌರವ ಸೂಚಿಸಿದರು. ಹಿರಿಯ ಪತ್ರಕರ್ತ ಎಸ್‌.ಆರ್‌.ಮಣೂರ, ಕೃತಿಯ ಕರ್ತೃ ಡಾ.ಎಚ್‌.ಟಿ.ಪೋತೆ, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಡಾ.ಶ್ರೀಶೈಲ ನಾಗರಾಳ, ಸುರೇಶ ಬಡಿಗೇರ ಇದ್ದರು
‘ಮಲ್ಲಿಕಾರ್ಜುನ ಖರ್ಗೆ ಜೀವನ ಕಥನ’ ಕೃತಿಯನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಪ್ರೊ.ಕೆ.ಇ. ರಾಧಾಕೃಷ್ಣ ಅವರು ಪುಸ್ತಕಗಳನ್ನು ತಲೆಯ ಮೇಲಿಟ್ಟುಕೊಂಡು ಗೌರವ ಸೂಚಿಸಿದರು. ಹಿರಿಯ ಪತ್ರಕರ್ತ ಎಸ್‌.ಆರ್‌.ಮಣೂರ, ಕೃತಿಯ ಕರ್ತೃ ಡಾ.ಎಚ್‌.ಟಿ.ಪೋತೆ, ಪ್ರೊ.ಮಲ್ಲೇಪುರಂ ಜಿ.ವೆಂಕಟೇಶ, ಡಾ.ಶ್ರೀಶೈಲ ನಾಗರಾಳ, ಸುರೇಶ ಬಡಿಗೇರ ಇದ್ದರು   

ಕಲಬುರಗಿ: ‘ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಚಿವರಾಗಿದ್ದ ವೇಳೆ ಜನಕಲ್ಯಾಣಕ್ಕೆ ಒತ್ತು ನೀಡಿದ ರಾಷ್ಟ್ರನಾಯಕರಾದರು. ಕೇಂದ್ರದ ಕಾರ್ಮಿಕ ಸಚಿವರಾಗಿದ್ದ ವೇಳೆ ಇಎಸ್‌ಐ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಜೊತೆಗೆ ವೈದ್ಯಕೀಯ ಶಿಕ್ಷಣಕ್ಕೆ ವೈದ್ಯಕೀಯ ಕಾಲೇಜುಗಳನ್ನು ಆರಂಭಿಸಿದರು’ ಎಂದು ಸಾಹಿತಿ ಪ್ರೊ. ಕೆ.ಇ.ರಾಧಾಕೃಷ್ಣ ತಿಳಿಸಿದರು.

ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕುಟುಂಬ ಪ್ರಕಾಶನದ ಸಹಯೋಗದಲ್ಲಿ ಶನಿವಾರ ನಡೆದ ಪ್ರೊ.ಎಚ್‌.ಟಿ. ಪೋತೆ ಅವರ ‘ಮಲ್ಲಿಕಾರ್ಜುನ ಖರ್ಗೆ ಜೀವನ ಕಥನ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಡಾ. ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕಾರ್ಮಿಕ ಹಾಗೂ ರೈಲ್ವೆ ಇಲಾಖೆ ಸಚಿವರಾಗಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕೆಲಸ ಮಾಡಿದರು. ಜನರ ಒಳಿತಿಗಾಗಿ ಹಲವು ಪ್ರಮುಖ ತೀರ್ಮಾನ ತೆಗೆದುಕೊಂಡರು’ ಎಂದು ಅವರು ತಿಳಿಸಿದರು.

ADVERTISEMENT

ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ‘ಮಲ್ಲಿಕಾರ್ಜುನ ಖರ್ಗೆ ಅವರು ಕರ್ನಾಟಕದಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿನಿಧಿ ಆಗಿದ್ದಾರೆ. ರಾಜ್ಯದ, ರಾಷ್ಟ್ರದ ಧೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಖರ್ಗೆ ಅವರ ವ್ಯಕ್ತಿತ್ವದ ಕುರಿತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಾ. ಜಿ. ಪರಮೇಶ್ವರ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿ ಹಲವು ಗಣ್ಯರ ಅನಿಸಿಕೆಗಳು ಈ ಕೃತಿಯಲ್ಲಿವೆ’ ಎಂದರು.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್, ‘10 ವರ್ಷಗಳ ಹಿಂದೆ ಹೈದರಾಬಾದ್ ಕರ್ನಾಟಕ ಭಾಗಕ್ಕೆ 371 (ಜೆ) ಸಂವಿಧಾನ ತಿದ್ದುಪಡಿ ಮೂಲಕ ಈ ಭಾಗಕ್ಕೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ಸಿಕ್ಕಿದೆ. ಮೈಸೂರು ವಿಶ್ವವಿದ್ಯಾಲಯ ಸೇರಿದಂತೆ ರಾಜ್ಯದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಶೇ 8ರಷ್ಟು ಮೀಸಲಾತಿಯನ್ನು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ನೀಡಬೇಕಿದೆ’ ಎಂದರು.

‘ಸಂವಿಧಾನ ತಿದ್ದುಪಡಿ ಆಗುವುದಕ್ಕೂ ಮುನ್ನ ಯುಪಿಎ ಸರ್ಕಾರ ರಾಜಕೀಯದ ವ್ಯವಹಾರಗಳ ಸಮಿತಿಯಿಂದ ಈ ಪ್ರಸ್ತಾವಕ್ಕೆ ಒಪ್ಪಿಗೆ ದೊರೆಯಬೇಕಿತ್ತು. ಸಮಿತಿ ಸದಸ್ಯರಾಗಿದ್ದ ಪ್ರಣವ್ ಮುಖರ್ಜಿ ಅವರು ಹೀಗೆ ಸಂವಿಧಾನ ತಿದ್ದುಪಡಿ ಮಾಡಿದರೆ ಹೇಗೆ ಎಂದು ತಕರಾರು ತೆಗೆದರು. ಆಗ ಮಧ್ಯಪ್ರವೇಶಿಸಿದ ಅಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಖರ್ಗೆ ಅವರೇ ಖುದ್ದಾಗಿ ಈ ವಿಚಾರ ಪ್ರಸ್ತಾಪಿಸಿದ್ದು, ಇದನ್ನು ಲೋಕಸಭೆಯಲ್ಲಿ ಚರ್ಚೆಗೆ ತನ್ನಿ ಎಂದು ಸಲಹೆ ನೀಡಿದರು. ಖರ್ಗೆ ಅವರು ವಿವಿಧ ಪಕ್ಷಗಳ ಮುಖಂಡರ ಮನೆಗೆ ಖುದ್ದು ತೆರಳಿ 371 (ಜೆ) ಸಂವಿಧಾನ ತಿದ್ದುಪಡಿ ಪ್ರಸ್ತಾವ ಬೆಂಬಲಿಸಲು ಮನವಿ ಮಾಡಿದ್ದರು. ಹಾಗಾಗಿ, ಎಲ್ಲರೂ ಒಕ್ಕೊರಲಿನಿಂದ ಇದಕ್ಕೆ ಒಪ್ಪಿಗೆ ನೀಡಿದರು’ ಎಂದು ಹೇಳಿದರು.

ಕೃತಿ ಕರ್ತೃ, ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ.ಎಚ್‌.ಟಿ.ಪೋತೆ, ಹಿರಿಯ ಪತ್ರಕರ್ತ ಎಸ್‌.ಆರ್. ಮಣೂರ, ಡಾ. ಶ್ರಿಶೈಲ ನಾಗರಾಳ, ಪ್ರೊ.ಎಸ್‌.ಎಲ್‌. ಪಾಟೀಲ ಮಾತನಾಡಿದರು.

*

ಅಂಬೇಡ್ಕರ್ ಅವರ ಬಳಿಕ ಮಾರ್ಗದರ್ಶನ ಮಾಡುವವರ ಅಗತ್ಯವಿತ್ತು. ಆ ಜವಾಬ್ದಾರಿಯನ್ನು ಖರ್ಗೆ ಅವರು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.
–ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ,ವಿಶ್ರಾಂತ ಕುಲಪತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.