ಎಫ್‌ಐಆರ್
ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಕೆಆರ್‌ಡಿಬಿ) ₹ 20 ಕೋಟಿ ಹಾಗೂ ರಾಜ್ಯ ಸರ್ಕಾರದ ₹ 5 ಕೋಟಿಯ (ಒಟ್ಟು ₹ 25 ಕೋಟಿ) ಟೆಂಡರ್‌ಗಳ ವರ್ಕ್ ಆರ್ಡರ್ (ಕಾರ್ಯಾದೇಶ) ಕೊಡಿಸುವುದಾಗಿ ನಂಬಿಸಿ ಉಪಗುತ್ತಿಗೆದಾರನಿಂದ ₹ 1.21 ಕೋಟಿ ಪಡೆದು ವಂಚಿಸಿದ ಆರೋಪದಡಿ ರಾಜ್ಯ ಸಚಿವರೊಬ್ಬರ ಅಳಿಯ ಸೇರಿ ಐವರ ವಿರುದ್ಧ ನಗರದ ಸೈಬರ್, ಆರ್ಥಿಕ ಮತ್ತು ಮಾದಕವಸ್ತು ತಡೆ (ಸೆನ್) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪಗುತ್ತಿಗೆದಾರ ನೀಡಿದ ದೂರಿನ ಅನ್ವಯ ಕಲಬುರಗಿಯ ಲಕ್ಷ್ಮಿಕಾಂತ ಕಟ್ಟಿಮನಿ, ರಾಯಚೂರಿನ ಸಂತೋಷ ನಾಯಕ, ಕಿರಣ್, ಬೆಂಗಳೂರಿನ ಶ್ರೀಧರ ಹಾಗೂ ಕೊಪ್ಪಳದ ರವಿ ಮಾಲಿಪಾಟೀಲ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ದೂರುದಾರರು ಜಲಜೀವನ್ ಮಿಷನ್ ಕಾಮಗಾರಿಗಳ ಉಪಗುತ್ತಿಗೆಯನ್ನು ಪಡೆದು ಅವುಗಳ ಕೆಲಸ ಮಾಡುತ್ತಿದ್ದರು. ಕೆಲ ವರ್ಷಗಳಿಂದ ಪರಿಚಯಸ್ಥನಾಗಿದ್ದ ಲಕ್ಷ್ಮಿಕಾಂತ, ತನಗೆ ದೊಡ್ಡ ದೊಡ್ಡ ಅಧಿಕಾರಿಗಳು, ರಾಜಕಾರಣಿಗಳ ಪರಿಚಯವಿದೆ. ಅವರ ಸಹಕಾರದಿಂದ ಬಹಳಷ್ಟು ಜನರಿಗೆ ₹ 50 ಕೋಟಿವರೆಗೆ ಟೆಂಡರ್‌ಗಳನ್ನು ಕೊಡಿಸಿದ್ದಾಗಿ ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಕೆಆರ್‌ಡಿಬಿಯ ₹ 20 ಕೋಟಿ ಹಾಗೂ ಸರ್ಕಾರಿ ಕಚೇರಿಗಳ ಕ್ಯಾಲೆಂಡರ್ ಪೂರೈಕೆಯ ₹ 5 ಕೋಟಿ ಟೆಂಡರ್‌ಗಳ ₹ 25 ಕೋಟಿಯ ವರ್ಕ್ ಆರ್ಡರ್ ಕೊಡಿಸುವುದಾಗಿ ಉಪಗುತ್ತಿಗೆದಾರನಿಗೆ ಆರೋಪಿಗಳು ನಂಬಿಸಿದ್ದರು. ಆರೋಪಿಗಳ ಬೇಡಿಕೆಯಂತೆ ಕಚೇರಿ ಖರ್ಚಿನ ₹ 1.21 ಕೋಟಿಯನ್ನು ಆರೋಪಿ ಸಂತೋಷ ನಾಯಕ ಖಾತೆಗೆ ಜಮಾ ಮಾಡಿದ್ದರು. ಕಟ್ಟಡ ಸಾಮಗ್ರಿಗಳು ಖರೀದಿಸಿದ್ದಾಗಿ ಬಿಲ್ ತೋರಿಸಿ ₹ 2.28 ಲಕ್ಷ ಪಡೆದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಬಹಳ ದಿನಗಳು ಕಳೆದರೂ ಉಪಗುತ್ತಿಗೆದಾರನಿಗೆ ವರ್ಕ್ ಆರ್ಡರ್ ಬರಲಿಲ್ಲ. ಆರೋಪಿಗಳಿಗೆ ಫೋನ್ ಮಾಡಿದಾಗ, ‘ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ನಿಮಗೆ ಖಂಡಿತವಾಗಿ ಟೆಂಡರ್ ಆರ್ಡರ್ ಕೊಡಿಸುತ್ತೇವೆ’ ಎಂದರು. ಟೆಂಡರ್‌ಗಾಗಿ ನೀಡಿದ ಹಣ ವಾಪಸ್ ಕೊಡುವಂತೆ ಒತ್ತಾಯಿಸಿದಾಗ ₹ 50 ಲಕ್ಷ ಚೆಕ್ ನೀಡಿದ್ದರು. ಹಣ ವರ್ಗಾವಣೆಗೆ ಯತ್ನಿಸಿದಾಗ ಆ ಚೆಕ್ ಬೌನ್ಸ್ ಆಗಿತ್ತು ಎಂದು ಹೇಳಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ದೂರುದಾರ, ‘ರಾಜಕಾರಣಿಗಳ ಹೆಸರು ಹೇಳಿಕೊಂಡು ಪರಿಚಯ ಮಾಡಿಕೊಂಡು ಆರೋಪಿಗಳು, ನನ್ನ ಜಿಎಸ್‌ಟಿ ನಂಬರ್ ಮೇಲೆ ವರ್ಕ್ ಆರ್ಡರ್ ಕೊಡಿಸುವುದಾಗಿ ನಂಬಿಸಿ ನನ್ನಿಂದ ಹಣ ಪಡೆದರು. ಐವರು ಆರೋಪಿಗಳಲ್ಲಿ ಸಚಿವರೊಬ್ಬರ ಅಳಿಯ ಸಹ ಇದ್ದಾರೆ. ಹಣ ವಾಪಸ್ ಕೊಡುವುದಾಗಿ ಆರೋಪಿಗಳು ಭರವಸೆ ಕೊಟ್ಟಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.