ಕಲಬುರಗಿ: ‘ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್‌ಡಿಬಿ) ಹಾಗೂ ಯಾದಗಿರಿ ಜಿಲ್ಲಾಡಳಿತ ವತಿಯಿಂದ ಜೂನ್ 14ರಂದು ಯಾದಗಿರಿಯಲ್ಲಿ ನಡೆಯುವ ಕೆಕೆಆರ್‌ಡಿಬಿಯ ‘ಆರೋಗ್ಯ ಆವಿಷ್ಕರ’ ಯೋಜನೆಯ ₹ 440 ಕೋಟಿ ಮೊತ್ತದ ವಿವಿಧ ಕಾಮಗಾರಿಗಳ ಅಡಿಗಲ್ಲು ಸಮಾರಂಭವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೆರವೇರಿಸುವರು’ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ತಿಳಿಸಿದರು.
‘ಅಂದು ಬೆಳಿಗ್ಗೆ 11ಕ್ಕೆ ಯಾದಗಿರಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರೂ ಆಗಿರುವ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ, ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಡಿ.ಸುಧಾಕರ್, ಡಾ.ಶರಣಪ್ರಕಾಶ ಪಾಟೀಲ, ಈಶ್ವರ್ ಖಂಡ್ರೆ, ರಹೀಂ ಖಾನ್, ಎನ್.ಎಸ್. ಬೋಸರಾಜು ಸೇರಿ ಹಲವರು ಪಾಲ್ಗೊಳ್ಳುವರು’ ಎಂದು ಗುರುವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಕಲ್ಯಾಣ ಕರ್ನಾಟಕ ಭಾಗದ 1.12 ಕೋಟಿ ಜನರಿಗೆ ಅನುಕೂಲ ಆಗುವಂತಹ ಯೋಜನೆಗಳನ್ನು ಕೆಕೆಆರ್‌ಡಿಬಿ ಹಮ್ಮಿಕೊಳ್ಳುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ₹1,800 ಕೋಟಿಯಷ್ಟು ಹಣವನ್ನು ಆರೋಗ್ಯಕ್ಕಾಗಿ ಖರ್ಚು ಮಾಡಲಾಗುವುದು. ಹೊಸ ಡಯಾಲಿಸಿಸ್ ಕೇಂದ್ರಗಳ ಜತೆಗೆ 33 ಹೊಸ ಕೆಕೆಆರ್‌ಡಿಬಿ ಹಾರ್ಟ್‌ಲೈನ್ ಆಂಬುಲೆನ್ಸ್‌ಗಳು ಸಾರ್ವಜನಿಕರ ಬಳಕೆಗೆ ಶೀಘ್ರವೇ ಲಭ್ಯವಾಗಲಿವೆ’ ಎಂದರು.
‘ನಂಜುಂಡಪ್ಪ ವರದಿ ಪ್ರಕಾರ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ, ಆರೋಗ್ಯ, ಉದ್ಯೋಗ ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಒತ್ತುಕೊಡಬೇಕು. ಹೀಗಾಗಿ, ಈ ಕ್ಷೇತ್ರಗಳಿಗೆ ಅಗತ್ಯವಾದಷ್ಟು ಅನುದಾನವನ್ನು ಕೆಕೆಆರ್‌ಡಿಬಿ ಒದಗಿಸುತ್ತಿದೆ’ ಎಂದರು.
‘ಕೊಪ್ಪಳದಲ್ಲಿ ₹ 100 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಯಚೂರಿನ ರಾಜೀವ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ₹ 50 ಕೋಟಿ ವೆಚ್ಚದಲ್ಲಿ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತಿದೆ. ಬೀದರ್ ಸರ್ಕಾರಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಘಟಕ ತೆರೆಯಲು ₹50 ಕೋಟಿ ಅನುದಾನ ತೆಗೆದಿರಿಸಲಾಗಿದೆ. ಕಲಬುರಗಿ ವೈದ್ಯಕೀಯ ಕಾಲೇಜಿನಲ್ಲಿ ಎಂಡೋಕ್ರೈನಾಲಜಿ ಕೇಂದ್ರವನ್ನು ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.