ಕಲಬುರಗಿ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್‌ಟಿಸಿ) ಸಿಬ್ಬಂದಿಯ ನಿವೃತ್ತ ಮೇಲ್ವಿಚಾರಕರೊಬ್ಬರ ವಿರುದ್ಧ ಜಾತಿ ನಿಂದನೆ ಆರೋಪದಡಿ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಕೆಆರ್‌ಟಿಸಿ ನಿವೃತ್ತ ನೌಕರ, ಎಸ್‌ಟಿ ನೌಕರ ಸಂಘ ಕಲಬುರಗಿ ವಿಭಾಗ–2ರ ಅಧ್ಯಕ್ಷ ಭರತ ದೈತಪ್ಪ ಅವರು ನೀಡಿದ ದೂರಿನ ಅನ್ವಯ ನಿವೃತ್ತ ಮೇಲ್ವಿಚಾರಕ ಸಂಗಮನಾಥ ರಬಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಗಮನಾಥ ಅವರು ಮೊಬೈಲ್‌ನಲ್ಲಿ ಮಾತನಾಡುವಾಗ ಅವಾಚ್ಯ ಪದಗಳನ್ನು ಬಳಸಿ, ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕಲಬುರಗಿ: ಆಳಂದ ಚೆಕ್‌ಪೋಸ್ಟ್‌ನಲ್ಲಿ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿ ಇರಿಸಿದ್ದ ಮಾಂಗಲ್ಯ ಸರ ಕದ್ದ ಆರೋಪದಡಿ ಸಬರ್ಬನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ವಾತಿ ಸಚಿನ್ ಅವರಿಗೆ ಸೇರಿದ ₹ 2 ಲಕ್ಷ ಮೌಲ್ಯದ ಮಾಂಗಲ್ಯ ಸರ ಕಳುವಾಗಿದೆ. ಸ್ವಾತಿ ಅವರು ತಾಯಿಯೊಂದಿಗೆ ಆಳಂದ ತಾಲ್ಲೂಕಿನ ಚಿತಲಿ ಗ್ರಾಮಕ್ಕೆ ತೆರಳಲು ಆಳಂದ ಚೆಕ್ ಪೋಸ್ಟ್ ಬಳಿ ಬಸ್‌ಗಾಗಿ ಕಾಯುತ್ತಿದ್ದರು. ಬ್ಯಾಗ್ ಬಿಟ್ಟು ಬೇಕರಿಗೆ ನೀರಿನ ಬಾಟಲ್ ತರಲು ತೆರಳಿದ್ದಾಗ ಕಳ್ಳರು, ಬ್ಯಾಗ್‌ನಲ್ಲಿದ್ದ ತಾಳಿಯನ್ನು ಕದ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋರಂಟಿ– ನಾಗನಹಳ್ಳಿ ನಡುವಿನ ರಸ್ತೆಯಲ್ಲಿ ಭಾನುವಾರ ರಾತ್ರಿ ಕಾರು ಡಿಕ್ಕಿಯಿಂದಾಗಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ.
ಗಾಣದೇವತೆ ಮಂದಿರ ಸಮೀಪದ ನಿವಾಸಿ ರಮೇಶ ಎಂಬಾತ ಸಾವನ್ನಪ್ಪಿದ್ದು, ಸಂಚಾರ ಪೊಲೀಸ್ ಠಾಣೆ– 1ರಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಸವಾರನು ನಾಗನಹಳ್ಳಿ ಕಡೆಯಿಂದ ಗಾಣದೇವತೆ ಮಂದಿರ ಸಮೀಪದ ಮನೆಯತ್ತ ತೆರಳುತ್ತಿದ್ದರು. ಎದುರಿನಿಂದ ವೇಗವಾಗಿ ಬಂದ ಕಾರು ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದನು. ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.