ADVERTISEMENT

‘ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಧ್ವನಿ ಎತ್ತೋಣ’

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ, ವರ್ಗಗಳ ಕಲ್ಯಾಣ ಸಂಸ್ಥೆ ಮಹಾಧಿವೇಶನ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2019, 10:49 IST
Last Updated 3 ಆಗಸ್ಟ್ 2019, 10:49 IST
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸಂಸ್ಥೆಯ ಸಾಮಾನ್ಯ ಸರ್ವಸದಸ್ಯರ ಮಹಾಧಿವೇಶನ ಉದ್ಘಾಟನೆ ಸಂದರ್ಭದಲ್ಲಿ ಸಂಘಾನಂದ ಬಂತೇಜಿ, ಸಂಸ್ಥೆಯ ಅಧ್ಯಕ್ಷದ ಕೆ.ದಾಸಪ್ರಕಾಶ್‌, ಚಿಕ್ಕನಂಜಪ್ಪ, ರಾಮಕೃಷ್ಣಪ್ಪ, ವೈ.ಬಸವರಾಜ, ಜೊ.ಗುರುಲಿಂಗಯ್ಯ, ಎಸ್‌.ಎಂ.ಮಹಾಲಿಂಗು, ಕೆ.ಎಸ್‌.ಜಯಪ್ಪ ಇದ್ದರು
ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸಂಸ್ಥೆಯ ಸಾಮಾನ್ಯ ಸರ್ವಸದಸ್ಯರ ಮಹಾಧಿವೇಶನ ಉದ್ಘಾಟನೆ ಸಂದರ್ಭದಲ್ಲಿ ಸಂಘಾನಂದ ಬಂತೇಜಿ, ಸಂಸ್ಥೆಯ ಅಧ್ಯಕ್ಷದ ಕೆ.ದಾಸಪ್ರಕಾಶ್‌, ಚಿಕ್ಕನಂಜಪ್ಪ, ರಾಮಕೃಷ್ಣಪ್ಪ, ವೈ.ಬಸವರಾಜ, ಜೊ.ಗುರುಲಿಂಗಯ್ಯ, ಎಸ್‌.ಎಂ.ಮಹಾಲಿಂಗು, ಕೆ.ಎಸ್‌.ಜಯಪ್ಪ ಇದ್ದರು   

ಕಲಬುರ್ಗಿ: ‘ಉದ್ದೇಶಪೂರ್ವಕವಾಗಿ ಜಾತಿ ನಿಂದನೆ ಕಿರುಕುಳ ಪ್ರಕರಣವನ್ನು ದಾಖಲಿಸಲು ಹೋಗಬಾರದು. ನಿಜವಾಗಿಯೂ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಆಗ ಮಾತ್ರ ಕಾನೂನು ಹೋರಾಟ ನಡೆಸಬೇಕು’ ಎಂದು ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿಯ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಚಿಕ್ಕನಂಜಪ್ಪ ಸಲಹೆ ನೀಡಿದರು.

ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಂಸ್ಥೆ ವತಿಯಿಂದ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಸಂಸ್ಥೆಯ ಸಾಮಾನ್ಯ ಸರ್ವಸದಸ್ಯರ ಮಹಾಧಿವೇಶನ ಹಾಗೂ ಡಾ.ಬಾಬಾಸಾಹೇಬ್‌ ಅಂಬೇಡ್ಕರ್‌ ಭವನದ ಶಂಕುಸ್ಥಾಪನೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದ ವಿವಿಧ ವಿದ್ಯುತ್‌ ಸರಬರಾಜು ಕಂಪನಿಗಳಲ್ಲಿ ದಲಿತ ಸಮುಯದಾಯದ ನೌಕರರ ಸಂಖ್ಯೆ ಮೊದಲು 6500 ಇತ್ತು. ಇದೀಗ 10,500ಕ್ಕೆ ಏರಿದ್ದು ಹೆಮ್ಮೆಯ ವಿಚಾರ. ಹಿರಿಯ ಅಧಿಕಾರಿಗಳು ಈ ನೌಕರರ ಬೇಕು ಬೇಡಿಕೆಗಳನ್ನು ಈಡೇರಿಸಬೇಕು. ಜೊತೆಗೆ ಸಂಘಟನೆಯನ್ನು ಬೆಳೆಸಲು ಅಗತ್ಯ ನೆರವು ನೀಡಬೇಕು. ಇತ್ತೀಚೆಗೆ ಐಟಿಐ ಮುಗಿಸಿಕೊಂಡು ಬಂದಿರುವ ಕೆಲ ದಲಿತ ಸಮುದಾಯದ ಯುವಕರು ಜಾತಿ ನಿಂದನೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡು ಬಂದಿದೆ. ಇದು ಸಲ್ಲದು. ನಮ್ಮ ನೆರಳನ್ನು ನೋಡಿಕೊಂಡು ನಾವೇ ಹೆದರಬೇಕು. ನಮ್ಮ ಪಾಡಿಗೆ ಕೆಲಸವನ್ನು ಮಾಡಿಕೊಂಡು ಹೋಗಬೇಕು. ಹಾಗೆಂದು ಸಂಸ್ಥೆಯಲ್ಲಿ ಜಾತಿ ಕಾರಣಕ್ಕಾಗಿ ನಡೆಯುವ ದೌರ್ಜನ್ಯವನ್ನು ಸಹಿಸಬೇಡಿ’ ಎಂದು ಕಿವಿಮಾತು ಹೇಳಿದರು.

ADVERTISEMENT

‘ಒಗ್ಗಟ್ಟಾಗಿ ಇದ್ದರೆ ಏನನ್ನು ಬೇಕಾದರೂ ಸಾಧಿಸಬಹುದು. ಚುನಾವಣೆಗಳು ಬಂದಾಗ ತಮ್ಮ ಅಭ್ಯರ್ಥಿಗಳ ಪರ ಕೆಲಸ ಮಾಡುವುದು ತಪ್ಪಲ್ಲ. ಚುನಾವಣೆ ಬಳಿಕವೂ ಹಳೆಯ ವೈಷಮ್ಯವನ್ನು ಮುಂದುವರಿಸಿಕೊಂಡು ಹೋಗಬಾರದು’ ಎಂದು ಸಲಹೆ ನೀಡಿದರು.

ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಕೆ. ದಾಸಪ್ರಕಾಶ್‌ ಮಾತನಾಡಿ, ‘ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್‌ ಖರ್ಗೆ ಅವರ ನೆರವಿನಿಂದ ಕಲಬುರ್ಗಿಯ ವಾಜಪೇಯಿ ಬಡಾವಣೆಯಲ್ಲಿ ಸಿ.ಎ. ನಿವೇಶನ ಲಭ್ಯವಾಗಿದೆ. ಅದರಲ್ಲಿ ₹ 12 ಕೋಟಿ ವೆಚ್ಚದಲ್ಲಿ ಡಾ.ಬಾಬಾಸಾಹೇಬ ಅಂಬೇಡ್ಕರ್‌ ಭವನ ನಿರ್ಮಿಸಲಾಗುವುದು. ಸಂಘದ ಸದಸ್ಯರು ಉದಾರ ದೇಣಿಗೆ ನೀಡಬೇಕು. ಭವನ ನಿರ್ಮಾಣಕ್ಕೆ ಹಣಕಾಸು ನೆರವು ನೀಡುವಂತೆ ಹೈದರಾಬಾದ್‌–ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೂ ಮನವಿ ಸಲ್ಲಿಸಲಾಗಿದೆ’ ಎಂದರು.

‘ವಿದ್ಯುಚ್ಛಕ್ತಿ ಮಂಡಳಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಂಸ್ಥೆಗೆ ಚುನಾವಣೆ ನಡೆಸದಿರಲು ನ್ಯಾಯಾಲಯ ಸೂಚನೆ ನೀಡಿದ್ದು, ಆ ಆದೇಶವನ್ನು ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಿದ್ದೇವೆ. ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ’ ಎಂದು ಹೇಳಿದರು.

ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ (ಕೆಪಿಟಿಸಿಎಲ್‌), ಗುಲಬರ್ಗಾ ವಿದ್ಯುತ್‌ ಸರಬರಾಜು ಕಂಪನಿ (ಜೆಸ್ಕಾಂ), ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪನಿ (ಹೆಸ್ಕಾಂ), ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ), ಮಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಮೆಸ್ಕಾಂ) ಹಾಗೂ ಚಾಮುಂಡೇಶ್ವರಿವಿದ್ಯುತ್‌ ಸರಬರಾಜು ಕಂಪನಿ (ಚೆಸ್ಕಾಂ)ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಹಾಧಿವೇಶನದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.