ADVERTISEMENT

ಕಲಬುರ್ಗಿ: 26ರ ಮುಷ್ಕರಕ್ಕೆ ಕೆಎಸ್‌ಆರ್‌ಟಿಸಿ ಬೆಂಬಲ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 11:14 IST
Last Updated 23 ನವೆಂಬರ್ 2020, 11:14 IST

ಕಲಬುರ್ಗಿ: ‘ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧ ಧೋರಣೆ, ರೈತ ವಿರೋಧಿ ನೀತಿಗಳನ್ನು ಖಂಡಿಸಿ ನ. 26ರಂದು ಕರೆ ನೀಡಿರುವ ರಾಷ್ಟ್ರ ಮುಷ್ಕರ ಬೆಂಬಲಿಸಿ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್ ವರ್ಕರ್ಸ್‌ ಫೆಡರೇಷನ್‌ ವತಿಯಿಂದ ಬೆಳಿಗ್ಗೆ 11ರಿಂದ ಸಂಜೆ 4ರವರೆಗೂ ಧರಣಿ ನಡೆಸಲಾಗುವುದು’ ಎಂದು ಫೆಡರೇಷನ್‌ ರಾಜ್ಯ ಘಟಕದ ಉಪಾಧ್ಯಕ್ಷ ಸಿದ್ಧ‍ಪ್ಪ ಪಾಲ್ಕಿ ತಿಳಿಸಿದರು.

‘ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ಈ ಮುಷ್ಕರಕ್ಕೆ ಕರೆ ನೀಡಿದೆ. ಬೆಂಗಳೂರು, ಕಲಬುರ್ಗಿ, ಹುಬ್ಬಳ್ಳಿ ಸೇರಿ ನಾಲ್ಕೂ ಸಾರಿಗೆ ವಿಭಾಗಗಳ ಕಚೇರಿಗಳ ಮುಂದೆ ಧರಣಿ ಕೈಗೊಳ್ಳಲಾಗುವುದು’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೇಂದ್ರವು ಕಾರ್ಮಿಕ ಕಾಯ್ದೆಗಳಿಗೆ ತಿದ್ದುಪಡಿ ತಂದು ಕಾರ್ಮಿಕರನ್ನು ಗುಲಾಮರನ್ನಾಗಿಸುವ ಹುನ್ನಾರ ನಡೆಸಿದೆ. ಕಾರ್ಮಿಕರ ಸಂಘಟನೆ ಮತ್ತು ಹೋರಾಟಗಳನ್ನು ದಮನ ಮಾಡುತ್ತಿದೆ. ಕಾರ್ಮಿಕರ ಹಕ್ಕುಗಳನ್ನು ನಾಶ ಮಾಡಿ, ಕಾರ್ಪೊರೇಟ್‌ ಸಂಸ್ಥೆಗಳಿಗೆ ಅಡಿಯಾಳು ಆಗುವಂತೆ ಮಾಡುವ ಪ್ರಯತ್ನ ಸರ್ಕಾರದಿಂದ ನಡೆದಿದೆ’ ಎಂದು ದೂರಿದರು.

ADVERTISEMENT

‘ದೇಶದ ಎಲ್ಲ ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣಕ್ಕೆ ಪ್ರಧಾನಿ ಹೆಚ್ಚಿನ ಮುತುವರ್ಜಿ ವಹಿಸುತ್ತಿದ್ದಾರೆ. ರೈಲು ನಿಲ್ದಾಣಗಳು, ವಿಮಾನ ನಿಲ್ದಾಣದಂಥ ದೊಡ್ಡ ಸಂಸ್ಥೆಗಳನ್ನೂ ಖಾಸಗಿಯವರಿಗೆ ನೀಡುತ್ತಿದ್ದಾರೆ. ಜೀವವಿಮಾ ಕಂಪನಿಗಳ ಶೇ 25ರಷ್ಟು ಬಂಡವಾಳವನ್ನು ಖಾಸಗಿಯವರಿಗೆ ಮಾರಾಟ ಮಾಡುವ ಚಿಂತನೆ ನಡೆದಿದೆ. ಇದು ಶ್ರಮಿಕ ವರ್ಗಕ್ಕೆ ಮಾರಕವಾಗಿ ಪರಿಣಮಿಸಲಿದೆ’ ಎಂದೂ ಅವರು ಹೇಳಿದರು.

ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುದೇವ ಯಳಸಂಗಿ ಮಾತನಾಡಿ, ‘ಕಾರ್ಮಿಕ ಮತ್ತು ರೈತ ವಿರೋಧಿ ತಿದ್ದುಪ‍ಡಿಗಳನ್ನು ಸರ್ಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು. ಆದಾಯ ತೆರಿಗೆ ಪಾವತಿಸದ ಎಲ್ಲ ಕುಟುಂಬಗಳಿಗೂ ತಿಂಗಳಿಗೆ ₹ 7,500 ನೆರವು ನೀಡಬೇಕು. ಅಗತ್ಯವಿರುವ ಎಲ್ಲ ಕುಟುಂಬಳಿಗೆ 10 ಕೆ.ಜಿ. ಉಚಿತ ಪಡಿತರ ನೀಡಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೌಕರರ 2020 ಜನವರಿಯಿಂದ ಜೂನ್‌ 20ರವರೆಗೆ ತುಟ್ಟಿಭತ್ಯೆ ರದ್ದುಪಡಿಸಿವೆ. ಈ ಸುತ್ತೋಲೆ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.

ಫೆಡರೇಷನ್‌ ಕಲಬುರ್ಗಿ ವಿಭಾಗ–1ರ ಅಧ್ಯಕ್ಷ ಸಿದ್ಧಪ್ಪ ಕಣ್ಣೂರ, ಪ್ರಧಾನ ಕಾರ್ಯದರ್ಶಿ ಮಹಮದ್‌ ಸಾದಿಕ್‌, ವಿಭಾಗ–2ರ ಅಧ್ಯಕ್ಷ ನಂದಪ್ಪ ಜಮಾದಾರ, ಪ್ರಧಾನ ಕಾರ್ಯದರ್ಶಿ ಅಬ್ದುಲ್‌ ಕಲೀಂ, ಎಐಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎಚ್‌.ಎಸ್. ಪತಕಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.