ADVERTISEMENT

ಕುಕನೂರ: ವಾಂತಿ-ಭೇದಿ ಪ್ರಕರಣ 12ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2024, 16:23 IST
Last Updated 20 ಆಗಸ್ಟ್ 2024, 16:23 IST
ಯಡ್ರಾಮಿ ತಾಲ್ಲೂಕಿನ ಕುಕನೂರ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಸಿದ್ದು ಪಾಟೀಲ ನೇತೃತ್ವದ ಆರೋಗ್ಯ ಇಲಾಖೆ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಮಾಹಿತಿ ಪಡೆಯಿತು
ಯಡ್ರಾಮಿ ತಾಲ್ಲೂಕಿನ ಕುಕನೂರ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿ ಡಾ. ಸಿದ್ದು ಪಾಟೀಲ ನೇತೃತ್ವದ ಆರೋಗ್ಯ ಇಲಾಖೆ ತಂಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಮಾಹಿತಿ ಪಡೆಯಿತು   

ಯಡ್ರಾಮಿ: ತಾಲ್ಲೂಕಿನ ಕುಕನೂರ ಗ್ರಾಮದಲ್ಲಿ ಮೂರು ದಿನಗಳಿಂದ ವಾಂತಿ–ಭೇದಿ ಪ್ರಕರಣಗಳು ಕಂಡುಬರುತ್ತಿದೆ. ಈ ಸಂಖ್ಯೆ 12ಕ್ಕೆ ಏರಿಕೆಯಾಗಿದ್ದು, ತಾಲ್ಲೂಕು ವೈದ್ಯಾಧಿಕಾರಿ ಡಾ. ಸಿದ್ದು ಪಾಟೀಲ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರಿಂದ ಮಾಹಿತಿ ಪಡೆದರು.

ನಂತರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ‘ಮೂರು ದಿನಗಳಿಂದ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಗಳು ಕಂಡು ಬಂದ ಕಾರಣ ನೀರು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವಾಂತಿ-ಭೇದಿ ಪ್ರರಣಗಳು ಹೆಚ್ಚಾಗಲು ನಿರ್ದಿಷ್ಟ ಕಾರಣ ಗೊತ್ತಾಗಿಲ್ಲ. ಗ್ರಾಮದ ಜನರಿಗೆ ಪೂರೈಸುತ್ತಿರುವ ಬಾವಿಯ ಕುಡಿಯುವ ನೀರು ಕಲುಷಿತಗೊಂಡಿರುವ ಸಂಶಯವಿದೆ. ಬಾವಿ ಮತ್ತು ಕೊಳವೆ ಬಾವಿ ಇತರೆ ಜಲಮೂಲಗಳ ನೀರಿನ ಮಾದರಿಯನ್ನು ಪರೀಕ್ಷಿಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ನಂತರ ನಿರ್ದಿಷ್ಟ ಕಾರಣ ಗೊತ್ತಾಗುತ್ತದೆ. ಮುಂಜಾಗೃತ ಕ್ರಮವಾಗಿ ಗ್ರಾಮಸ್ಥರು ಬಿಸಿ ನೀರಿನ ಜೊತೆಗೆ ತಾಜಾ ಆಹಾರ ಸೇವಿಸಬೇಕು’ ಎಂದು ಸೂಚಿಸಿದರು.

‘ಆಶಾ ಕಾರ್ಯಕರ್ತೆ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಗ್ರಾಮದ ಪ್ರತಿ ಮನೆಗೆ ತೆರಳಿ ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದರು. ಗ್ರಾಮ ಪಂಚಾಯಿತಿ ಪಿಡಿಒ ಜನರೊಂದಿಗೆ ಇದ್ದು ಜನರ ಸ್ಥಿತಿಗತಿಗಳ ಬಗ್ಗೆ ನಿಗಾ ಇಡುವುದರ ಜತೆಗೆ ಟ್ಯಾಂಕ್ ಸ್ವಚ್ಛತೆ, ಬ್ಲೀಚಿಂಗ್ ಪೌಡರ್ ಸಿಂಪಡಣೆ ಸೇರಿ ಮುಂಜಾಗೃತ ಕ್ರಮ ವಹಿಸಿದ್ದರು’ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ADVERTISEMENT

ಕುಕನೂರ ಗ್ರಾಮದಲ್ಲಿ ಮೂರು ದಿನಗಳಲ್ಲಿ 12 ಜನ ವಾಂತಿ-ಭೇದಿಯಿಂದ ಬಳಲಿ ಯಡ್ರಾಮಿ, ಕಲಬುರಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

‘ಏಕಾಏಕಿ ಮಲ-ಮೂತ್ರ ವಿಸರ್ಜನೆ ಆಂಭವಾಯಿತು. ನನಗೆ ಏನು ಆಗುತ್ತಿದೆ ಎಂಬುವುದೇ ತಿಳಿಯಲಿಲ್ಲ. ಇದರ ಜತೆಗೆ ವಾಂತಿ-ಭೇದಿ ಶುರು ಆಯಿತು. ಅಷ್ಟರಲ್ಲಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಬಳಿಕ ಈಗ ಸ್ವಲ್ಪ ಆರಾಮ ಆಗಿದೆ. ಇಬ್ಬರ ಸ್ಥಿತಿ ಗಂಭೀರವಿದೆ. ಅವರು ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಇದ್ದಾರಂತೆ’ ಎಂದು ವಾಂತಿ-ಭೇದಿ ಪೀಡಿತ ಸೋಮರಾಯ ಬಾಬು ಹೇಳಿದರು.

ವಿಷಯ ತಿಳಿಯುತ್ತಿದ್ದಂತೆ ಗ್ರಾಮದಲ್ಲಿ ಆರೋಗ್ಯ ಇಲಾಖೆ ತಂಡ ಬೀಡು ಬಿಟ್ಟಿದೆ. ಎಲ್ಲಾ ರೀತಿಯಿಂದ ಮುಂಜಾಗೃತ ಕ್ರಮ ವಹಿಸಲಾಗಿದೆ.
ಡಾ. ಸಿದ್ದು ಪಾಟೀಲ ತಾಲ್ಲೂಕು ವೈದ್ಯಾಧಿಕಾರಿ
ಗ್ರಾಮದಲ್ಲಿ ವಾಂತಿ-ಭೇದಿ ಕಾಣಿಸಿಕೊಂಡ ತಕ್ಷಣ ಎರಡು ನೀರಿನ ಟ್ಯಾಂಕ್ ಸ್ವಚ್ಛಗೊಳಿಸಲಾಗಿದೆ. ಸ್ವಚ್ಛತೆ ಸೇರಿದಂತೆ ಆರೋಗ್ಯ ಇಲಾಖೆ ಮತ್ತು ಗ್ರಾಮಸ್ಥರ ಜೊತೆಗೆ ಅವರ ಸಲಹೆಯಂತೆ ಎಲ್ಲಾ ರೀತಿಯ ಮುಂಜಾಗೃತಾ ಕ್ರಮ ತೆಗೆದುಕೊಳ್ಳಲಾಗಿದೆ.
ಪ್ರಕಾಶ ಪಿಡಿಒ ಕುಕನೂರ ಗ್ರಾ.ಪಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.