ADVERTISEMENT

‘ಜನರ ಬದುಕು ಸುಧಾರಿಸದೇ ಕಲ್ಯಾಣ ಆಗದು’

ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜನವರಿ 2023, 6:37 IST
Last Updated 11 ಜನವರಿ 2023, 6:37 IST
ಕಾಳಗಿ ಪಟ್ಟಣದಲ್ಲಿ ಮಂಗಳವಾರ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷದ ಕಾರ್ಯಕರ್ತರು ದೊಡ್ಡ ಹೂಮಾಲೆ ಹಾಕಿ ಬರಮಾಡಿಕೊಂಡರು
ಕಾಳಗಿ ಪಟ್ಟಣದಲ್ಲಿ ಮಂಗಳವಾರ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪಕ್ಷದ ಕಾರ್ಯಕರ್ತರು ದೊಡ್ಡ ಹೂಮಾಲೆ ಹಾಕಿ ಬರಮಾಡಿಕೊಂಡರು   

ಚಿಂಚೋಳಿ: ‘ಕಲ್ಯಾಣ ಕರ್ನಾಟಕ ಎಂದು ಕಾಗದದಲ್ಲಿ ಬದಲಿಸಿದರೆ ಪ್ರಯೋಜನವಿಲ್ಲ. ಈ ಭಾಗದ ಜನರ ಜೀವನ ಮಟ್ಟ ಸುಧಾರಿಸದ ಹೊರತು ನಾನು ಈ ಪ್ರದೇಶವನ್ನು ಹೈದರಾಬಾದ್‌ ಕರ್ನಾಟಕ ಎಂದೇ ಕರೆಯುವೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ತಿಳಿಸಿದರು.

ತಾಲೂಕಿನ ಚಿಮ್ಮನಚೋಡದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಮೂರ್ತಿ ಅನಾವರಣ ಮಾಡಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಹೈದರಾಬಾದ್‌ ಕರ್ನಾಟಕವನ್ನು ಕಲ್ಯಾಣ ಕರ್ನಾಟಕವಾಗಿ ಹೆಸರು ಬದಲಿಸಿದೆ. ಆದರೆ, ವಾಸ್ತವವಾಗಿ ಇಲ್ಲಿನ ಜನರ ಕಲ್ಯಾಣವಾಗಿಲ್ಲ. ಇದರಿಂದ ನಾನು ನಿಮ್ಮ ಭಾಗವನ್ನು ನಿಜವಾದ ರೂಪದಲ್ಲಿ ಕಲ್ಯಾಣ ನಾಡು ಆಗಿಸಲು ನಿಮ್ಮ ಬೆಂಬಲ ಅವಶ್ಯ’ ಎಂದರು.

‘65 ವರ್ಷ ದಾಟಿದ ಪ್ರತಿಯೊಬ್ಬರಿಗೂ ತಿಂಗಳ ₹5 ಸಾವಿರ ಮಾಸಾಶನ, ಅವಿವಾಹಿತ ಮಹಿಳೆಯರಿಗೆ ಹಾಗೂ ಅಂಗವಿಕಲರಿಗೆ ತಿಂಗಳ ₹2500 ಮಾಸಾಶನ ನೀಡುತ್ತೇವೆ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುತ್ತೇವೆ. ಇದಕ್ಕೆ ನೀವು ನಮ್ಮ ಪಕ್ಷಕ್ಕೆ ಒಂದು ಬಾರಿ ಪೂರ್ಣಪ್ರಮಾಣದ ಅಧಿಕಾರ ಕೊಡಿ’ ಎಂದರು.

ADVERTISEMENT

‘ರಾಜ್ಯದಲ್ಲಿ ಬ್ಯಾಕಲಾಗ್ ಹುದ್ದೆಗಳು ಭಾರಿ ಪ್ರಮಾಣದಲ್ಲಿ ಖಾಲಿಯಿವೆ. ರಾಜ್ಯ ಸರ್ಕಾರ ಇವುಗಳ ಭರ್ತಿಗೆ ಆಸಕ್ತಿ ತೋರುತ್ತಿಲ್ಲ. ಇದು ಪರಿಶಿಷ್ಟರಿಗೆ ರಾಜ್ಯ ಸರ್ಕಾರ ಮಾಡುತ್ತಿರುವ ಬಹುದೊಡ್ಡ ಅನ್ಯಾಯ’ ಎಂದರು.

ಶಾಸಕ ಬಂಡೆಪ್ಪ ಕಾಶೆಂಪುರ ಮಾತನಾಡಿ, ‘₹25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ ಕುಮಾರಸ್ವಾಮಿ ಅವರಿಗೆ ರೈತರ ಬಗ್ಗೆ ವಿಶೇಷ ಕಾಳಜಿಯಿದೆ. ಈ ಬಾರಿ ನಮ್ಮ ಸರ್ಕಾರ ಬಂದರೆ ಅಧಿಕಾರ ಸ್ವೀಕರಿಸಿದ 24 ಗಂಟೆಯಲ್ಲಿ ಮಹಿಳೆಯರ ಸ್ವಸಹಾಯ ಸಂಘಗಳ ಎಲ್ಲಾ ಸಾಲ ಮನ್ನಾ ಮಾಡುವೆ’ ಎಂದರು.

ಜೆಡಿಎಸ್ ಅಭ್ಯರ್ಥಿ ಸಂಜೀವನ ಯಾಕಾಪುರ, ಶಾಸಕ ವೆಂಕಟರಾವ ನಾಡಗೌಡ, ಪರಿಷತ್ ಸದಸ್ಯ ಭೋಜೆಗೌಡ, ಮಾಜಿ ಸಚಿವ ಎನ್.ಎಂ. ನಬಿ, ನೂರ್ ಅಹಮದ್, ಜಿಲ್ಲಾ ಅಧ್ಯಕ್ಷ ಸುರೇಶ ಮಹಾಗಾಂವ್‌ಕರ್, ವಿಷ್ಣುಕಾಂತ ಮೂಲಗೆ, ರವಿಶಂಕರರಡ್ಡಿ ಮುತ್ತಂಗಿ, ರಾಹುಲ್ ಯಾಕಾಪುರ, ಹಣಮಂತ ಪೂಜಾರಿ, ರಮೇಶ ಗೌಡ, ಎಸ್.ಕೆ ಮುಕ್ತಾರ್, ನಾಗೇಂದ್ರ ಗುರಂಪಳ್ಳಿ, ಬಸವರಾಜ ಸಿರ್ಸಿ, ಅಮೀರ್ ಅಲಿ, ಅಯ್ಯುಬ್ ಹೋಟಲ್, ಇಮ್ರಾನ್, ಶರಣಪ್ಪ ಮಾಳಗೆ, ಮಂಜೂರು ಅಹಮದ್ ಸೇರಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.