ADVERTISEMENT

ಕುವೆಂಪು ಜನಸಾಮಾನ್ಯರನ್ನು ತಲುಪಿದ ಕವಿ: ಕಿರಣ ಗಾಜನೂರ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 6:45 IST
Last Updated 4 ಆಗಸ್ಟ್ 2025, 6:45 IST
ಸತ್ಯಂ ಪಿಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಣ ಗಾಜನೂರ ಅವರನ್ನು ಭಾರತ ಜ್ಞಾನ,ವಿಜ್ಞಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಮುಳೆಗಾಂವ ಪುಸಕ್ತ ನೀಡಿ ಅಭಿನಂದಿಸಿದರು
ಸತ್ಯಂ ಪಿಯು ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರಣ ಗಾಜನೂರ ಅವರನ್ನು ಭಾರತ ಜ್ಞಾನ,ವಿಜ್ಞಾನ ಸಮಿತಿ ಅಧ್ಯಕ್ಷ ಶಿವಶರಣಪ್ಪ ಮುಳೆಗಾಂವ ಪುಸಕ್ತ ನೀಡಿ ಅಭಿನಂದಿಸಿದರು   

ಕಲಬುರಗಿ: ‘ಕುವೆಂಪು ಅವರು ಅಕ್ಷರ ಲೋಕವನ್ನು ದಾಟಿ ಸಾಮಾನ್ಯ ಜನರನ್ನೂ ತಲುಪಿದ ಕವಿ. ಆ ಕಾರಣಕ್ಕೆ ಅವರು ಜಗದ ಕವಿಯಾದವರು. ಅವರ ಚಿಂತನೆಯಲ್ಲಿ ಆಳವಾಗಿ ಬೇರೂರಿದ್ದ ವೈಚಾರಿಕ ದೃಷ್ಟಿಕೋನ ನಮ್ಮ ವರ್ತಮಾನದ ಹಲವು ಸಮಸ್ಯೆಗಳನ್ನು ಎದುರಿಸಲು ಬೇಕಾದ ಚೈತನ್ಯ ನೀಡುತ್ತದೆ’ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಾರ್ವಜನಿಕ ಆಡಳಿತ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ಕಿರಣ ಗಾಜನೂರು ಹೇಳಿದರು.

ನಗರದ ಸತ್ಯಂ ಪಿಯು ಕಾಲೇಜಿನಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯು ಭಾನುವಾರ ಆಯೋಜಿಸಿದ್ದ ‘ಕುವೆಂಪು ವಿಚಾರಕ್ರಾಂತಿ’ ಕೃತಿ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ನಾವು ಯಾಂತ್ರಿಕ ಬೆಳವಣಿಗೆಯನ್ನೇ ವೈಜ್ಞಾನಿಕತೆ ಎಂದು ತಪ್ಪಾಗಿ ಗ್ರಹಿಸುತ್ತಿದ್ದೇವೆ. ನಿಜವಾದ ವೈಜ್ಞಾನಿಕ ಚಿಂತನೆಗೆ ವೈಜ್ಞಾನಿಕ ಮನೋಧರ್ಮ ಅಗತ್ಯವಾಗಿದೆ. ಅದು ಮೂಡುವುದು ವಿಚಾರಕ್ರಾಂತಿಯಿಂದ ಮಾತ್ರ ಎಂಬುದು ಕುವೆಂಪು ಅವರ ನಿಲುವಾಗಿತ್ತು. ಯುವತಲೆಮಾರು ಮತಗಳು ಸೃಜಿಸುವ ಮತೀಯ ಭ್ರಾಂತಿಯಿಂದ ಆಚೆ ಬಂದು ಸ್ವತಂತ್ರವಾಗಿ ಯೋಚಿಸಲು ಸಾಧ್ಯವಾದಾಗ ಅದು ಸಾಧ್ಯವಾಗುತ್ತದೆ ಎಂದು ಕುವೆಂಪು ಪ್ರತಿಪಾದಿಸಿದ್ದರು’ ಎಂದರು.

ADVERTISEMENT

‘ಬರಗೂರು ರಾಮಚಂದ್ರಪ್ಪನವರು ಸಂಪಾದಿಸಿರುವ ‘ಕುವೆಂಪು ವಿಚಾರಕ್ರಾಂತಿ’ ಪುಸ್ತಕ ಸಂವಿಧಾನ ಓದಿನ ಚಳವಳಿಯಂತೆ ಒಂದು ಅರಿವಿನ ಚಳವಳಿಯಾಗಿ ಯುವಜನರನ್ನು ತಲುಪಬೇಕಿದೆ. ಇಲ್ಲಿರುವ ಎಲ್ಲಾ ಲೇಖನಗಳು ಕುವೆಂಪು ಕನಸಿನ ನಾಡನ್ನು ಕಟ್ಟಲು ವರ್ತಮಾನದ ಯುಜಜನತೆಗೆ ಪ್ರೇರಕಶಕ್ತಿಯಾಗಿ ನಿಲ್ಲಲಿವೆ’ ಎಂದರು.

ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ವೀರಶೆಟ್ಟಿ ಗಾರಂಪಳ್ಳಿ ಮಾತನಾಡಿ, ‘ಕುವೆಂಪು ತಮ್ಮ ಜೀವಮಾನವಿಡೀ ಯಾವುದನ್ನು ಸಾಹಿತ್ಯಿಕವಾಗಿ ಬರೆದರೋ ಅದರಂತೆಯೇ ವೈಯಕ್ತಿಕವಾಗಿ ಬದುಕಿದರು. ಹೇಗೆ ಬದುಕಿದರೋ ಅದನ್ನೇ ಸಾಹಿತ್ಯಿಕವಾಗಿ ಬರೆದರು. ಜೊತೆಗೆ ಅದನ್ನು ಸಾಮಾಜಿಕವಾಗಿ ಜಾರಿಗೆ ತರಲು ಪ್ರಯತ್ನಿಸಿದರು’ ಎಂದು ಅಭಿಪ್ರಾಯಪಟ್ಟರು.

ಪದವಿ ಕಾಲೇಜಿನ ಪ್ರಾಧ್ಯಾಪಕ ಶರಣಪ್ಪ ಸೈದಾಪುರ, ಶ್ರೀಶೈಲ ಘೂಳಿ, ಚಂದ್ರಶೇಖರ ಕಟ್ಟಿಮನಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಅಧ್ಯಕ್ಷ ಶಿವಶರಣಪ್ಪ ಮುಳೇಗಾಂವ ಮಾತನಾಡಿದರು. ಸಮುದಾಯ ಕಲಬುರಗಿಯ ಜಿಲ್ಲಾಧ್ಯಕ್ಷ ದತ್ತಾತ್ರಯ ಇಕ್ಕಳಕಿ ಆಶಯ ನುಡಿಗಳನ್ನಾಡಿದರು.

ಸತ್ಯಂ ಕಾಲೇಜಿನ ಪ್ರಾಚಾರ್ಯ ಬಿ.ಎಚ್.ನಿರಗುಡಿ, ಭಾರತ ಜ್ಞಾನ ವಿಜ್ಞಾನ ಸಮಿತಿಯ ರಾಜ್ಯ ಸದಸ್ಯರಾದ ನಾಗೇಂದ್ರಪ್ಪ ಅವರಾದಿ, ರಾಜ್ಯ ಸಹ ಕಾರ್ಯದರ್ಶಿಗಳಾದ ರವೀಂದ್ರ ರುದ್ರವಾಡಿ, ಜಿಲ್ಲಾ ಉಪಾಧ್ಯಕ್ಷರಾದ ಉಷಾ ಗೊಬ್ಬುರ್ ಹಾಗೂ ಶ್ರೀಶೈಲ್ ಮಾಡ್ಯಾಳ, ಪ್ರಭಾಕರ್ ಸಲಗರೆ, ರಮೇಶ್ ಮಾಡಿಯಾಳಕರ್, ಕೋದಂಡರಾಮಪ್ಪ ವಸ್ತ್ರದ, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷೆ ಲವಿತ್ರ ವಸ್ತ್ರದ ಭಾಗವಹಿಸಿದ್ದರು. ಬಿಜಿವಿಎಸ್ ಜಿಲ್ಲಾ ಕಾರ್ಯದರ್ಶಿ ರವಿಚಂದ್ರ ಅತನೂರ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.