ADVERTISEMENT

ಚಿಕ್ಕಂಡಿ ತಾಂಡಾ-ನಾಮುನಾಯಕ್ ತಾಂಡಾಕ್ಕೆ ಬಸ್ಸೆ ಇಲ್ಲ!

ಕಾಳಗಿ ಅಕ್ಕಪಕ್ಕದಲ್ಲೇ ಬಸ್ಸಿನ ಕೊರತೆ; ನಾಲ್ಕೈದು ಕಿ.ಮೀ ಕಾಲ್ನಡಿಗೆಯೆ ಗತಿ

ಗುಂಡಪ್ಪ ಕರೆಮನೋರ
Published 22 ಸೆಪ್ಟೆಂಬರ್ 2025, 6:03 IST
Last Updated 22 ಸೆಪ್ಟೆಂಬರ್ 2025, 6:03 IST
ಕಾಳಗಿ ಹೊರವಲಯದ ಚಿಕ್ಕಂಡಿತಾಂಡಾ
ಕಾಳಗಿ ಹೊರವಲಯದ ಚಿಕ್ಕಂಡಿತಾಂಡಾ   

ಕಾಳಗಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 78ವರ್ಷ ಕಳೆದರೂ ಕಾಳಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಿಕ್ಕಂಡಿ ತಾಂಡಾ ಮತ್ತು ನಾಮುನಾಯಕ್ ತಾಂಡಾ ಇನ್ನು ಬಸ್ಸಿನ ಸೌಕರ್ಯವೇ ಕಂಡಿಲ್ಲ.

ಕಾಳಗಿಯಲ್ಲಿ 2010ರಲ್ಲೆ ಸರ್ಕಾರಿ ಬಸ್ ಘಟಕ ಸ್ಥಾಪನೆಯಾಗಿದೆ. ಆದರೆ ಈ ತಾಂಡಾಗಳಿಗೆ ಮಾತ್ರ ಬಸ್ಸು ಓಡಾಡುತ್ತಿಲ್ಲ.

ಕಾಳಗಿಯಿಂದ ಕೇವಲ 4 ಕಿ.ಮೀ ಅಂತರದ ಚಿಕ್ಕಂಡಿತಾಂಡಾ ಮತ್ತು 3 ಕಿ.ಮೀ ಅಂತರದ ನಾಮುನಾಯಕ್ ತಾಂಡಾಕ್ಕೆ ರಸ್ತೆ ಸಹ ಇದೆ. ಈ ಎರಡೂ ತಾಂಡಾಗಳಲ್ಲಿ ಒಟ್ಟು 630 ಮತದಾರರು ಇದ್ದಾರೆ. ಚಿಕ್ಕಂಡಿತಾಂಡಾದಲ್ಲಿ ಸುಮಾರು 70 ಮನೆ, ನಾಮುನಾಯಕ್ ತಾಂಡಾದಲ್ಲಿ 50 ಮನೆಗಳಿವೆ. ಎರಡು ಕಡೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳಿವೆ. ಆದರೆ ಈ ಎರಡು ತಾಂಡಾಗಳಿಗೆ ಇಲ್ಲಿಯವರೆಗೆ ಸರ್ಕಾರಿ ಬಸ್ಸು ಸಂಚರಿಸಿಲ್ಲ ಎನ್ನುತ್ತಾರೆ ನಿವಾಸಿಗಳು.

ADVERTISEMENT

ಎರಡು ತಾಂಡಾದಲ್ಲಿ 1ರಿಂದ 5ನೇ ತರಗತಿವರೆಗೆ ಮಾತ್ರ ಶಾಲೆಯಿದ್ದು ಬಳಿಕ ಈ ವಿದ್ಯಾರ್ಥಿಗಳು ಹೆಚ್ಚಿನ ವ್ಯಾಸಂಗಕ್ಕೆ ಕಾಳಗಿ, ಕಲಬುರಗಿ ಕಡೆಗೆ ತೆರಳುತ್ತಾರೆ. ಏನೇ ಖರೀದಿ ಮಾಡಲು, ಕಚೇರಿ ಕೆಲಸಕ್ಕೆ ಮತ್ತು ಯಾವುದೇ ಊರು-ಕೇರಿಗೆ ಹೋಗಲು ಈ ತಾಂಡಾಗಳ ಜನರು ಕಾಳಗಿ ಮೂಲಕವೇ ಹೋಗಬೇಕು.

ಅದಲ್ಲದೇ 2024ರ ಲೋಕಸಭಾ ಚುನಾವಣೆ ತನಕವೂ ಚಿಕ್ಕಂಡಿ ತಾಂಡಾದ ಮತದಾರರು ದೂರದ ಕರಿಕಲ್ ತಾಂಡಾಕ್ಕೆ ಹಾಗೂ ನಾಮುನಾಯಕ್ ತಾಂಡಾದ ಮತದಾರರು ಲಕ್ಷ್ಮಣನಾಯಕ್ ತಾಂಡಾಕ್ಕೆ ಹೋಗಿ ಮತದಾನ ಮಾಡಿದ್ದಾರೆ.

ಈಗಷ್ಟೇ ಪಟ್ಟಣ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ಚಿಕ್ಕಂಡಿ ತಾಂಡಾದಲ್ಲೇ ಮತದಾನ ಕೇಂದ್ರ ಸ್ಥಾಪನೆಯಾಗಿದೆ. ಆದರೆ ನಾಮುನಾಯಕ್ ತಾಂಡಾದ ಜನರು ಈ ಬಾರಿ ಲಕ್ಷ್ಮಣನಾಯಕ್ ತಾಂಡಾದ ಬದಲಾಗಿ ಚಿಕ್ಕಂಡಿತಾಂಡಾಕ್ಕೆ ಬಂದು ಮತ ಚಲಾಯಿಸಿದ್ದಾರೆ. ನಿತ್ಯ ಎಲ್ಲದಕ್ಕೂ ಕಾಳಗಿ ಪಟ್ಟಣದ ಕಡೆಗೆ ಮುಖಮಾಡುವ ಈ ಎರಡು ತಾಂಡಾಗಳ ಜನರಿಗೆ ಬಸ್ಸಿನ ಸೇವೆ ಮರೀಚಿಕೆಯಾಗಿದೆ.

‘ಸ್ಥಿತಿವಂತರು ತಮ್ಮ ಸ್ವಂತ ವಾಹನಗಳಲ್ಲಿ ಸಂಚರಿಸುತ್ತಿದ್ದರೆ, ಸಾಮಾನ್ಯರು ಟಂಟಂ, ಆಟೊಗಳಲ್ಲಿ ಪ್ರಯಾಣಿಸುವ ಪರಿಸ್ಥಿತಿ ಇದೆ. ಆದರೆ ಬಡವರು ಕಾಲ್ನಡಿಗೆಯನ್ನೆ ಅವಲಂಬಿಸಿದ್ದಾರೆ. ಅಲ್ಲದೆ ಸಾಕಷ್ಟು ಬಾರಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಬೈಕ್ ಅಪಘಾತಕ್ಕೆ ಒಳಗಾಗಿದ್ದಾರೆ. ಕೂಡಲೇ ಬಸ್ಸಿನ ವ್ಯವಸ್ಥೆ ಕಲ್ಪಿಸಬೇಕು’ ಎಂದು ವಿಶ್ವನಾಥ ಜಾಧವ, ಅರವಿಂದ ರಾಠೋಡ, ದಿನೇಶ ಜಾಧವ ಆಗ್ರಹಿಸಿದ್ದಾರೆ.

ಶಾಸಕರಿಗೆ ಕೂಡಲೇ ನಮ್ಮ ಎರಡು ತಾಂಡಗಳಿಗೆ ಸೂಕ್ತ ಬಸ್ಸ್ ವ್ಯವಸ್ಥೆ ಕಲ್ಪಿಸಿಕೊಡಲು ಮನವಿ ಪತ್ರ ಸಲ್ಲಿಸಿ ಒತ್ತಡ ಹೇರುತ್ತೇವೆ
ಮಾಣಿಕ ಜಿ. ಜಾಧವ ಮುಖಂಡ ಚಿಕ್ಕಂಡಿತಾಂಡಾ
ನಮ್ಮ ತಾಂಡಕ್ಕೆ ಬಸ್ಸಿನ ಸೌಲಭ್ಯವಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಮಹಿಳೆಯರು ಸೇರಿದಂತೆ ಜನರು ಆಟೊ ಟಂಟಂ ಬೈಕ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಇನ್ನೂ ಕೆಲವರು ನಡೆದುಕೊಂಡು ಹೋಗುತ್ತಾರೆ
ಅನೀಲ ಚಿನ್ನರಾಠೋಡ ಯುವಕ ನಾಮುನಾಯಕ್ ತಾಂಡಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.