ADVERTISEMENT

'ಮಣ್ಣು ಸಂರಕ್ಷಣೆಗೆ ಬೇಕಿದೆ ಇಚ್ಛಾಶಕ್ತಿ'

ಮಣ್ಣು ತಪಾಸಣೆಗೆ ಮುಂದೆ ಬಾರದ ಅನ್ನದಾತರು; ಶೇ 82ರಷ್ಟು ಗುರಿ ಸಾಧನೆ

ಓಂಕಾರ ಬಿರಾದಾರ
Published 11 ಡಿಸೆಂಬರ್ 2023, 6:52 IST
Last Updated 11 ಡಿಸೆಂಬರ್ 2023, 6:52 IST
ಕಲಬುರಗಿಯ ಕೋಟನೂರ (ಡಿ) ಬಳಿ ಇರುವ ಮಣ್ಣು ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಮಣ್ಣು ತಪಾಸಣೆ ಮಾಡುತ್ತಿರುವ ಸಿಬ್ಬಂದಿ
–ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್
ಕಲಬುರಗಿಯ ಕೋಟನೂರ (ಡಿ) ಬಳಿ ಇರುವ ಮಣ್ಣು ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಮಣ್ಣು ತಪಾಸಣೆ ಮಾಡುತ್ತಿರುವ ಸಿಬ್ಬಂದಿ –ಪ್ರಜಾವಾಣಿ ಚಿತ್ರ/ ತಾಜುದ್ದೀನ್ ಆಜಾದ್   

ಕಲಬುರಗಿ: ಅಸಮರ್ಪಕ ರಸಾಯನಿಕ ಗೊಬ್ಬರ ಬಳಕೆ, ಜಮೀನುಗಳಿಗೆ ಅಧಿಕ ಪ್ರಮಾಣದ ನೀರು ಹರಿಸುವುದು, ಹೆಚ್ಚು ಪ್ರಮಾಣದ ಕೀಟನಾಶಗಳನ್ನು ಬಳಸುವುದು ಹಾಗೂ ಮಿಶ್ರ ಬೆಳೆ ಮಾಡದೆ ಒಂದೇ ತೆರನಾದ ಬೆಳೆ ಬೆಳೆಯುವುದರಿಂದ ದಿನದಿಂದ ದಿನಕ್ಕೆ ಭೂಮಿಯ ಫಲವತ್ತತೆ ತೀವ್ರ ಕೊರತೆ ಉಂಟಾಗಿ ಇಳುವರಿ ಪ್ರಮಾಣ ಕಡಿಮೆಯಾಗುತ್ತಿದೆ.

ಭೂಮಿಯ ಮಣ್ಣಿನ ಆರೋಗ್ಯ ಕಾಪಾಡುವ ಮೂಲಕ ಸುಸ್ಥಿರ ಬೆಳೆ ಬೆಳೆಯಲು ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗೂ ರಾಷ್ಟ್ರೀಯ ಆಹಾರ ಭದ್ರತಾ ಅಭಿಯಾನ ಅಡಿಯಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಮಣ್ಣು ಆರೋಗ್ಯ ತಪಾಸಣಾ ಪ್ರಯೋಗಾಲಯ ಸ್ಥಾಪನೆ ಮಾಡಿ, ರೈತರ ಜಮೀನಿನಲ್ಲಿರುವ ಮಣ್ಣು ಮಾದರಿ ಸಂಗ್ರಹಿಸಿ ಅದರಲ್ಲಿರುವ ಅಂಶಗಳ ಮೇಲೆ ಕೃಷಿ ಬೀಜ ಹಾಗೂ ರಸಗೊಬ್ಬರ ಹಾಕಲು ಸಲಹೆ ನೀಡುತ್ತಿದೆ.

ಜಿಲ್ಲಾ ಕೃಷಿ ಇಲಾಖೆಯಿಂದ ನಗರದ ಕೋಟನೂರ (ಡಿ) ರಸ್ತೆಯಲ್ಲಿ ಮಣ್ಣು ಆರೋಗ್ಯ ಪರೀಕ್ಷಾ ಪ್ರಯೋಗಾಲಯ ಇದ್ದು, ಅಲ್ಲಿ ಸರ್ಕಾರ ನಿಗದಿ ಪಡಿಸಿದ ಗುರಿಯಷ್ಟು ರೈತ ಸಂಪರ್ಕ ಕೇಂದ್ರಗಳಿಂದ ತಂದು ಸ್ಯಾಂಪಲ್‌ಗಳನ್ನು ಟೆಸ್ಟ್‌ ಮಾಡಿ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್‌ ವಿತರಣೆ ಮಾಡಲಾಗುತ್ತಿದೆ.

ADVERTISEMENT

ಮಣ್ಣು ತಪಾಸಣೆ ಆಸಕ್ತಿ ವಹಿಸದ ರೈತರು:

ಜಿಲ್ಲೆಯಲ್ಲಿ ಸುಮಾರು 7 ಲಕ್ಷಕ್ಕೂ ಅಧಿಕ ರೈತರು ಇದ್ದಾರೆ. ಆದರೆ, ಬಹುತೇಕರಿಗೆ ಮಣ್ಣಿನ ಸಂರಕ್ಷಣೆ, ಮಣ್ಣು ಪರೀಕ್ಷೆಯ ಮಾಹಿತಿ ಹಾಗೂ ಜಾಗೃತಿ ಕೊರತೆಯಿಂದ ತಪಾಸಣೆಗೆ ಮಾತ್ರ ರೈತರು ಮುಂದೆ ಬರುತ್ತಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ನಡೆಸುವ ಪರೀಕ್ಷೆಯನ್ನು ಬಿಟ್ಟರೆ, ರೈತರೇ ಸ್ವಯಂ ಪ್ರೇರಿತರಾಗಿ ಮಣ್ಣಿನ ಪರೀಕ್ಷೆಗೆ ಮುಂದಾಗುವುದು ಅತಿ ವಿರಳವಾಗಿದೆ.

ಕೇವಲ ಬೆರಳೆಣಿಯಷ್ಟು ರೈತರು ಮಾತ್ರ ಸ್ವಯಂ ಪ್ರೇರಿತವಾಗಿ ತಪಾಸಣೆ ಮಾಡಿ ಇಲಾಖೆ ಸಲಹೆ ಮೇರೆಗೆ ಸಮತೋಲಿತ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಮಣ್ಣಿನ ಪರೀಕ್ಷೆಯ ಮಹತ್ವದ ಬಗ್ಗೆ ಅಧಿಕಾರಿಗಳು ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗುತ್ತಿಲ್ಲ. ಆದ್ದರಿಂದ ಅದರ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯಿಂದ ಸಂಚಾರಿ ವಾಹನಗಳ ಮೂಲಕ ಜಾಗೃತಿ ಮೂಡಿಸಬೇಕು ಎನ್ನುತ್ತಾರೆ ರೈತ ಮುಖಂಡ ಬಸವರಾಜ.

‘ಪ್ರತಿ ಮೂರು ವರ್ಷಕ್ಕೆ ಒಮ್ಮೆ ರೈತರ ಜಮೀನುಗಳ ಮಣ್ಣು ಸಂಗ್ರಹಿಸಿ ತಪಾಸಣೆ ಮಾಡಬೇಕು ಎಂಬ ನಿಯಮ ಇದೆ. ಆದರೆ ಸರ್ಕಾರ ಕಡಿಮೆ ಗುರಿ ನಿಗದಿ ಮಾಡಿರುವುದು ಸರಿಯಲ್ಲ. ಹಳ್ಳಿಗಳಿಗೆ ಸಂಚಾರಿ ವಾಹನದ ಮೂಲಕ ಸಂಚರಿಸಿ ಮನವರಿಕೆ ಮಾಡಬೇಕು ಎನ್ನುತ್ತಾರೆ ರೈತ ಮುಖಂಡರು.

‘ಸರ್ಕಾರ ಮೊದಲು ಯೋಜನೆ ಪ್ರಾರಂಭ ಮಾಡಿದಾಗ ಹೆಚ್ಚಿನ ಸಂಖ್ಯೆಯ ಟಾರ್ಗೆಟ್‌ ನೀಡುತ್ತಿದ್ದರು. ಆಗ ಪ್ರಯೋಗಾಲಯದಲ್ಲಿ ಸುಮಾರು 18 ಜನ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದರು. ಗುರಿ ಕಡಿಮೆಯಾಗಿರುವುದರಿಂದ ಸಿಬ್ಬಂದಿಯೂ ಕಡಿಮೆ ಇದ್ದಾರೆ. ದಿನಾಲೂ 50 ರಿಂದ 60 ಸ್ಯಾಂಪಲ್‌ಗಳ ಟೆಸ್ಟ್‌ ಮಾಡಲಾಗುತ್ತಿದೆ’ ಎಂದು ಪ್ರಯೋಗಾಲಯದ ಪ್ರಭಾರ ಕೃಷಿ ಅಧಿಕಾರಿ ಯಾಸಿರ್‌ ಅರ್ಫಾದ್‌ ಹೇಳಿದರು.

ಸರ್ಕಾರದ ಗುರಿ ಸಾಧಿಸಿ ಇಲಾಖೆ:

2023–24ನೇ ಸಾಲಿಗೆ ಸರ್ಕಾರದಿಂದ ಕಲಬುರಗಿ ಜಿಲ್ಲೆಯಲ್ಲಿ ಎನ್‌ಎಫ್‌ಎಸ್‌ಎಂ ಪ್ರಾತ್ಯಕ್ಷಿಕೆ ಯೋಜನೆಯಲ್ಲಿ 9,025, ಮಣ್ಣು ಆರೋಗ್ಯ ಫಲವತ್ತತೆ ಯೋಜನೆ ಅಡಿಯಲ್ಲಿ 5,000 ಗುರಿ ಸೇರಿ ಒಟ್ಟು 14,025 ನಿಗದಿ ಮಾಡಲಾಗಿದೆ. ನವೆಂಬರ್‌ 28ರ ವರೆಗೆ 11,551 ಮಣ್ಣು ಮಾದರಿಯನ್ನು ತಪಾಸಣೆ ಮಾಡಿ ಶೇ 82.36ರಷ್ಟು ಗುರಿ ಸಾಧಿಸಲಾಗಿದೆ. ಇನ್ನೂ 2,475 ಮಣ್ಣು ಮಾದರಿ  ತಪಾಸಣೆ ಮಾಡಬೇಕಿದೆ.

ಜಿಲ್ಲೆಯಲ್ಲಿ 2015ರಿಂದ 2017ರ ಮಾರ್ಚ್ 31ರವರೆಗೆ ಮೊದಲ ಅವಧಿಯಲ್ಲಿ 77,610 ಮಣ್ಣಿನ ಮಾದರಿಗಳ  ನೋಂದಣಿಯಾಗಿತ್ತು. ಇದು 5,43,754 ರೈತರ ಜಮೀನಿನ ಮಣ್ಣು ಮಾದರಿಯನ್ನು ತಪಾಸಣೆ ಒಳಪಟ್ಟಿದೆ. 4,00,807 ಮಣ್ಣು ಆರೋಗ್ಯ ಪತ್ರ ಸಿದ್ಧಮಾಡಲಾಗಿತ್ತು, 99,643 ಮಾದರಿಯನ್ನು ಸ್ವೀಕರಿಸಲಾಗಿತ್ತು. ದಾಖಲಾದ 38,222 ಮಣ್ಣಿನ ಮಾದರಿಗಳನ್ನು ಬೇರೆ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ಕೋಟನೂರು (ಡಿ)ಯಲ್ಲಿ 98,978 ಮಣ್ಣಿನ ಮಾದರಿಯನ್ನು ತಪಾಸಣೆ ಮಾಡಲಾಗಿತ್ತು.

2ನೇ ಅವಧಿಯಲ್ಲಿ 1,09,320 ಗುರಿ ನೀಡಲಾಗಿತ್ತು. 1,01,005 ಮಣ್ಣಿನ ಮಾದರಿಯನ್ನು ತಪಾಸಣೆ ಮಾಡಲಾಗಿತ್ತು.  ಎರಡು ಅವಧಿ ಸೇರಿ  ಒಟ್ಟು 5,93,466 ಲಕ್ಷ ಕಾರ್ಡ್ ಸಿದ್ಧವಾಗಿದ್ದವು. ಅವುಗಳನ್ನು ಸಂಬಂಧಿಸಿದ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್‌ ನೀಡಿದೆ. ಮಣ್ಣಿನ ಫಲವತ್ತತೆ ಸುಧಾರಿಸಲು ಅನುಸರಿಸಬೇಕಾದ ಸಲಹೆಗಳನ್ನೂ ಇಲಾಖೆಯಿಂದ ನೀಡಲಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

ಸಾವಯವ ಇಂಗಾಲ ಕಡಿಮೆ:

‘ಭೂಮಿಯಲ್ಲಿ ಸಾವಯವ ಇಂಗಾಲದ ಪ್ರಮಾಣ ಕನಿಷ್ಠ 0.5ಕ್ಕಿಂತ ಹೆಚ್ಚಿರಬೇಕು. ಆದರೆ ಜಿಲ್ಲೆಯ ವಿವಿಧ ತಾಲ್ಲೂಕಿನಲ್ಲಿ ಮಣ್ಣಿನ ಸಾವಯವ ಇಂಗಾಲದ ಪ್ರಮಾಣ ಕಡಿಮೆ ಇದೆ. ರಂಜಕ ಮಧ್ಯಮ ಪ್ರಮಾಣದಲ್ಲಿದೆ. ಜಿಂಕ್‌ ಪ್ರಮಾಣವೂ ಕೊರತೆ ಇದೆ’ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಜಿಂಕ್‌ ಪ್ರಮಾಣ ಕಡಿಮೆ ಇರುವುದರಿಂದ ತೊಗರಿ ಸೈನಿಂಗ್‌ ಬರುತ್ತಿಲ್ಲ. ಪ್ರತಿ ಹೆಕ್ಟೇರ್‌ಗೆ 5 ಕೆ.ಜಿ ಜಿಂಕ್‌, 10 ಕೆಜಿ ಸಾರಜನಕ, 20 ಕೆ.ಜಿ. ರಂಜಕವನ್ನು ನೀಡಲು ರೈತರಿಗೆ ಸಲಹೆ ನೀಡಲಾಗಿದೆ. ಜಿಲ್ಲೆಯ ಭೂಮಿಯಲ್ಲಿ ಪೊಟ್ಯಾಶ್‌ ಪ್ರಮಾಣ ಅಧಿಕ ಇದೆ. ರೈತರು ಮಣ್ಣು ತಪಾಸಣೆ ಮಾಡಿ ರಸಗೊಬ್ಬರ ಬಳಕೆ ಮಾಡಿದರೆ ಹಣ ಮತ್ತು ಸಮಯ ಎರಡು ಉಳಿತಾಯವಾಗಲಿದೆ’ ಎಂದು ಹೇಳಿದರು.

ಪೂರಕ ಮಾಹಿತಿ: ವೆಂಕಟೇಶ ಹರವಾಳ

ಕೋಟನೂರ (ಡಿ) ಬಳಿ ಇರುವ ಮಣ್ಣು ಆರೋಗ್ಯ ಕೇಂದ್ರದ ಪ್ರಯೋಗಾಲಯದಲ್ಲಿ ಮಣ್ಣು ಪೊಟ್ಟಣಗಳ ಮಣ್ಣು ಸಂಗ್ರಹಿಸುತ್ತಿರುವ ಮಹಿಳೆ
ಸಮದ್ ಪಟೇಲ್‌
ಸೋಮನಾಥ್ ರೆಡ್ಡಿ ಪೂರ್ಮಾ
ಭೂಮಿಯ ಆರೋಗ್ಯ ಕಾಪಾಡಲು ಸಮತೋಲಿತ ಗೊಬ್ಬರ ಬಳಕೆ ವರ್ಷದಿಂದ ವರ್ಷಕ್ಕೆ ಬೆಳೆ ಬದಲಾವಣೆ ಮಾಡುವುದರಿಂದ ಸಾಧ್ಯವಿದೆ. ರೈತರು ಆ ಬಗ್ಗೆ ಗಮನ ಹರಿಸಿ ಕೆಲಸ ಮಾಡಬೇಕು
ಸೋಮನಾಥ ರೆಡ್ಡಿ ಪ್ರಗತಿಪರ ರೈತ
ಸರ್ಕಾರದಿಂದ ನೀಡುವ ಮಣ್ಣು ಆರೋಗ್ಯ ಪತ್ರ ರೈತರಿಗೆ ಅನುಕೂಲವಾಗಲಿದೆ. ಆದರೆ ರಸಗೊಬ್ಬರ ಬಳಕೆ ಕುರಿತು ಮಾಹಿತಿ ಇರುವುದಿಲ್ಲ. ಇಲಾಖೆಯಿಂದ ತರಬೇತಿ ಮಾದರಿಯಲ್ಲಿ ರೈತರನ್ನು ಜಾಗೃತಗೊಳಿಸಬೇಕು
ಹಣಮಂತಪ್ಪ ಬೆಳಗುಂಪಿ ಪ್ರಗತಿಪರ ರೈತ
ಮಣ್ಣಿನ ಫಲವತ್ತತೆ ಹಾಗೂ ಸ್ಥಿತಿಗತಿ ಕುರಿತು ತಿಳಿದುಕೊಳ್ಳಲು ರೈತರು ಪ್ರತಿ ಮೂರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ತಮ್ಮ ಭೂಮಿಯಲ್ಲಿನ ಮಣ್ಣಿನ ಪರೀಕ್ಷೆ ಮಾಡಿಸುವುದು ಅವಶ್ಯ
ಶಿವಲಿಂಗಪ್ಪ ಅವಂಟಿ ಕೃಷಿ ಅಧಿಕಾರಿ ರೈತ ಸಂಪರ್ಕ ಕೇಂದ್ರ ಜೇವರ್ಗಿ
ಮಣ್ಣು ಪರೀಕ್ಷೆ ಮಾಡಿಸುವುದರಿಂದ ಭೂಮಿಯ ಫಲವತ್ತತೆ ಹಾಗೂ ಪೋಷಕಾಂಶಗಳ ಲಭ್ಯತೆ ಕುರಿತು ತಿಳಿದುಕೊಳ್ಳಬಹುದಾಗಿದೆ. ಇದರಿಂದ ಮುಂಬರುವ ಮುಂಗಾರು ಹಂಗಾಮಿನಲ್ಲಿ ಯಾವ ಬೆಳೆಗಳನ್ನು ಬಿತ್ತನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಮರೆಪ್ಪ ಹಸನಾಪುರ ರೈತ ಕಟ್ಟಿಸಂಗಾವಿ
ನವೆಂಬರ್‌ ಅಂತ್ಯಕ್ಕೆ 82ರಷ್ಟು ಪ್ರಗತಿ’
‘ಈ ವರ್ಷದ ಅವಧಿಯಲ್ಲಿ ನೀಡಲಾದ ಗುರಿಯಲ್ಲಿ ಶೇ82ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಸಮದ್‌ ಪಟೇಲ್‌ ‘ಪ್ರಜಾವಾಣಿ’ಗೆ ತಿಳಿಸಿದರು. ‘ಮಣ್ಣು ಆರೋಗ್ಯ ಪತ್ರ ವಿತರಣೆ ಹಾಗೂ ರೈತರ ಜಾಗೃತಿಗಾಗಿಯೇ ಕೃಷಿ ಸಂಜೀವಿನಿ ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿ ತಾಲ್ಲೂಕಿಗೆ ಒಂದೊಂದು ವಾಹನ ನೀಡಲಾಗಿದೆ. ಅವರು ಭೇಟಿ ನೀಡಿದ ಸ್ಥಳದಲ್ಲಿಯೇ ಮಣ್ಣು ತಪಾಸಣೆ ಮಾಡುತ್ತಾರೆ’ ಎಂದು ಹೇಳಿದರು. ‘ಹಿಂದಿನ ಅವಧಿಯಲ್ಲಿ ಮೂರು ವರ್ಷಗಳ ಅವಧಿಗೆ ಶೇ 33ರಂತೆ ಮೂರು ಕಾಲಾವಧಿಯಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕು ವ್ಯಾಪ್ತಿಯಲ್ಲಿ ಮಣ್ಣು ಮಾದರಿ ಸಂಗ್ರಹ ಮಾಡಿ ಸರ್ಕಾರ ನೀಡಿದ ಶೇ100ರಷ್ಟು ಗುರಿ ಸಾಧಿಸಲಾಗಿದೆ’ ಎಂದರು. ‘ರೈತರು ತಮ್ಮ ಜಮೀನುಗಳ ಮಣ್ಣು ಪರೀಕ್ಷೆ ಮಾಡಿಕೊಳ್ಳುವುದರಿಂದ ಜಮೀನಿಗೆ ಪೂರಕವಾದ ಬೀಜ ರಸಗೊಬ್ಬರ ಬಳಸಲು ಅನುಕೂಲವಾಗಲಿದೆ. ಮಣ್ಣು ಪರೀಕ್ಷೆ ಮಾಡಿಸದೇ ಹೆಚ್ಚಿನ ಪ್ರಮಾಣದ ರಸಗೊಬ್ಬರ ಹಾಕಿದರೆ ಶ್ರಮ ಹಾಗೂ ಹಣ ಎರಡು ಹಾಳಾಗಲಿದೆ. ಆದ್ದರಿಂದ ಮಣ್ಣು ಪರೀಕ್ಷ ಮಾಡಿ ವ್ಯ‌ವಸಾಯ ಮಾಡಿದರೆ ಹಣ ಮತ್ತು ಶ್ರಮ ಉಳಿಸಬಹುದು’ ಎಂದು ಹೇಳಿದರು.
ಮಣ್ಣು ತಪಾಸಣೆ ಪತ್ರದಲ್ಲಿ ಏನಿದೆ?
ರೈತ ಹಿಡುವಳಿದಾರರ ಜಮೀನುಗಳಿಂದ ಮಣ್ಣು ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆ ಮಾಡಿ ಮಣ್ಣು ಆರೋಗ್ಯ ಪ್ರಮಾಣ ಪತ್ರ ವಿತರಣೆ ಮಾಡಲಾಗುತ್ತದೆ. ಅದರಲ್ಲಿ ರೈತರ ಹೆಸರು ಸರ್ವೆ ನಂಬರ್‌ ತಪಾಸಣೆ ಮಾಡಿದ ಕೇಂದ್ರದ ಹೆಸರು ಮಣ್ಣಿನಲ್ಲಿರುವ ರಸಾಯನಿಕ ಪ್ರಮಾಣಗಳಾದ ಪಿಎಚ್‌ ಸಾರಜನಕ ರಂಜಕ ಮ್ಯಾಂಗನೀಸ್‌ ಬೋರಾನ್‌ ಸತು ಗಂಧಕ ತಾಮ್ರ ಸೇರಿ ಒಟ್ಟು 12 ರಸಾಯನಿಕ ಅಂಶಗಳ ಪ್ರಮಾಣ ಗುರುತಿಸುತ್ತಾರೆ. ಕಂಡು ಬಂದ ಅಂಶಗಳ ಆಧಾರದ ಮೇಲೆ ಬೆಳೆಗಳು ಹಾಗೂ ಅದಕ್ಕೆ ಬಳಸುವ ಗೊಬ್ಬರ ಬಗ್ಗೆ ಮಾಹಿತಿ ಒಳಗೊಂಡಿರುತ್ತದೆ. ಮಣ್ಣು ಪರೀಕ್ಷೆ ಆಧಾರಿತ ಪೋಷಕಾಂಶಗಳ ಬಳಕೆಯಿಂದ ಅಧಿಕ ಇಳುವರಿ ಪಡೆಯಬಹುದು ಹಾಗೂ ಭೂಮಿಯ ಫಲವತ್ತತೆಯನ್ನು ಬಹು ವರ್ಷಗಳವರೆಗೆ ಕಾಪಾಡಿಕೊಳ್ಳಬಹುದಾಗಿದೆ.
ಜೇವರ್ಗಿ ತಾಲ್ಲೂಕಿನ ಜನಿವಾರ ಗ್ರಾಮದ ಜಮೀನಿನಲ್ಲಿ ಕೃಷಿ ಅಧಿಕಾರಿಗಳು ಮಣ್ಣಿನ ಮಾದರಿ ಸಂಗ್ರಹಿಸುತ್ತಿರುವುದು
ಜೇವರ್ಗಿ: 380 ಮಣ್ಣು ಕಾರ್ಡ್‌ ವಿತರಣೆ ಜೇವರ್ಗಿ:
‘ಪ್ರಸಕ್ತ ಸಾಲಿನಲ್ಲಿ ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಲ್ಲಿ ಒಟ್ಟು 1120 ರೈತರ ಜಮೀನುಗಳ ಮಣ್ಣು ಪರೀಕ್ಷೆ ನಡೆಸಲಾಗಿದೆ. ಅದರಲ್ಲಿ ಈವರೆಗೆ 380 ರೈತರಿಗೆ ಮಣ್ಣು ಆರೋಗ್ಯ ಚೀಟಿ ನೀಡಲಾಗಿದೆ’ ಪಟ್ಟಣದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಶಿವಲಿಂಗಪ್ಪ ಅವಂಟಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಜೇವರ್ಗಿ ರೈತ ಸಂಪರ್ಕ ಕೇಂದ್ರ-220 ನೆಲೋಗಿ ರೈತ ಸಂಪರ್ಕ ಕೇಂದ್ರ–220 ಆಂದೋಲಾ ರೈತ ಸಂಪರ್ಕ ಕೇಂದ್ರದಲ್ಲಿ 223 ಜನ ರೈತರ ಜಮೀನುಗಳ ಮಣ್ಣು ಪರೀಕ್ಷೆ ನಡೆಸಲಾಗಿದೆ. ಯಡ್ರಾಮಿ ರೈತ ಸಂಪರ್ಕ ಕೇಂದ್ರದಲ್ಲಿ 223 ಇಜೇರಿ ರೈತ ಸಂಪರ್ಕ ಕೇಂದ್ರದಲ್ಲಿ 220 ಜನ ರೈತರ ಮಣ್ಣು ಪರೀಕ್ಷೆ ನಡೆಸಿದ ನಂತರ ಕಲಬುರಗಿ ನಗರದ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಕಳಿಸಲಾಗಿದೆ. ರೈತರಿಗೆ ಕಾರ್ಡ್‌ ವಿತರಣೆ ಕಾರ್ಯ ಪ್ರಗತಿಯಲ್ಲಿದೆ’ ಎಂದು ತಿಳಿಸಿದರು. ‘ಕೇಂದ್ರ ಸರ್ಕಾರದ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಅಡಿಯಲ್ಲಿ ಬರುವಂತಹ ಭೂಮಿಯನ್ನು ಗುರುತಿಸಿ ಮಣ್ಣು ಮಾದರಿಗಳನ್ನು ಸಂಗ್ರಹಿಸಿ 150 ಜನ ರೈತರ ಮಣ್ಣಿನ ಮಾದರಿಗಳನ್ನು ಮತ್ತೆ ಮಣ್ಣು ಪರೀಕ್ಷಾ ಕೇಂದ್ರಕ್ಕೆ ಕಳಿಸಲಾಗಿದೆ. ಪ್ರತಿ ಮೂರು ವರ್ಷಕ್ಕೊಮ್ಮೆ ಮಣ್ಣಿನ ಮಾದರಿಗಳನ್ನು ಕೃಷಿ ಅಧಿಕಾರಿಗಳ ಸಮಕ್ಷಮ ನಡೆಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.