ADVERTISEMENT

ಬಸವ ಭವನಕ್ಕೆ 2 ಎಕರೆ ಜಮೀನು ಮಂಜೂರು ಭರವಸೆ

ಚಿಂಚೋಳಿ: ಅನಿರ್ಧಿಷ್ಟಾವಧಿ ಧರಣಿ ವಾಪಸ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 15:41 IST
Last Updated 26 ಜೂನ್ 2025, 15:41 IST
ಚಿಂಚೋಳಿಯಲ್ಲಿ ಬಸವ ಭವನಕ್ಕೆ ಜಾಗ ನೀಡುವಂತೆ ಧರಣಿ ನಡೆಸುತ್ತಿದ್ದ ವೀರಶೈವ ಲಿಂಗಾಯತ ಸಮಾಜದ ಮುಖಂಡರನ್ನು ಉದ್ದೇಶಿಸಿ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಗುರುವಾರ ಮಾತನಾಡಿದರು 
ಚಿಂಚೋಳಿಯಲ್ಲಿ ಬಸವ ಭವನಕ್ಕೆ ಜಾಗ ನೀಡುವಂತೆ ಧರಣಿ ನಡೆಸುತ್ತಿದ್ದ ವೀರಶೈವ ಲಿಂಗಾಯತ ಸಮಾಜದ ಮುಖಂಡರನ್ನು ಉದ್ದೇಶಿಸಿ ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ ಗುರುವಾರ ಮಾತನಾಡಿದರು    

ಚಿಂಚೋಳಿ: ತಹಶೀಲ್ದಾರ್‌ ಹಳೆಯ ಕಚೇರಿ ಎದುರು ಬಸವಭವನ ನಿರ್ಮಾಣಕ್ಕೆ ಜಾಗ ನೀಡಬೇಕು ಎಂದು ಒತ್ತಾಯಿಸಿ ನಡೆಯುತ್ತಿದ್ದ ಅನಿರ್ಧಿಷ್ಟಾವಧಿ ಧರಣಿಯನ್ನು ಅಧಿಕಾರಿಗಳ ಭರವಸೆ ಮೇರೆಗೆ ಗುರುವಾರ ವಾಪಸ್ ಪಡೆಯಲಾಗಿದೆ.

ಅಖಿಲ ಭಾರತ ವೀರಶೈವ ಮಹಾಸಭೆ ತಾಲ್ಲೂಕು ಘಟಕ ಮತ್ತು ಬಸವಪರ ಸಂಘಟನೆಗಳು ಅಧ್ಯಕ್ಷ ಶರಣು ಪಾಟೀಲ ನೇತೃತ್ವದಲ್ಲಿ ನಡೆಸುತ್ತಿದ್ದ ಧರಣಿ ಹಿಂಪಡೆದರು. ಪಟಾಕಿ ಸಿಡಿಸಿ, ಸಿಹಿ ತಿಂದು ಸಂಭ್ರಮಿಸಿದರು.

ತಹಶೀಲ್ದಾರ್‌ ಸುಬ್ಬಣ್ಣ ಜಮಖಂಡಿ, ಡಿವೈಎಸ್ಪಿ ಸಂಗಮನಾಥ ಹಿರೇಮಠ ಧರಣಿ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಮನವೊಲಿಸಿದರು.

ADVERTISEMENT

ಚಿಂಚೋಳಿ ಪಟ್ಟಣ ವ್ಯಾಪ್ತಿಯ ನೀಮಾ ಹೊಸಳ್ಳಿ ಕ್ರಾಸ್‌ನಲ್ಲಿ ಬರುವ ಸ.ನಂ. 242ರಲ್ಲಿ ಬರುವ ಸರ್ಕಾರಿ ಗಾಯರಾಣ ಜಮೀನಿನಲ್ಲಿ 2 ಎಕರೆ ಜಮೀನು ಮಂಜೂರಾತಿಯ ಭರವಸೆ ನೀಡಿದ್ದಾರೆ.

ಜೂನ್‌ 21ರ ರಾತ್ರಿ ತಹಶೀಲ್ದಾರ್‌ ಹಳೆಯ ಕಚೇರಿ ಆವರಣದಲ್ಲಿ ಬಸವ ಭವನದ ಫಲಕ ನೆಟ್ಟು ಧ್ವಜ ಕಟ್ಟಲಾಗಿತ್ತು. ಇದನ್ನು ತಾಲ್ಲೂಕು ಆಡಳಿತ ಸೋಮವಾರ ತೆರವುಗೊಳಿಸಿತ್ತು. ಇದನ್ನು ಖಂಡಿಸಿ ಸೋಮವಾರ ರಾತ್ರಿಯಿಂದಲೇ ಧರಣಿ ಆರಂಭಿಸಲಾಗಿತ್ತು.

ಅಧಿಕಾರಿಗಳ ಭರವಸೆ ನಂತರ ಸಂಭ್ರಮಾಚರಣೆಯಲ್ಲಿ ವೀರಣ್ಣ ಗಂಗಾಣಿ, ಶಿವರಾಜ ಪಾಟೀಲ ಗೊಣಗಿ, ಸೂರ್ಯಕಾಂತ ಹುಲಿ, ವೀರೇಶ, ಶಿವಶರಣಪ್ಪ, ನಂದಿಕುಮಾರ, ಸುಭಾಷ ಸೀಳಿನ್, ಸಂತೋಷ ಕಶೆಟ್ಟಿ, ಸುರೇಶ ದೇಶಪಾಂಡೆ, ಬಸವರಾಜ ಪುಣ್ಯಶೆಟ್ಟಿ, ಕಾಶಿನಾಥ ಹುಣಜೆ, ಗುರು ಪಡಶೆಟ್ಟಿ, ಶಿವು ಸ್ವಾಮಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಬಸವ ಭವನಕ್ಕೆ ಜಾಗ ನೀಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಸರ್ವೆ ಮಾಡಿ ಸ್ಕೆಚ್ ತಯಾರಿಸಲಾಗಿದ್ದು ಪ್ರಸ್ತಾವ ಸಿದ್ಧಪಡಿಸಿ ಜಮೀನು ಮಂಜೂರಾತಿಗೆ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು
ಸುಬ್ಬಣ್ಣ ಜಮಖಂಡಿ ತಹಶೀಲ್ದಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.