ಕಲಬುರಗಿ: ಕಲ್ಯಾಣ ಕರ್ನಾಟಕದ 371 (ಜೆ) ವಿಶೇಷ ಸ್ಥಾನಮಾನದ ಮೇಲೆ ವಕ್ರ ದೃಷ್ಟಿ ಇರಿಸಿದ ಕೆಲವು ಬುದ್ಧಿ ಜೀವಿಗಳು, ನಮ್ಮ ಹಕ್ಕಿನ ವಿಶೇಷ ಸ್ಥಾನಮಾನಕ್ಕೆ ಚ್ಯುತಿ ತರಲು ರಾಜ್ಯಪಾಲರಿಗೆ ದೂರು ನೀಡುವ ನಿರ್ಣಯವನ್ನು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೆಗೆದುಕೊಂಡಿದ್ದು ಖಂಡನೀಯ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ ಹೇಳಿದ್ದಾರೆ.
ರಾಜ್ಯ ಒಡೆಯುವ ಇಂತಹ ಬುದ್ಧಿ ಜೀವಿಗಳ ಕೀಳು ಮಟ್ಟದ ನಡೆಯನ್ನು ಕಲ್ಯಾಣ ಕರ್ನಾಟಕದ ಜನರು ಸಹಿಸುವುದಿಲ್ಲ. 371 (ಜೆ) ವಿಶೇಷ ಸ್ಥಾನಮಾನದ ಬಗ್ಗೆ ಕೆಣಕಿದರೆ ಸುಮ್ಮನೆ ಕೂರುವುದಿಲ್ಲ. ರಾಜ್ಯಪಾಲರು ನಮ್ಮ ಅಸ್ತಿತ್ವಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಚರ್ಚಿಸಿಲು ಮೇ 26ರ ಬೆಳಿಗ್ಗೆ 11ಕ್ಕೆ ಹಿಂದಿ ಪ್ರಚಾರ ಸಭಾ ಸಭಾಂಗಣದಲ್ಲಿ ದುಂಡು ಮೇಜಿನ ಸಭೆ ನಡೆಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರದೇಶದ ಜನಸಂಖ್ಯೆಗೆ ಅನುಗುಣವಾಗಿ ನಮ್ಮ ಹಕ್ಕಿನ ಪಾಲು, ಸರ್ಕಾರಿ ಹುದ್ದೆಗಳಲ್ಲಿ ಪ್ರಾತಿನಿಧ್ಯ ಪಡೆದಿಲ್ಲ. ಅದಾಗಲೇ ಬೆಂಗಳೂರಿನ ಕಲ್ಯಾಣ ಕರ್ನಾಟಕ ವಿರೋಧಿಗಳು ವಿಶೇಷ ಸ್ಥಾನಮಾನದ ಬಗ್ಗೆ ಅಸೂಯೆ ಪಡುತ್ತಿದ್ದಾರೆ ಎಂದಿದ್ದಾರೆ.
371 (ಜೆ) ತಿದ್ದುಪಡಿಯಿಂದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳೇ ರಾಜ್ಯದ ಬಹುಪಾಲು ಹುದ್ದೆಗಳು ಕಬಳಿಸುತ್ತಿದ್ದಾರೆ. ಉಳಿದ ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂದು ಅಭಿವೃದ್ಧಿ ವಿರೋಧಿ ಬುದ್ಧಿ ಜೀವಿಗಳು ಜನರಿಗೆ ತಪ್ಪು ಸಂದೇಶ ಕೊಡುತ್ತಿದ್ದಾರೆ. ಅಖಂಡ ಕರ್ನಾಟಕ ಮತ್ತು ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಕಿಂಚಿತ್ತೂ ಅಭಿಮಾನ ಇಲ್ಲದಿರುವುದು ಎದ್ದು ಕಾಣುತ್ತಿದೆ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.