ADVERTISEMENT

3 ತಿಂಗಳಿಂದ ಸಿಗದ ಗೌರವ ಸಂಭಾವನೆ

ಗ್ರಂಥಾಲಯ ಮೇಲ್ವಿಚಾರಕರ ಪರದಾಟ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2020, 1:39 IST
Last Updated 26 ಸೆಪ್ಟೆಂಬರ್ 2020, 1:39 IST

ಚಿತ್ತಾಪುರ: ತಾಲ್ಲೂಕಿನ (ಚಿತ್ತಾಪುರ, ಶಹಾಬಾದ್, ಕಾಳಗಿ) ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಮೇಲ್ವಿಚಾರಕರು 3 ತಿಂಗಳ ವೇತನ ಇಲ್ಲದೆ ಪರದಾ ಡುತ್ತಿರುವ ಘಟನೆ ಬೆಳಕಿಗೆ ಬಂದಿದೆ.

ಗ್ರಂಥಾಲಯ ಮೇಲ್ವಿಚಾರಕರಿಗೆ ಸರ್ಕಾರ ಗ್ರಾಮ ಪಂಚಾಯಿತಿ ಮೂಲಕ ತಿಂಗಳಿಗೆ ₹7 ಸಾವಿರ ಗೌರವ ಸಂಭಾವನೆ ನೀಡುತ್ತದೆ. 2020ರ ಜೂನ್ ತಿಂಗಳಿನಿಂದ ಆಗಷ್ಟ್ ತಿಂಗಳವರೆಗಿನ ₹ 21 ಸಾವಿರ ವೇತನ ಪಾವತಿ ಮಾಡಲು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ.

ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು 2020 ಜುಲೈ 14 ರಂದು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರಿಗೆ 3 ತಿಂಗಳ (ಜೂನ್- ಆಗಷ್ಟ್) ಗೌರವ ಸಂಭಾವನೆ ನೀಡಲು ‘ಗ್ರಾಮ ಪಂಚಾಯಿತಿ ಶಾಸನಬದ್ಧ ಅನುದಾನ’ವನ್ನು ಬ್ಯಾಂಕ್ ಖಾತೆಗೆ ಬಿಡುಗಡೆ ಮಾಡಿ ಆದೇಶ ಮಾಡಿದೆ. ಆದರೂ, ಗ್ರಾಮ ಪಂಚಾಯಿತಿಗಳಲ್ಲಿ ಮೇಲ್ವಿಚಾರಕರಿಗೆ ಗೌರವ ಸಂಭಾವನೆ ಸಂದಾಯ ಮಾಡಲು ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಮತ್ತು ಅಭಿವೃದ್ಧಿ ಅಧಿಕಾರಿ ಏನಾದರೊಂದು ನೆಪ ಹೇಳುತ್ತಿದ್ದಾರೆ ಎಂದು ಕೆಲವು ಮೇಲ್ವಿಚಾರಕರು ‘ಪ್ರಜಾವಾಣಿ’ಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ADVERTISEMENT

ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪಾವತಿ ಮಾಡಿದ್ದಾರೆ. ಉಳಿದಂತೆ ಅಳ್ಳೊಳ್ಳಿ, ಅಲ್ಲೂರ್ (ಬಿ), ಅರಣಕಲ್, ಭಾಗೋಡಿ, ದಂಡೋತಿ, ಹೆಬ್ಬಾಳ, ಹೊನಗುಂಟಾ, ಇಂಗಳಗಿ, ಕಡಬೂರ, ಕಮರವಾಡಿ, ಕಂದಗೂಳ, ನಾಲವಾರ, ಪೇಠಶಿರೂರ, ರಾಜಾಪುರ, ತೆಂಗಳಿ, ಯಾಗಾಪುರ, ದಿಗ್ಗಾಂವ್ ಗ್ರಂಥಾಲಯ ಮೇಲ್ವಿಚಾರಕರಿಗೆ 3 ತಿಂಗಳ ಗೌರವ ಸಂಭಾವನೆ ಪಾವತಿ ಮಾಡಿಲ್ಲ. ತೊನಸನಹಳ್ಳಿ (ಎಸ್) ಮೇಲ್ವಿಚಾರಕರಿಗೆ 6 ತಿಂಗಳ ಹಾಗೂ ಗುಂಡಗುರ್ತಿ ಮೇಲ್ವಿಚಾರಕರಿಗೆ ಒಂದು ತಿಂಗಳ ಗೌರವ ಸಂಭಾವನೆ ಪಾವತಿಸಿಲ್ಲ ಎಂದು ತಿಳಿದು ಬಂದಿದೆ.

ಸಂಭಾವನೆ ಇಲ್ಲದೆ ಜೀವನ ನಿರ್ವಹಣೆಗೆ ಪರದಾಡುವ ಪರಿಸ್ಥಿತಿ ಬಂದಿದೆ. ಈ ಹಿಂದೆ ಗ್ರಂಥಾಲಯ ಇಲಾಖೆಯಿಂದ ನೇರವಾಗಿ ಮೇಲ್ವಿಚಾರಕರಿಗೆ ಹಣ ಸಂದಾಯ ಮಾಡಲಾಗುತ್ತಿತ್ತು. ಸರ್ಕಾರವು ಅದನ್ನು ಗ್ರಂಥಾಲಯ ಇಲಾಖೆಯಿಂದ ಮಾರ್ಚ್ ತಿಂಗಳಿನಿಂದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ವಹಿಸಿದೆ. ಸಂಭಾವನೆ ಪಡೆಯಲು ಪಂಚಾಯಿತಿಗೆ ಅಲೆದಾ ಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಂಥಾಲಯ ಮೇಲ್ವಿಚಾರಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.