ADVERTISEMENT

ಗತ ವೈಭವದ ಕಲ್ಲಿನ ಮನೆಗಳು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2021, 2:25 IST
Last Updated 1 ಆಗಸ್ಟ್ 2021, 2:25 IST
ಹೊನ್ನಕಿರಣಗಿ ಗ್ರಾಮದಲ್ಲಿನ ಸುಣ್ಣದ ಕಲ್ಲಿನ ಹಳೆಯ ಮನೆ ಶಿಥಿಲಗೊಂಡಿದೆ
ಹೊನ್ನಕಿರಣಗಿ ಗ್ರಾಮದಲ್ಲಿನ ಸುಣ್ಣದ ಕಲ್ಲಿನ ಹಳೆಯ ಮನೆ ಶಿಥಿಲಗೊಂಡಿದೆ   

ಕಲಬುರ್ಗಿ: ಸಮೃದ್ಧ ಕಪ್ಪು ಮಣ್ಣಿನ ನೆಲ. ಅದರ ಮೇಲೆ ಹುಲುಸಾಗಿ ಬೆಳೆದು ಹಸಿರಿನಿಂದ ಕಂಗೊಳಿಸುತ್ತಿರುವ ಬೆಳೆ. ನೈಋತ್ಯ ದಿಕ್ಕಿನೆಡೆಗೆ ಹರಿಯುವ ಎರಡು ಹಳ್ಳಗಳ ಬದಿಯ ಎತ್ತರ ನೆಲದಲ್ಲಿಯ ಗಿಡ–ಮರಗಳಲ್ಲಿ ಕಾಣುವ ಊರು ‘ಹೊನ್ನಕಿರಣಗಿ’.

ಶತಮಾನದಷ್ಟು ಹಳೆಯದಾದ ಸುಣ್ಣದ ಕಲ್ಲಿನ ಗಟ್ಟಿಮುಟ್ಟಾದ ಮನೆ ಗಳು ಊರಿನ ಸೌಂದರ್ಯಕ್ಕೆ ರಂಗು ತುಂಬಿವೆ. ಮೊದಲ ನೋಟದಲ್ಲೇ ಮನೆ ಗಳು ನೋಡುಗರನ್ನು ಸೆಳೆಯುತ್ತವೆ. ನೆಲಹಾಸಿನಿಂದ ಚಾವಣಿ ತನಕ ಶಹಾಬಾದ್ ಕಲ್ಲಿನ ಚಪ್ಪಡಿಗಳೇ ಬಳಕೆ ಯಾಗಿವೆ. ಅನುರೂಪದ ತೂಕ, ವಿನ್ಯಾಸ ಮತ್ತು ಅವುಗಳ ನೈಜ ಬಣ್ಣಕ್ಕೆ ಆಧುನಿಕ ಬಣ್ಣಗಳ ಸ್ಪರ್ಶವೇ ಬೇಡ ಎನ್ನುವಂತಿವೆ.

ಮುಖ್ಯ ರಸ್ತೆ ದಾಟಿ ಕಿರಿದಾದ ಬೀದಿ, ಇಕ್ಕಟ್ಟಾದ ಓಣಿಗಳನ್ನು ಸಾಗಿ ಮುಂದೆ ಹೋದಂತೆ ಬಣ್ಣವೇ ಕಾಣದ ಬಹು ಅಂತಸ್ತಿನ ಮನೆಗಳು ಎದುರಾಗುತ್ತವೆ. ಅಚ್ಚುಕಟ್ಟಾಗಿ ಯೋಜಿತ ರೀತಿಯಲ್ಲಿ ಕಟ್ಟಿದ್ದು, ಅವು ಮಿನಿ ಕೋಟೆ ಹೋಲುತ್ತವೆ.

ADVERTISEMENT

ಮುಖ್ಯದ್ವಾರದ ಎರಡೂ ಬದಿ ಯಲ್ಲಿನ ಕುದುರೆ ಮುಖದ ಕಟ್ಟಿ ಗೆಯ ಕೆತ್ತನೆ, ಆ ಮನೆಯ ಸಮೃದ್ಧತೆ ಸೂಚಿಸುತ್ತದೆ. ದೊಡ್ಡದಾಗಿ, ಸೂಕ್ಷ್ಮ ಕಲಾಕೃತಿಗಳು ಹೊಂದಿದ್ದರೆ ಅದು ಊರಿನ ಪ್ರತಿಷ್ಠಿತ ಮನೆಯೆಂದೇ ಅರ್ಥ. ಬಾಗಿಲ ದಾಟಿ ಒಳಹೊಕ್ಕರೆ ಎರಡು ಕಡೆ ಅತಿಥಿಗಳು ಕೂಡಿಸಲು ವಿಶಾಲ ಕಟ್ಟೆಗಳಿರುತ್ತಿವೆ.

ಗೃಹ ಕಾರ್ಯಕ್ರಮಗಳು ನಡೆಸಲು, ಸಾಕಷ್ಟು ಗಾಳಿ, ಬೆಳಕು ಬರಲು ಮಧ್ಯದಲ್ಲಿ ತೆರೆದ ಪ್ರಾಂಗಣವಿದೆ. ಸುತ್ತಲೂ ದನಗಳ ದೊಡ್ಡಿ, ಅಡುಗೆ ಮನೆ, ಮಲಗುವ ಕೋಣೆಗಳೆಂದು ಮೀಸಲಿಡಲಾಗಿದೆ. ಮೇಲಂತಸ್ತಿನ ಬಹುತೇಕ ಕೋಣೆಗಳನ್ನು ಅತಿಥಿ, ಮಹಿಳೆಯರಿಗೆ ಮೀಸಲಿರುತ್ತವೆ. ನೆಲದಲ್ಲಿ ಹಗೆಗಳನ್ನು ತೋಡಿ ಅಲ್ಲಿ ಧಾನ್ಯಗಳನ್ನು ಸಂಗ್ರಹಿಸಲಾಗುತ್ತದೆ.

ಶಕಗಳ ಹಿಂದಷ್ಟೇ ಸುಸಜ್ಜಿತವಾಗಿದ್ದ ಕೋಟೆಯಂತಹ ಮನೆಗಳು ನಿಧಾನಕ್ಕೆ ಶಿಥಿಲಗೊಳ್ಳುತ್ತಿವೆ. ನಗರದತ್ತ ವಲಸೆ ಹೋದ ಕೆಲ ಶ್ರೀಮಂತ ಕುಟುಂಬಗಳ ಹಳೆಯ ದೊಡ್ಡ ಮನೆಗಳು ಪಾಳು ಬೀಳುತ್ತಿವೆ. ಅವುಗಳ ದುಸ್ಥಿತಿ ಕಂಡು ಹಿರಿಯರು ಮರುಗುತ್ತಿದ್ದಾರೆ.

ಕಲಬುರ್ಗಿ ನಗರದಿಂದ 26 ಕಿ.ಮೀ. ದೂರದಲ್ಲಿರುವ ಈ ಊರಿನ ಹಳೆಯ ಮನೆಗಳು ಆಧುನಿಕತೆಗೆ ಸಡ್ಡು ಹೊಡೆಯುವಂತಿವೆ. ಹಿರಿಯ ಚಿತ್ರ ಕಲಾವಿದ ಡಾ.ವಿ.ಜಿ. ಅಂದಾನಿ ಜನಿಸಿದ್ದು ಇದೇ ಗ್ರಾಮದಲ್ಲಿ. ಜಮೀನುಗಳಲ್ಲಿ ಬಹುಫಲವತ್ತಾದ ಕಪ್ಪು ಮಣ್ಣೇ ಆವರಿಸಿದೆ. ಕಲಬುರ್ಗಿ ತೊಗರಿ ಕಣಜವಾದರೂ ‘ಉತ್ಕೃಷ್ಟ ದರ್ಜೆಯ ತೊಗರಿಯನ್ನು ನಾವು ಬೆಳೆಯುತ್ತೇವೆ’ ಎಂಬುದು ಇಲ್ಲಿನವರ ಹೆಮ್ಮೆ.

ಬಹುತೇಕರು ಕೃಷಿಯಲ್ಲಿ ತೊಡಗಿಸಿ ಕೊಂಡಿದ್ದು, ಮಳೆ ಆಶ್ರಿತದಲ್ಲಿ ಉದ್ದು, ಜೋಳ, ಹತ್ತಿ, ಹೆಸರು, ಕಡಲೆ, ಸೂರ್ಯಕಾಂತಿ ಬೆಳೆಯುತ್ತಾರೆ. ಮಳೆಗಾಲದಲ್ಲಿ ತುಂಬಿ ಹರಿಯುವ ಲಿಂಗದಕಟ್ಟಿ ಮತ್ತು ಕಟ್ಟಗನಹಳ್ಳಿ ಹಳ್ಳಗಳು ಕೆಲವೊಮ್ಮೆ ಚಳಿಗಾಲಕ್ಕೂ ಮುನ್ನವೇ ಬತ್ತುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.