ADVERTISEMENT

ಮದ್ಯ ಮಾರಾಟಗಾರರಿಗೆ ಶೇ 20ರಷ್ಟು ಲಾಭಾಂಶಕ್ಕೆ ಮನವಿ

ಕಲಬುರ್ಗಿ ವೈನ್ ಮರ್ಚಂಟ್ಸ್ ಅಸೋಸಿಯೇಶನ್‌ನಿಂದ ಮುಖ್ಯಮಂತ್ರಿಗಳಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2021, 11:24 IST
Last Updated 3 ಫೆಬ್ರುವರಿ 2021, 11:24 IST
ಕಲಬುರ್ಗಿ ವೈನ್ ಮರ್ಚಂಟ್ಸ್ ಅಸೋಶಿಯೇಶನ್ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು
ಕಲಬುರ್ಗಿ ವೈನ್ ಮರ್ಚಂಟ್ಸ್ ಅಸೋಶಿಯೇಶನ್ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು   

ಕಲಬುರ್ಗಿ: ಚಿಲ್ಲರೆ ಮದ್ಯ ಮಾರಾಟಗಾರರಿಗೆ 2009ಕ್ಕೂ ಮೊದಲು ಶೇ 20ರಷ್ಟು ಲಾಭಾಂಶ ಸಿಗುತ್ತಿತ್ತು. ಆದರೆ ಈಗ ಲಾಭದ ಪ್ರಮಾಣವನ್ನು ಶೇ 10ಕ್ಕೆ ಇಳಿಸಲಾಗಿದೆ. ಮೊದಲಿನಂತೆ ಲಾಭಾಂಶವನ್ನು ಘೋಷಿಸಬೇಕು ಎಂದು ಒತ್ತಾಯಿಸಿ ಕಲಬುರ್ಗಿ ವೈನ್ ಮರ್ಚಂಟ್ಸ್ ಅಸೋಸಿಯೇಶನ್‌ ಸದಸ್ಯರು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮಂಗಳವಾರ ಮನವಿ ಸಲ್ಲಿಸಿದರು.

2009ರಲ್ಲಿ ಒಟ್ಟು ಸನ್ನದುಗಳ ಸಂಖ್ಯೆ 8306 ಇತ್ತು. ಇದೀಗ 11 ಸಾವಿರ ಸನ್ನದುಗಳಿದ್ದು, ಮೊದಲಿನಷ್ಟು ಮದ್ಯ ಮಾರಾಟವಾಗುತ್ತಿಲ್ಲ. ಖರ್ಚು ವೆಚ್ಚಗಳು ಎರಡು ಪಟ್ಟು ಹೆಚ್ಚಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಸಂದರ್ಭದಲ್ಲಿ ಹೇರಿದ ಲಾಕ್‌ಡೌನ್‌ನಿಂದಾಗಿ ಮದ್ಯ ಮಾರಾಟವನ್ನು ಸ್ಥಗಿತಗೊಳಿಸಿದ್ದರಿಂದ ಇದನ್ನೇ ನಂಬಿಕೊಂಡವರಿಗೆ ಸಾಕಷ್ಟು ನಷ್ಟವಾಗಿದೆ. ಆದ್ದರಿಂದ ಪರಿಹಾರ ಘೋಷಿಸಬೇಕು. ರಾಜ್ಯದಲ್ಲಿ ವಿವಿಧ ಪ್ರದೇಶಗಳ ಸನ್ನದುಗಳಿಗೆ ವಿಭಿನ್ನ ಶುಲ್ಕಗಳಿವೆ. ಎಲ್ಲಾ ವಲಯದ ಸನ್ನದುಗಳಿಗೆ ಏಕರೂಪದ ಶುಲ್ಕ ವಿಧಿಸಬೇಕು. ಇದರಿಂದ ಸರ್ಕಾರಕ್ಕೆ ಹೆಚ್ಚಿನ ವರಮಾನ ಬರಲಿದ್ದು, ಸನ್ನದುದಾರರಿಗೂ ಸಾಮಾಜಿಕ ನ್ಯಾಯ ದೊರೆತಂತಾಗುತ್ತದೆ ಎಂದಿದ್ದಾರೆ.

ADVERTISEMENT

ಸಿಎಲ್–9ರಲ್ಲಿ ಹೆಚ್ಚುವರಿ ಕೌಂಟರ್‌ಗಳನ್ನು ತೆರೆಯಲು ಅವಕಾಶ ನೀಡಬೇಕು. ಬೇಕಿದ್ದರೆ ಹೆಚ್ಚುವರಿ ಶುಲ್ಕವನ್ನೂ ವಿಧಿಸಬಹುದು. ಎಲ್ಲಾ ಮದ್ಯಗಳಿಗೆ 60, 90 ಎಂ.ಎಲ್‌. ಪ್ಯಾಕಿಂಗ್‌ ವ್ಯವಸ್ಥೆ ಮಾಡಬೇಕು. ಸನ್ನದುದಾರರು ತಮ್ಮ ಸನ್ನದುಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು. ಸಿಎಲ್‌–2ಗಳಲ್ಲಿ ದರ್ಶಿನಿ ಹೋಟೆಲ್‌ಗಳ ಮಾದರಿಯಲ್ಲಿ ಅಲ್ಲಿಯೇ ಮದ್ಯಪಾನ ಮಾಡಲು ಅವಕಾಶ ನೀಡಬೇಕು. ಆಂಧ್ರಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ ಇದಕ್ಕೆ ಅವಕಾಶ ನೀಡಲಾಗಿದ್ದು, ಹೆಚ್ಚುವರಿ ಶುಲ್ಕದಿಂದ ಸರ್ಕಾರಕ್ಕೆ ವರಮಾನ ಹೆಚ್ಚಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಅಸೋಸಿಯೇಶನ್ ಅಧ್ಯಕ್ಷ ಅಶೋಕ ಬಿ. ಗುತ್ತೇದಾರ, ಉಪಾಧ್ಯಕ್ಷ ರಾಮುಲು ಪಿ. ರೆಡ್ಡಿ, ಕಾರ್ಯದರ್ಶಿ ವೆಂಕಟೇಶ ಕಡೇಚೂರ, ಗೌರವ ಅಧ್ಯಕ್ಷ ವೀರಯ್ಯ ಕೆ. ಗುತ್ತೇದಾರ ಇದ್ದರು.

‘ಅಬಕಾರಿ ಅಧಿಕಾರಿಗಳಿಂದ ಲಂಚ’

ಅಬಕಾರಿ ಅಧಿಕಾರಿಗಳು ವೈನ್‌ಶಾಪ್‌ಗಳಿಂದ ನಿಯಮಿತವಾಗಿ ಲಂಚ–ಮಾಮೂಲಿಯನ್ನು ವಸೂಲಿ ಮಾಡುತ್ತಿದ್ದು, ಇದರಿಂದ ಸಾಕಷ್ಟು ಆಸ್ತಿ ಸಂಪಾದಿಸಿದ್ದಾರೆ. ಬೇನಾಮಿ ಆಸ್ತಿಯನ್ನೂ ಹಲವರು ಗಳಿಸಿದ್ದು, ಈ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು. ಅಲ್ಲದೇ, ಬೇನಾಮಿ ಸನ್ನದುಗಳಲ್ಲಿ ಅಧಿಕಾರಿಗಳು ಮದ್ಯ ಮಾರಾಟದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಬಗ್ಗೆ ವಿಸ್ತೃತ ತನಿಖೆಗೆ ಒತ್ತಾಯಿಸಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ದೂರಿದರು. ಹಲವು ವರ್ಷಗಳಿಂದ ಒಂದೇ ಜಿಲ್ಲೆಯಲ್ಲಿರುವ ನೌಕರರನ್ನು ವರ್ಗಾಯಿಸಬೇಕು ಎಂದು ಆಗ್ರಹಿಸಿದರು. ಪೊಲೀಸ್‌ ಇಲಾಖೆಯ ಹಸ್ತಕ್ಷೇಪವೂ ಹೆಚ್ಚಾಗಿದೆ ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.