ADVERTISEMENT

ಕಲಬುರಗಿ: ‘ಅಬಕಾರಿ ಸನ್ನದು ಇ–ಹರಾಜು ಜ.13ಕ್ಕೆ’

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 5:42 IST
Last Updated 1 ಜನವರಿ 2026, 5:42 IST
ಸಂಗನಗೌಡ ಪಿ.ಹೊಸಳ್ಳಿ
ಸಂಗನಗೌಡ ಪಿ.ಹೊಸಳ್ಳಿ   

ಕಲಬುರಗಿ: ‘ಸರ್ಕಾರದ ಅಧಿಸೂಚನೆಯಂತೆ ಜಿಲ್ಲೆಯ 15 ಅಬಕಾರಿ ಸನ್ನದುಗಳು ಇ–ಹರಾಜಿಗೆ ಲಭ್ಯವಿದ್ದು, ಜನವರಿ 13ರಂದು ಹರಾಜು ಪ್ರಕ್ರಿಯೆ ನಡೆಯಲಿದೆ’ ಎಂದು ಅಬಕಾರಿ ಉಪ ಆಯುಕ್ತ ಸಂಗನಗೌಡ ಪಿ. ಹೊಸಳ್ಳಿ ಹೇಳಿದರು.

‘1992ರ ಬಳಿಕ ರಾಜ್ಯದಲ್ಲಿ ಅಬಕಾರಿಗಳ ಸನ್ನದುಗಳ ಹರಾಜು ನಡೆದಿಲ್ಲ. ಆಗಿನಿಂದ ವಿವಿಧ ಕಾರಣಗಳಿಗೆ ಖಾಲಿ ಇರುವ ಸನ್ನದುಗಳ ಇ–ಹರಾಜು ನಡೆಸಲಾಗುತ್ತಿದೆ’ ಎಂದು ಅವರು ನಗರದ ಅಬಕಾರಿ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಒಟ್ಟು 15 ಸನ್ನದುಗಳ ಪೈಕಿ 12 ಸಿಎಲ್‌–2ಎ ಸನ್ನದುಗಳಿವೆ. ಮೂರು ಸಿಎಲ್‌–9ಎ ಸನ್ನದುಗಳಿವೆ. ಆಳಂದ ಅಬಕಾರಿ ವಲಯ, ಚಿತ್ತಾಪುರ ವಲಯ, ಕಲಬುರಗಿ ವಲಯ–1, ಸೇಡಂ ವಲಯ, ಜೇವರ್ಗಿ ವಲಯಕ್ಕೆ ತಲಾ ಎರಡು ಹಾಗೂ ಚಿಂಚೋಳಿ, ಕಲಬುರಗಿ ವಲಯ–2ರಲ್ಲಿ ತಲಾ ಒಂದೊಂದು ಸಿಎಲ್‌–2 ಸನ್ನದುಗಳು ಹರಾಜಿಗೆ ಲಭ್ಯ ಇವೆ’ ಎಂದರು.

ADVERTISEMENT

‘ಇನ್ನುಳಿದಂತೆ ಕಲಬುರಗಿ ಅಬಕಾರಿ ವಲಯ–2ರಲ್ಲಿ ಎರಡು ಹಾಗೂ ಕಲಬುರಗಿ ವಲಯ–1ರಲ್ಲಿ ಒಂದು ಸಿಎಲ್‌–9 ಸನ್ನದು ಇ–ಹರಾಜಿಗೆ ಲಭ್ಯ ಇವೆ’ ಎಂದು ಮಾಹಿತಿ ನೀಡಿದರು.

‘ಈ ಹರಾಜಿನಲ್ಲಿ ಪಾಲ್ಗೊಳ್ಳುವ ಕುರಿತು ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯ ಆಸಕ್ತ ಬಿಡ್‌ದಾರರಿಗೆ ಜನವರಿ 3ರಂದು ಕಲಬುರಗಿಯಲ್ಲಿ ತರಬೇತಿ ಆಯೋಜಿಸಿ ಮಾಹಿತಿ ನೀಡಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಸದ್ಯ 131 ಸಿಎಲ್‌–2, 12 ಸಿಎಲ್‌–4, 98 ಸಿಎಲ್‌–7, ಸಿಎಲ್–11 51 ಎಂಎಸ್‌ಐಎಲ್‌, 52 ಸಿಎಲ್‌–9, ಪ್ರವಾಸೋದ್ಯಮ ಇಲಾಖೆಯ ಒಂದು ಹಾಗೂ ನಾಲ್ಕು ಬಿಯರ್‌ ಸನ್ನದುಗಳು ಸೇರಿದಂತೆ 349 ಸನ್ನದುಗಳಿವೆ. ಇನ್ನೂ 15 ಸೇರಿದರೆ ಸನ್ನದುಗಳ ಸಂಖ್ಯೆ 364ಕ್ಕೆ ಹೆಚ್ಚಲಿವೆ’ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಬಕಾರಿ ಅಧೀಕ್ಷಕರಾದ ಹಣಮಂತರಾಯ ವಜ್ರಮಟ್ಟಿ, ರಾಮನಗೌಡ ಮುದಿಗೌಡ ಇದ್ದರು.

ಹೊಸ ಸನ್ನದುಗಳ ಪರವಾನಗಿ ಅವಧಿಯು 2025–26ರಿಂದ 2029–30ನೇ ಸಾಲಿನ ತನಕ ಇರಲಿದೆ.
– ಸಂಗನಗೌಡ ಪಿ.ಹೊಸಳ್ಳಿ, ಕಲಬುರಗಿ ಅಬಕಾರಿ ಉಪ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.