ಕಲಬುರಗಿ: ಧಾರವಾಡದ ರಾಘವೇಂದ್ರ ಪಾಟೀಲ ಸಾಹಿತ್ಯ ವೇದಿಕೆ ವತಿಯಿಂದ ನೀಡಲಾಗುವ ‘ರಾಘವೇಂದ್ರ ಪಾಟೀಲ ಕಥಾ ಪ್ರಶಸ್ತಿಗೆ’ ಸಾಹಿತಿಗಳಾದ ಕಲಬುರಗಿಯ ಮಹಾಂತೇಶ ನವಲಕಲ್ ಹಾಗೂ ಉಡುಪಿಯ ಶ್ರೀಲೋಲ ಸೋಮಯಾಜಿ ಅವರ ಕೃತಿಗಳು ಆಯ್ಕೆಯಾಗಿವೆ ಎಂದು ವೇದಿಕೆಯ ಅಧ್ಯಕ್ಷ ಪ್ರೊ. ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ವೇದಿಕೆ ವತಿಯಿಂದ ಪ್ರಶಸ್ತಿಗೆ ಕರೆಯಲಾಗಿದ್ದ ಅರ್ಜಿಗೆ 28 ಹಸ್ತಪ್ರತಿಗಳು ಬಂದಿದ್ದವು. ಅವುಗಳನ್ನು ಪರಿಶೀಲಿಸಿದ ತೀರ್ಪುಗಾರರು, ಕಲಬುರಗಿಯ ಮಹಾಂತೇಶ ನವಲಕಲ್ ಅವರ ‘ಬುದ್ಧಗಂಟೆಯ ಸದ್ದು ಮತ್ತು ಇತರೆ ಕಥೆಗಳು’ ಹಾಗೂ ಉಡುಪಿಯ ಶ್ರೀಲೋಲ ಸೋಮಯಾಜಿ ಅವರ ‘ನ ಪ್ರಮದಿತವ್ಯಂ’ ಕೃತಿಗಳನ್ನು ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ ಎಂದರು.
ಈ ಪ್ರಶಸ್ತಿಯು ₹ 20 ಸಾವಿರ ನಗದು, ಫಲಕ ಒಳಗೊಂಡಿದೆ. ಈ ಬಾರಿ ಇಬ್ಬರ ಕೃತಿಗೆ ಪ್ರಶಸ್ತಿ ಲಭಿಸಿದ್ದರಿಂದ ತಲಾ ₹ 10 ಸಾವಿರ ನೀಡಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು. ಏ. 23ರಂದು ಧಾರವಾಡದ ರಂಗಾಯಣದ ಸಭಾಭವನದಲ್ಲಿ ನಡೆಯುವ ರಾಘವೇಂದ್ರ ಪಾಟೀಲ ಅವರ 72ನೇ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ಎಚ್.ಎಸ್.ವೆಂಕಟೇಶಮೂರ್ತಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತೀರ್ಪುಗಾರರಾಗಿ ವಿಮರ್ಶಕ ಪ್ರೊ. ಟಿ.ಪಿ.ಅಶೋಕ ಹಾಗೂ ಕಥೆಗಾರ ಡಾ. ಕೆ. ಸತ್ಯನಾರಾಯಣ ಕಾರ್ಯ ನಿರ್ವಹಿಸಿದ್ದಾರೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.