ಸಾಂದರ್ಭಿಕ ಚಿತ್ರ
ಕಲಬುರಗಿ: ‘ಪೂರ್ವ ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಉದ್ದೇಶದಿಂದ ಪ್ರಸಕ್ತ ವರ್ಷದಿಂದ ಕಲಬುರಗಿ ವಿಭಾಗದ ಆಯ್ದ 1,008 ಪ್ರಾಥಮಿಕ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ತರಗತಿ ಪ್ರಾರಂಭಿಸಲು ಅನುಮತಿ ನೀಡಿಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಕಲಬುರಗಿ ವಿಭಾಗದ ಹೆಚ್ಚುವರಿ ಆಯುಕ್ತ ಡಾ. ಆಕಾಶ ಎಸ್. ತಿಳಿಸಿದ್ದಾರೆ.
‘ಬೀದರ್ ಜಿಲ್ಲೆಯಲ್ಲಿ 98, ಬಳ್ಳಾರಿ 119, ಕಲಬುರಗಿ 234, ಕೊಪ್ಪಳ 131, ರಾಯಚೂರಿ 190, ವಿಜಯನಗರ 142 ಹಾಗೂ ಯಾದಗಿರಿ 94 ಸೇರಿ ಒಟ್ಟು ವಿಭಾಗದ 1,008 ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಕ್ಷರ ಆವಿಷ್ಕಾರ ಕಾರ್ಯಕ್ರಮದ ಮೂಲಕ ಕೈಜೋಡಿಸಿದೆ‘ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
‘ರಾಜ್ಯದ ವಿವಿಧ ಜಿಲ್ಲೆ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗೆ ದಾಖಲಾದ ಮಕ್ಕಳ ವಿವರಗಳನ್ನು ಅವಲೋಕಿಸಿದರೆ ನಮ್ಮ ಭಾಗದ ಸಂಖ್ಯೆ ಕಡಿಮೆ ಇದೆ. ಕಲಬುರಗಿ ವಿಭಾಗದಲ್ಲಿ 967 ಶಾಲೆಗಳಲ್ಲಿ 32,805 ಮಕ್ಕಳು ಪ್ರವೇಶ ಪಡೆಯುತ್ತಿದ್ದಾರೆ. ಕಲಬುರಗಿ ವಿಭಾಗದಲ್ಲಿ ಶೇ 70.93 ರಷ್ಟು ಮಕ್ಕಳು ಅಂಗನವಾಡಿ ಕೇಂದ್ರದ ಮೇಲೆ ಅವಲಂಬಿತರಾಗಿದ್ದಾರೆ. ಪೂರ್ವ ಪ್ರಾಥಮಿಕ ತರಗತಿ ಪ್ರಾರಂಭದಿಂದ ಅಂಗನವಾಡಿ ಮೇಲಿನ ಹೊರೆ ತಪ್ಪಲಿದೆ’ ಎಂದು ಹೇಳಿದ್ದಾರೆ.
ಕೇಂದ್ರ ಅನುದಾನದ ನಿರೀಕ್ಷೆ: ‘ಪೂರ್ವ ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಗುಣಾತ್ಮಕ ಶಿಕ್ಷಣ ಮತ್ತು ಕ್ರಿಯಾತ್ಮಕ ಚಟುವಟಿಕೆ ಸೇರಿದಂತೆ ಇನ್ನಿತರ ಮಾನದಂಡ ಅಧರಿಸಿ ಕೇಂದ್ರ ಸರ್ಕಾರ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಪ್ರೊಜೆಕ್ಟ್ ಅಪ್ರೂವಲ್ ಬೋರ್ಡ್‍ನಿಂದ ಅನುಮೋದನೆ ನೀಡಿ ಹೆಚ್ಚಿನ ಅನುದಾನ ನೀಡುತ್ತದೆ. ರಾಜ್ಯ ಸರ್ಕಾರದ ಜೊತೆ ಕೇಂದ್ರ ಸರ್ಕಾರದ ಅನುದಾನ ಸಹ ಬರಲಿದೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.