ADVERTISEMENT

ಸೆ 30ರಂದು ಲೋಕ ಅದಾಲತ್

ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ 42 ಸಾವಿರ ಪ್ರಕರಣಗಳು ಬಾಕಿ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2021, 12:22 IST
Last Updated 18 ಸೆಪ್ಟೆಂಬರ್ 2021, 12:22 IST
ಕೆ. ಸುಬ್ರಹ್ಮಣ್ಯ
ಕೆ. ಸುಬ್ರಹ್ಮಣ್ಯ   

ಕಲಬುರ್ಗಿ: ರಾಜಿ ಮೂಲಕ ಇತ್ಯರ್ಥವಾಗುವ ಪ್ರಕರಣಗಳನ್ನು ಶೀಘ್ರವಾಗಿ ಬಗೆಹರಿಸಲು ಇದೇ 30ರಂದು ಜಿಲ್ಲಾ ನ್ಯಾಯಾಲಯ ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಕೆ. ಸುಬ್ರಹ್ಮಣ್ಯ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಯಾಲಯದಲ್ಲಿ ಚಾಲ್ತಿಯಲ್ಲಿರುವ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯಕ್ಕೆ ದಾಖಲಿಸದೇ ಇರುವ ಪ್ರಕರಣಗಳನ್ನು ವ್ಯಾಜ್ಯಪೂರ್ವ ಪ್ರಕರಣಗಳು ಎಂದು ಪರಿಗಣಿಸಿ ಲೋಕ ಅದಾಲತ್‌ನಲ್ಲಿ ಬಗೆಹರಿಸಲಾಗುವುದು. ಅದಾಲತ್‌ನಲ್ಲಿ ಇತ್ಯರ್ಥವಾದ ಪ್ರಕರಣಗಳ ಮೇಲ್ಮನವಿ ಸಲ್ಲಿಸಲು ಅವಕಾಶವಿಲ್ಲ’ ಎಂದು ಹೇಳಿದರು.

ಮೋಟಾರು ವಾಹನ ಅಪಘಾತ ಪೂರ್ವ ಪ್ರಕರಣಗಳು, ಅಸಲು ದಾವೆಗಳು, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣಗಳು, ಭೂಸ್ವಾಧೀನ ಪ್ರಕರಣಗಳು, ವೈವಾಹಿಕ ಹಾಗೂ ಜೀವನಾಂಶ ಭತ್ಯೆ, ಕಾನೂನಿನನ್ವಯ ಜಾರಿ ಆಗಬಹುದಾದ ಕ್ರಿಮಿನಲ್ ಪ್ರಕರಣಗಳು, ಚೆಕ್‌ ಬೌನ್ಸ್ ಪ್ರಕರಣ, ರಾಜಿ ಆಗಬಹುದಾದ ಎಲ್ಲ ತರಹದ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಅತಿ ಶೀಘ್ರವಾಗಿ ಇತ್ಯರ್ಥಗೊಳಿಸಿ ಪರಿಹಾರ ಪಡೆದುಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದೆ ಎಂದರು.

ADVERTISEMENT

‘ನೀರು, ಗಾಳಿ, ಬೆಳಕಿನಂತೆ ಎಲ್ಲರಿಗೂ ನ್ಯಾಯ ಅತ್ಯಗತ್ಯ. ಆದ್ದರಿಂದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರವು ಎಲ್ಲ ಹಂತದಲ್ಲಿ ಎಲ್ಲಾ ಜನರಿಗೂ ನ್ಯಾಯ ಕೇಳುವ ಹಕ್ಕನ್ನು ಕೊಟ್ಟಿದೆ. ಇದರ ಸದುಪಯೋಗ ಪಡೆದು ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ತೀರ್ಮಾನಿಸಿಕೊಂಡು ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕು’ ಎಂದು ಹೇಳಿದರು.

‘ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ 15 ಸಾವಿರ ಪ್ರಕರಣಗಳನ್ನು ಲೋಕ ಅದಾಲತ್‌ ದಿನದಿಂದ ವಿಲೇವಾರಿ ಮಾಡುವ ಗುರಿ ಹೊಂದಲಾಗಿದೆ. ನಾನು ಅಧಿಕಾರ ವಹಿಸಿಕೊಂಡ ಬಳಿಕ 20 ಸಾವಿರ ಪ್ರಕರಣಗಳನ್ನು ಅದಾಲತ್ ಮೂಲಕ ಇತ್ಯರ್ಥ ಪಡಿಸಲಾಗಿದೆ’ ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುಶಾಂತ ಎಂ. ಚೌಗಲೆ ಮಾತನಾಡಿ, ‘ಜಿಲ್ಲಾ ನ್ಯಾಯಾಲಯ, ಸೇಡಂ ನ್ಯಾಯಾಲಯ ಸೇರಿದಂತೆ 15 ಪೀಠಗಳಲ್ಲಿ ಅಂದು ಲೋಕ ಅದಾಲತ್ ನಿಮಿತ್ತ ಪ್ರಕರಣಗಳ ವಿಚಾರಣೆ ನಡೆದು ಇತ್ಯರ್ಥಪಡಿಸಲಾಗುವುದು’ ಎಂದು ಹೇಳಿದರು.

‘ಸೂಕ್ತ ಸಹಕಾರ ಸಿಗುತ್ತಿಲ್ಲ’

ಭೂಸ್ವಾಧೀನ ಪಡಿಸಿಕೊಂಡ ಪ್ರಕರಣಗಳಲ್ಲಿ ಜಿಲ್ಲಾಡಳಿತ ಹಲವು ಜನರಿಗೆ ಪರಿಹಾರ ನೀಡಿರುವುದಿಲ್ಲ. ಇಂತಹ ಪ್ರಕರಣಗಳನ್ನು ಲೋಕ ಅದಾಲತ್ ಮೂಲಕ ಇತ್ಯರ್ಥಪಡಿಸಬೇಕು ಎಂಬುದು ನಮ್ಮ ಅಪೇಕ್ಷೆ. ಆದರೆ, ಇದಕ್ಕೆ ಜಿಲ್ಲಾಡಳಿತದ ಅಧಿಕಾರಿಗಳಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷರಾದ ಕೆ. ಸುಬ್ರಹ್ಮಣ್ಯ ಬೇಸರ ವ್ಯಕ್ತಪಡಿಸಿದರು.

ಹಲವು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಲೋಕ ಅದಾಲತ್‌ ಮೂಲಕ ಒಂದೇ ದಿನದಲ್ಲಿ ಇತ್ಯರ್ಥಪಡಿಸಬಹುದು. ಇದರಲ್ಲಿ ಭಾಗವಹಿಸುವವರಿಗೆ ನ್ಯಾಯಾಲಯದ ಶುಲ್ಕವನ್ನೂ ವಾಪಸ್ ಕೊಡಲಾಗುತ್ತದೆ. ಭೂ ವ್ಯಾಜ್ಯದಂತಹ ಸಿವಿಲ್ ಪ್ರಕರಣಗಳಲ್ಲಿ ಎರಡೂ ಕಡೆಯವರು ಅಗತ್ಯ ಸಹಕಾರ ನೀಡಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.