ADVERTISEMENT

ಲಾರಿ ಮುಷ್ಕರ: ನಿತ್ಯ ₹5 ಕೋಟಿ ಹಾನಿ, ಸಕ್ಕರೆ, ಬೆಲ್ಲ, ಆಲೂಗಡ್ಡೆ ಬೆಲೆ ದುಬಾರಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2018, 10:40 IST
Last Updated 26 ಜುಲೈ 2018, 10:40 IST
ಲಾರಿಗಳ ಮುಷ್ಕರದಿಂದಾಗಿ ಕಲಬುರ್ಗಿಯ ಮಹಾತ್ಮ ಗಾಂಧಿ ಲಾರಿ ತಂಗುದಾಣದಲ್ಲಿ ತಮ್ಮ ಲಾರಿಗಳೊಂದಿಗೆ ನಿಂತಿರುವ ಚಾಲಕರು
ಲಾರಿಗಳ ಮುಷ್ಕರದಿಂದಾಗಿ ಕಲಬುರ್ಗಿಯ ಮಹಾತ್ಮ ಗಾಂಧಿ ಲಾರಿ ತಂಗುದಾಣದಲ್ಲಿ ತಮ್ಮ ಲಾರಿಗಳೊಂದಿಗೆ ನಿಂತಿರುವ ಚಾಲಕರು   

ಕಲಬುರ್ಗಿ: ಲಾರಿ ಮುಷ್ಕರದಿಂದಾಗಿ ಈ ಭಾಗದಿಂದ ಸಿಮೆಂಟ್‌ ಮತ್ತು ತೊಗರಿ ಬೇಳೆ ಪೂರೈಕೆ ಸ್ಥಗಿತಗೊಂಡಿದೆ. ಹೊರ ಊರುಗಳಿಂದ ತರಕಾರಿ, ಹಣ್ಣು, ದಿನಸಿ ವಸ್ತುಗಳು ಬರುತ್ತಿಲ್ಲ. ಹೀಗಾಗಿ ಹಣ್ಣು–ತರಕಾರಿಮತ್ತು ಕೆಲ ದಿನಸಿ ವಸ್ತುಗಳ ಬೆಲೆ ಹೆಚ್ಚಳವಾಗಿದೆ.

ಈಗ ಪಂಚಮಿ ಸಮಯ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಶೇಂಗಾ, ಸಕ್ಕರೆ, ಬೆಲ್ಲ, ಬೇಳೆ, ರವೆ, ಮೈದಾ ಹಿಟ್ಟು ಹೆಚ್ಚಾಗಿ ಖರೀದಿಸುತ್ತಾರೆ. ಈ ಸಂದರ್ಭದಲ್ಲಿ ಪೂರೈಕೆ ಸ್ಥಗಿತಗೊಂಡಿದೆ. ಹೀಗಾಗಿ ಅಭಾವ ಇರುವ ವಸ್ತುಗಳಿಗೆ ದರ ಹೆಚ್ಚಳ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

‘ಮಾರುಕಟ್ಟೆಯಲ್ಲಿ ಎರಡು ದಿನಗಳಿಂದ ಕೆಲ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಪ್ರತಿ ಕೆಜಿಗೆ ಸಕ್ಕರೆ ₹40, ಬೆಲ್ಲ ₹50ರಿಂದ ₹60, ಆಲೂಗಟ್ಟೆ ₹40ಗೆ ಹೆಚ್ಚಳವಾಗಿದೆ. ಶೇಂಗಾ ದರ ಸಹ ₹100ರ ಗಡಿ ಸಮೀಪಿಸುತ್ತಿದೆ. ಹಬ್ಬದ ಸಂದರ್ಭದಲ್ಲಿ ಹೀಗೆ ಮುಷ್ಕರ ನಡೆಸಿದರೆ ಹೇಗೆ’ ಎಂದು ಪ್ರಶ್ನಿಸುತ್ತಾರೆ ಕಲಬುರ್ಗಿಯ ಗೃಹಿಣಿ ಮಲ್ಲಮ್ಮ.

ADVERTISEMENT

‘ಜಿಲ್ಲೆಯಲ್ಲಿ ಅಂದಾಜು 15 ಸಾವಿರ ಲಾರಿಗಳಿವೆ. ಲಾರಿ ಮಾಲೀಕರು, ಚಾಲಕರು, ಕ್ಲೀನರ್‌ ಮತ್ತು ಹಮಾಲರು ಸೇರಿ ಅಂದಾಜು 50 ಸಾವಿರ ಜನ ಈ ಉದ್ಯೋಗ ಅವಲಂಬಿಸಿದ್ದಾರೆ. ಏಳು ದಿನಗಳಿಂದ ಅವರೆಲ್ಲ ಖಾಲಿ ಕುಳಿತಿದ್ದಾರೆ’ ಎಂದು ಕಲಬುರ್ಗಿ ಜಿಲ್ಲಾ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಮೊಹ್ಮದ ಮೊಹಿದ್ದೀನ್‌ ಹೇಳಿದರು.

‘ಒಂದು ಲಾರಿಗೆ ನಿತ್ಯ ₹5 ಸಾವಿರ ಬಾಡಿಗೆ ಬರುತ್ತದೆ. ಎಲ್ಲ ಲಾರಿಗಳು ಬಂದ್‌ ಆಗಿದ್ದರಿಂದ ನಿತ್ಯ ಕನಿಷ್ಠ ₹5 ಕೋಟಿಯಷ್ಟು ಬಾಡಿಗೆ ಬರುವುದು ನಿಂತಿದೆ. ಜಿಲ್ಲೆಯಿಂದ ಸಿಮೆಂಟ್‌ ಪೂರೈಕೆಯಾಗುತ್ತಿಲ್ಲ. ಬೇಳೆ ಪೂರೈಕೆಯೂ ಸ್ಥಗಿತಗೊಂಡಿದೆ’ ಎಂದು ಅವರು ಹೇಳಿದರು.

‘ನಾವು ಯಾವುದೇ ಲಾರಿಯನ್ನು ಚಲಿಸಲು ಬಿಡುತ್ತಿಲ್ಲ. ಹೊರ ಊರಿನ ಲಾರಿಗಳನ್ನು ಜಿಲ್ಲೆಯೊಳಗೆ ಬಿಟ್ಟುಕೊಳ್ಳುತ್ತಿಲ್ಲ. ಎಲ್ಲ ಕೆಲಸಗಾರರು ಇಲ್ಲಿಯ ಮಹಾತ್ಮಗಾಂಧಿ ಲಾರಿ ತಂಗುದಾಣದಲ್ಲಿ ಇದ್ದು, ಅವರಿಗೆ ಸಂಘದಿಂದಲೇ ಊಟದ ವ್ಯವಸ್ಥೆ ಮಾಡಿದ್ದೇವೆ’ ಎಂದು ಅವರು ತಿಳಿಸಿದರು.

‘ಇದು ರಾಶಿಯ ಸಮಯ ಅಲ್ಲ. ಜಿಲ್ಲೆಯಿಂದ ಕೃಷಿ ಉತ್ಪನ್ನಗಳು ಸದ್ಯ ಮಾರುಕಟ್ಟೆಗೆ ಆವಕ ಮತ್ತು ಮಾರುಕಟ್ಟೆಯಿಂದ ಹೊರ ಊರುಗಳಿಗೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಅಡತ್‌ ಅಂಗಡಿಯವರಿಗೆ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಕಿರಾಣಿ ಮತ್ತು ತರಕಾರಿ ವರ್ತಕರು, ಕೈಗಾರಿಕೋದ್ಯಮಿಗಳಿಗೆ ತೊಂದರೆಯಾಗಿದೆ’ ಎಂದು ಅಡತ್‌ ಅಂಗಡಿಯ ಮಾಲೀಕರೂ ಆಗಿರುವ ಹೈದರಾಬಾದ್‌ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಗೌರವ ಕಾರ್ಯದರ್ಶಿ ಶಶಿಕಾಂತ ಬಿ.ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.