ADVERTISEMENT

ಕಳಪೆ ಹೆಸರು ಬೀಜ ಬಿತ್ತನೆ: ಸಂಕಷ್ಟಕ್ಕೆ ಸಿಲುಕಿದ ರೈತ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2021, 14:08 IST
Last Updated 15 ಸೆಪ್ಟೆಂಬರ್ 2021, 14:08 IST
ಚಿಂಚೋಳಿ ತಾಲ್ಲೂಕು ಚಂದನಕೇರಾ ಗ್ರಾಮದ ರೈತರ ಹೊಲಕ್ಕೆ ಚಿಮ್ಮನಚೋಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಭಿಲಾಷ್ ಸುಬೇದಾರ ಭೇಟಿ ನೀಡಿ ಕಾಯಿಬಿಡದ ಹೆಸರು ಬೆಳೆಯನ್ನು ಪರಿಶೀಲಿಸಿದರು
ಚಿಂಚೋಳಿ ತಾಲ್ಲೂಕು ಚಂದನಕೇರಾ ಗ್ರಾಮದ ರೈತರ ಹೊಲಕ್ಕೆ ಚಿಮ್ಮನಚೋಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಭಿಲಾಷ್ ಸುಬೇದಾರ ಭೇಟಿ ನೀಡಿ ಕಾಯಿಬಿಡದ ಹೆಸರು ಬೆಳೆಯನ್ನು ಪರಿಶೀಲಿಸಿದರು   

ಚಿಂಚೋಳಿ: ಕಳಪೆ ಹೆಸರು ಬೀಜ ಬಿತ್ತಿ ರೈತರು ಮೋಸ ಹೋದ ಪ್ರಕರಣ ತಾಲ್ಲೂಕಿನಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.

ತಾಲ್ಲೂಕಿನ ಚಿಮ್ಮನಚೋಡ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಬರುವ ಚಂದನಕೇರಾ ಗ್ರಾಮದಲ್ಲಿ ರೈತರು ನಕಳಿ ಹೆಸರು ಬೀಜ ಬಿತ್ತಿ ಕೈ ಸುಟ್ಟುಕೊಂಡಿದ್ದಾರೆ.

ಹೆಚ್ಚು ಇಳುವರಿ ಬರಲಿದೆ ಎಂದು ಆಸೆ ತೋರಿಸಿ ಬಿತ್ತನೆ ಬೀಜ ಮಾರಾಟ ಮಾಡಿದ ವ್ಯಾಪಾರಿಯ ಬಣ್ಣದ ಮಾತು ನಂಬಿದ ರೈತರು ಬೀಜ ಬಿತ್ತಿ ಮೂರು ತಿಂಗಳು ಗತಿಸಿದರೂ ಹೊಲದಲ್ಲಿ ಹೆಸರು ಬಳ್ಳಿಯಂತೆ ಬೆಳೆತೊಡಗಿದೆ. ಆದರೆ ಹೂವು ಮತ್ತು ಕಾಯಿ ಬಿಡುತ್ತಿಲ್ಲ. ಈ ಬೀಜ ನಕಲಿಯಾಗಿದ್ದು, ಬೆಳೆ ಗೊಡ್ಡಾಗಿದೆ ಎಂದು ರೈತರು ದೂರಿದ್ದಾರೆ.

ADVERTISEMENT

ರೈತರಾದ ಮಕ್ಬೂಲಸಾಬ್ ಕರೀಂಸಾಬ್, ರಮೇಶ ಶರಣಪ್ಪ ವಗ್ಗೆ, ಭೀಮಶಾ ಹುಸೇನಿ ದಂಡಿನ, ಶರಣರೆಡ್ಡಿ ಶಿವರಾಯ, ಮಲ್ಲಿಕಾರ್ಜುನ ಶಿವರಾಯ, ಸಿದ್ರಾಮ ಬಸಂತರಾವ್, ಇಸ್ಮಾಯಿಲಸಾಬ್ ಮೋದಿನಸಾಬ್ ಅವರು ಹೆಸರು ಬಿತ್ತನೆ ನಡೆಸಿದ್ದು, ಬೆಳೆ ಕಾಯಿ ಬಿಟ್ಟಿಲ್ಲ ಇದರಿಂದ ತಮಗೆ ನಷ್ಟವಾಗಿದೆ ಎಂದು ತಾಲ್ಲೂಕಿನ ಚಿಮ್ಮನಚೋಡ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಭಿಲಾಷ್ ಸುಬೇದಾರ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.

ರೈತರ ದೂರಿನ ಮೇರೆಗೆ ಚಂದನಕೇರಾ ಗ್ರಾಮಕ್ಕೆ ಭೇಟಿ ನೀಡಿದ ಕೃಷಿ ಅಧಿಕಾರಿ ಅಭಿಲಾಷ್ ರೈತರ ಹೊಲಗಳಿಗೆ ತೆರಳಿ ಬೆಳೆ ಪರಿಶೀಲಿಸಿದರು.

ಸ್ಥಳೀಯ ಧಾನ್ಯ ವ್ಯಾಪಾರಿಯೊಬ್ಬರು ಕಲಬುರ್ಗಿಯಿಂದ ಈ ಬೀಜ ತಂದಿದ್ದು ಹೆಚ್ಚು ಇಳುವರಿ ಬರಲಿದೆ ಎಂದು ತನಗೆ ಬೇಕಾದ (ಆಪ್ತ) ರೈತರಿಗೆ ಬೀಜ ನೀಡಿದ್ದಾರೆ. ಸದರಿ ವ್ಯಾಪಾರಿಯ ಹೇಳಿಕೆ ಪಡೆದು ಮುಂದಿನ ಕ್ರಮಕ್ಕಾಗಿ ಮೇಲಧಿಕಾರಿಗಳಿಗೆ ವರದಿ ನೀಡಲಾಗುವುದು ಎಂದು ಅಭಿಲಾಷ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.