ADVERTISEMENT

ಹೆಚ್ಚುತ್ತಿರುವ ‘ಲಂಪಿಸ್ಕಿನ್’: ಅಸ್ವಸ್ಥ ರಾಸುಗಳನ್ನು ಪ್ರತ್ಯೇಕವಾಗಿರಿಸಲು ಸಲಹೆ

ರೈತರು ಕಂಗಾಲು, ಲಕ್ಷಣ ಆಧರಿಸಿ ಚಿಕಿತ್ಸೆ ನೀಡುತ್ತಿರುವ ವೈದ್ಯರು

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 8:20 IST
Last Updated 3 ಸೆಪ್ಟೆಂಬರ್ 2020, 8:20 IST
ಚಿಂಚೋಳಿ ತಾಲ್ಲೂಕು ಸಂಗಾಪುರದಲ್ಲಿ ಲಂಪಿಸ್ಕಿನ್‌ನಿಂದ ಬಳಲುತ್ತಿರುವ ಎತ್ತು
ಚಿಂಚೋಳಿ ತಾಲ್ಲೂಕು ಸಂಗಾಪುರದಲ್ಲಿ ಲಂಪಿಸ್ಕಿನ್‌ನಿಂದ ಬಳಲುತ್ತಿರುವ ಎತ್ತು   

ಚಿಂಚೋಳಿ: ಜಾನುವಾರುಗಳನ್ನು ಬಾಧಿಸುತ್ತಿರುವ ಲಂಪಿಸ್ಕಿನ್ ಕಾಯಿಲೆ ಕರ್ನಾಟಕ– ತೆಲಂಗಾಣ ಗಡಿಯಲ್ಲಿ ರೈತರನ್ನು ಬೆಚ್ಚಿ ಬೀಳಿಸುತ್ತಿದೆ. ಗಡಿ ನಾಡಿನಲ್ಲಿ ಶೇ 25ರಷ್ಟು ಜಾನುವಾರುಗಳಲ್ಲಿ ಹಾಗೂ ಉಳಿದ ಕಡೆಗಳಲ್ಲಿ ಶೇ 5 ರಷ್ಟು ಜಾನುವಾರುಗಳಲ್ಲಿ ಲಂಪಿಸ್ಕಿನ್ ಬಾಧಿಸುತ್ತಿದೆ.

‘ನಮಗೆ ಪ್ರತಿನಿತ್ಯ ಗಡಿ ಭಾಗದ ರೈತರಿಂದ ನೂರಾರು ಕರೆಗಳು ಬರುತ್ತಿವೆ. ಅವರ ಜಾನುವಾರುಗಳನ್ನು ಉಳಿಸಿಕೊಳ್ಳಲು ಸರ್ಕಾರದಿಂದ ಸೂಕ್ತ ಔಷಧ ಇನ್ನೂ ಸಂಶೋಧನೆಯಾಗದಿರುವುದರಿಂದ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ’ ಎಂದು ಪಶು ಪಾಲನಾ ಇಲಾಖೆಯ ಸಹಾಯಕ ನಿರ್ದೆಶಕ ಡಾ.ಧನರಾಜ ಬೊಮ್ಮಾ ತಿಳಿಸಿದರು.

ತಾಲ್ಲೂಕಿನ ವೆಂಕಟಾಪುರ, ಸಂಗಾಪುರ, ಜಿಲವರ್ಷಾ, ಲಕ್ಷ್ಮಾಸಾಗರ, ಶಿವರಾಂಪುರ, ಶಿವರೆಡ್ಡಿಪಳ್ಳಿ, ಮೊಗದಂಪುರ, ಕುಂಚಾವರಂ, ಶಾದಿಪುರ, ಚಿಕ್ಕಲಿಂಗದಳ್ಳಿ, ಕುಸ್ರಂಪಳ್ಳಿ, ನಾಗಾಈದಲಾಯಿ ತಾಂಡಾ, ಮಿರಿಯಾಣ, ಕಲ್ಲೂರು ರೋಡ್, ಕಿಷ್ಟಾಪುರ, ಭೈರಂಪಳ್ಳಿ ಮತ್ತು ಜಟ್ಟೂರು, ಪೊತಂಗಲ್, ಹಲಕೋಡಾ ಮೊದಲಾದ ಕಡೆಗಳಲ್ಲಿ ರೋಗ ಉಲ್ಬಣಿಸುತ್ತಿದೆ.

ADVERTISEMENT

ಉಳಿದ ಕಡೆಗಳಲ್ಲಿ ರೋಗ ಪತ್ತೆಯಾಗಿದ್ದು ಅಸ್ವಸ್ಥ ಜಾನುವಾರುಗಳನ್ನು ಇತರ ಜಾನುವಾರುಗಳಿಂದ ಬೇರ್ಪಡಿಸಿ ಪ್ರತ್ಯೇಕವಾಗಿರಿಸಲು ಪಶುವೈದ್ಯರು ಸಲಹೆ ನೀಡುತ್ತಿದ್ದಾರೆ. ಆದರೆ ಸ್ಥಳದ ಅಭಾವದಿಂದ ರೈತರಿಗೆ ಇದು ಸಾಧ್ಯವಾಗದಂತಾಗಿದೆ.

ಮನವಿ: ಲಂಪಿಸ್ಕಿನ್ ಕಾಯಿಲೆಗೆ ಔಷಧವಿಲ್ಲ. ಆದರೆ ಜಾನುವಾರುಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಔಷಧವನ್ನು ಪಶು ಆಸ್ಪತ್ರೆ ಮತ್ತು ಪಶು ಚಿಕಿತ್ಸಾಲಯಗಳಿಗೆ ಸರ್ಕಾರ ಪೂರೈಸಬೇಕು ಎಂದು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಜಗಜೀವನರೆಡ್ಡಿ ಪಾಟೀಲ ಮಿರಿಯಾಣ ಮನವಿ ಮಾಡಿದ್ದಾರೆ.

ಲಂಪಿಸ್ಕಿನ್ ಕಾಯಿಲೆಯಿಂದ ಬಳಲುತ್ತಿರುವ ಜಾನುವಾರುಗಳ ಹಾಗೂ ರೈತರ ಗೋಳು ಕೇಳುವವರೇ ಇಲ್ಲದಂತಾಗಿದೆ. ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕೆಂದು ಮುಖಂಡ ರವಿ ಜಾಧವ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.