ADVERTISEMENT

ಶೋಷಿತರಿಗೆ ಸ್ಥೈರ್ಯ ತುಂಬಿದ ಅಂಬೇಡ್ಕರ್: ಸುರೇಶ ಶರ್ಮಾ

‘ಮಹಾಡ್ ಕಡೆಗೆ ನಮ್ಮ ಹೋರಾಟದ ನಡಿಗೆ’ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 5:26 IST
Last Updated 20 ಮಾರ್ಚ್ 2021, 5:26 IST
ಕಲಬುರ್ಗಿಯ ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಸುರೇಶ ಶರ್ಮಾ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಕಲಬುರ್ಗಿಯ ಕನ್ನಡ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಸುರೇಶ ಶರ್ಮಾ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಕಲಬುರ್ಗಿ: ಮಾನವ ಹಕ್ಕುಗಳಿಂದ ವಂಚಿತರಾಗಿದ್ದ ಶೋಷಿತ ಸಮುದಾಯಗಳಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರು ಆತ್ಮಸ್ಥೈರ್ಯ ತುಂಬಿ, ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾದರು ಎಂದು ಸಣ್ಣ ನೀರಾವರಿ ಇಲಾಖೆಯಅಧೀಕ್ಷಕ ಎಂಜಿನಿಯರ್ ಸುರೇಶ ಶರ್ಮಾ ತಿಳಿಸಿದರು.

ನಗರದ ಕನ್ನಡ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ) ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಮಹಾಡ್ ಕಡೆಗೆ ನಮ್ಮ ಹೋರಾಟದ ನಡಿಗೆ’ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಮಾರ್ಚ್ 19, 1927ರಲ್ಲಿ ನಡೆದ ಮಹಾಡ್ ಸತ್ಯಾಗ್ರಹ ಕೇವಲ ಕೆರೆ ನೀರು ಬಳಸಲು ಅವಕಾಶ ಪಡೆಯುವ ಉದ್ದೇಶಕ್ಕೆ ಸೀಮಿತವಾಗಿರಲಿಲ್ಲ. ಅದರ ಹಿಂದೆ ಸಮ ಸಮಾಜದ ಕನಸಿತ್ತು. ನೈಸರ್ಗಿಕ ಸಂಪತ್ತಿನ ಮೇಲೆ ಎಲ್ಲರಿಗೂ ಹಕ್ಕಿದೆ ಎಂದು ಹೇಳುವುದಾಗಿತ್ತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ನೇತೃತ್ವದಲ್ಲಿ ನಡೆದ ಈ ಐತಿಹಾಸಿಕ ಸತ್ಯಾಗ್ರಹ ಶೋಷಿತ ಸಮುದಾಯಗಳಲ್ಲಿ ಸ್ವಾಭಿಮಾನ ತುಂಬಿ, ತಮ್ಮ ಹಕ್ಕುಗಳಿಗಾಗಿ ಹೋರಾಡುವಂತೆ ಪ್ರೇರೆಪಿಸಿತು ಎಂದು ಹೇಳಿದರು.

ADVERTISEMENT

ಡಾ.ಬಿ.ಆರ್.ಅಂಬೇಡ್ಕರ್ ಪದವಿ ಕಾಲೇಜಿನ ಪ್ರಾಚಾರ್ಯ ಐ.ಎಸ್.ವಿದ್ಯಾಸಾಗರ ಮಾತನಾಡಿ, ಮೇಲ್ಜಾತಿ ಜನರು ಅಸ್ಪೃಶ್ಯ ಸಮುದಾಯಗಳಿಗೆ ಕೆರೆ ನೀರು ಕುಡಿಯಲು ಅವಕಾಶ ನೀಡುತ್ತಿರಲಿಲ್ಲ. ಇದನ್ನು ಪ್ರಶ್ನಿಸಿ ಡಾ.ಬಿ.ಆರ್. ಅಂಬೇಡ್ಕರ್ ಅವರು 10 ಸಾವಿರ ಸಂಗಡಿಗರೊಂದಿಗೆ ಮಹಾಡ್ ಸತ್ಯಾಗ್ರಹ ಕೈಗೊಂಡು, ಶೋಷಿತರ ಸ್ವಾತಂತ್ರ್ಯ ಹೋರಾಟಕ್ಕೆ ನಾಂದಿ ಹಾಡಿದ್ದರು. ಸತ್ಯಾಗ್ರಹಿಗಳ ಮೇಲೆ ಹಲ್ಲೆಗಳಾದರೂ ಅಂಬೇಡ್ಕರ್ ಅವರು ಹಿಂಸೆಗೆ ಕರೆ ಕೊಡದೆ, ಅಹಿಂಸಾತ್ಮಕವಾಗಿ ಹೋರಾಟ ಸಂಘಟಿಸಿದರು. ಇದು ಚಳವಳಿ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಬದ್ಧತೆಯನ್ನು ತಿಳಿಸುತ್ತದೆ ಎಂದು ಹೇಳಿದರು.

ಸರ್ಕಾರಿ ಸಂಸ್ಥೆಗಳನ್ನು ಮಾರಾಟ ಮಾಡುವ ಮೂಲಕ ಮೀಸಲಾತಿ ನಾಶಪಡಿಸುವ ಹುನ್ನಾರ ನಡೆಸಲಾಗುತ್ತಿದೆ. ಶೋಷಿತರು ಜಾಗೃತರಾಗದಿದ್ದರೆ ಮತ್ತೆ ಸ್ವಾತಂತ್ರ್ಯ ಪೂರ್ವದ ಸ್ಥಿತಿಗತಿಗೆ ಬಂದರೆ ಅಚ್ಚರಿಯಿಲ್ಲ. ಈ ಬಗ್ಗೆ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಬೇಕಾಗಿದೆ. ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ, ಸಂಘಟನೆ ಮೂಲಕ ಹಕ್ಕುಗಳನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಿದೆ ಎಂದು ಹೇಳಿದರು.

ಸರ್ಕಾರಗಳು ಜಾತಿವಾದಿಗಳ ಹಿಡಿತದಲ್ಲಿವೆ. ರಾಜಕಾರಣಿಗಳು ಮತ್ತು ಧರ್ಮಗುರುಗಳು ಜನರಲ್ಲಿ ಜಾತಿಪ್ರಜ್ಞೆ ಬೆಳೆಸುತ್ತಿದ್ದಾರೆ. ಪರಿಶಿಷ್ಟರನ್ನು ಹಂತ ಹಂತವಾಗಿ ಶೋಷಣೆಗೆ ಒಳಪಡಿಸುವ ಹುನ್ನಾರ ನಡೆಯುತ್ತಿದೆ. ಶೋಷಿತರನ್ನು ಒಡೆಯುವ ಶಕ್ತಿಗಳು ಯಾವಾಗಲು ಎಚ್ಚರದಿಂದ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಯುವಕರು ಜಾಗೃತರಾಗಿ ಸಂವಿಧಾನ ವಿರೋಧಿಗಳ ವಿರುದ್ಧ ಹೋರಾಟ ರೂಪಿಸಬೇಕು ಎಂದು ಕರೆ ನೀಡಿದರು.

‘ಬಸವ ಸದ್ಭಾವನಾ ಪ್ರಶಸ್ತಿ’ ಪುರಸ್ಕೃತರಾದ ಶಿವಮೂರ್ತಿ ಶಾಸ್ತ್ರಿ ಅವರನ್ನು ಸನ್ಮಾನಿಸಲಾಯಿತು.

ಬೀದರ್‌ನ ಅಣದೂರು ಬುದ್ಧವಿಹಾರದ ಭಂತೇಜಿ ವರಜ್ಯೋತಿ ಮತ್ತು ಕಲಬುರ್ಗಿ ಬುದ್ಧವಿಹಾರದ ಸಂಘಾನಂದ ಭಂತೇಜಿ ಸಾನ್ನಿಧ್ಯ ವಹಿಸಿದ್ದರು.

ವಕೀಲೆ ಅಶ್ವಿನಿ ಮದನಕರ್ ಉಪನ್ಯಾಸ ನೀಡಿದರು. ದಸಂಸ ಯಾದಗಿರಿ ಜಿಲ್ಲಾ ಘಟಕದ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಅಧ್ಯಕ್ಷತೆ ವಹಿಸಿದ್ದರು.

ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಮಹಾಂತೇಶ ಬಡದಾಳ, ಮುಖಂಡರಾದ ಶಿವಮೂರ್ತಿ ಶಾಸ್ತ್ರಿ, ನರೇಶ ಹಳ್ಳಿ, ವಿಶ್ವನಾಥ ಕಾರ್ನಾಡ್‌, ಮಲ್ಲಿಕಾರ್ಜುನ ಖನ್ನಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.