ADVERTISEMENT

ಮಹಾದೇವಿಯಕ್ಕಗಳ ಸಮ್ಮೇಳನ ನಾಳೆಯಿಂದ

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2019, 9:17 IST
Last Updated 8 ಆಗಸ್ಟ್ 2019, 9:17 IST
ದಾಕ್ಷಾಯಿಣಿ ಅಪ್ಪಾ
ದಾಕ್ಷಾಯಿಣಿ ಅಪ್ಪಾ   

ಕಲಬುರ್ಗಿ: ಬಸವ ಸಮಿತಿಯ ಅಕ್ಕನ ಬಳಗದ ವತಿಯಿಂದ ಆಗಸ್ಟ್ 10 ಮತ್ತು 11ರಂದು 12ನೇ ವರ್ಷದ ಮಹಾದೇವಿಯಕ್ಕಗಳ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಕಾರ್ಯಾಧ್ಯಕ್ಷೆ ಡಾ.ಜಯಶ್ರೀ ದಂಡೆ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಯನಗರದ ಅನುಭವ ಮಂಟಪದಲ್ಲಿ ಸಮ್ಮೇಳನ ನಡೆಯಲಿದೆ. ಶರಣಬಸವೇಶ್ವರ ಸಂಸ್ಥಾನದ ದಾಕ್ಷಾಯಿಣಿ ಅಪ್ಪಾ ಅವರನ್ನು ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆ ಮಾಡಲಾಗಿದೆ ಎಂದರು.

ಗೃಹಿಣಿಯರಿಗಾಗಿ ಈ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರನ್ನು ಗುರುತಿಸಿ, ಗೌರವಿಸುವುದು ಈ ಸಮ್ಮೇಳನದ ಉದ್ದೇಶ. ಕಲಬುರ್ಗಿ, ಬೀದರ್, ಜೇವರ್ಗಿ, ಚಿಂಚೋಳಿ, ಬೆಂಗಳೂರಿನ 85 ಜನ ಗೃಹಿಣಿಯರು, 85 ವಿದ್ಯಾರ್ಥಿನಿಯರು ಸಮ್ಮೇಳನದಲ್ಲಿ ಭಾಗಹಿಸಲಿದ್ದಾರೆ ಎಂದು ಹೇಳಿದರು.

ADVERTISEMENT

ಬೆಳಿಗ್ಗೆ 8 ಗಂಟೆಗೆ ಮಾಜಿ ಶಾಸಕಿ ಅರುಣಾ ಪಾಟೀಲ ಅವರು ಷಟ್‌ಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ. ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಮಧುರಾ ಅಶೋಕ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವೆ ಲೀಲಾದೇವಿ ಆರ್‌.ಪ್ರಸಾದ್ ಅವರು ಭಾಗವಹಿಸಲಿದ್ದಾರೆ ಎಂದರು.

ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ದಾಂಪತ್ಯದ ಅರಿವು ಮೂಡಿಸುವುದು ಅಗತ್ಯವಾಗಿದೆ. ಹೀಗಾಗಿ ದಾಂಪತ್ಯ ಜೀವನದ ಕುರಿತು ಯುವತಿಯರಿಗೆ ತಿಳಿವಳಿಕೆ ಮೂಡಿಸಲು ಸತಿಪತಿಗಳೊಂದಾಗ ಭಕ್ತಿ ಎಂಬ ಗೋಷ್ಠಿ ಆಯೋಜಿಸಲಾಗಿದೆ. ಅಲ್ಲದೆ, ಮಾತು–ವ್ಯಕ್ತಿತ್ವ, ಆರೋಗ್ಯ ಭಾಗ್ಯ ಸೇರಿ ವಿವಿಧ ಐದು ಗೋಷ್ಠಿಗಳು ನಡೆಯಲಿವೆ. ಶರಣರ ತತ್ವಗಳನ್ನು ಬೇರೆ ಬೇರೆ ಧರ್ಮಗಳಲ್ಲಿಯೂ ಕಾಣಬಹುದು. ಹೀಗಾಗಿ ಶರಣ –ಸಂತ–ಸೂಫಿ ಗೋಷ್ಠಿ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವಿದ್ಯಾರ್ಥಿನಿಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಮುಸ್ಲಿಂ ತತ್ವಪದಕಾರರ ಸಾಹಿತ್ಯಕ್ಕೆ ಸಂಗೀತ ಸಂಯೋಜನೆ ಮಾಡಿ ವೇದಿಕೆಯಲ್ಲಿ ಹಾಡಲಾಗುತ್ತದೆ. ಅದಕ್ಕೆ ತಕ್ಕಂತೆ ಹೈದರಾಬಾದ್ ಕರ್ನಾಟಕ ಭಾಗದ ಕಲಾವಿದೆಯರು ಚಿತ್ರ ಬಿಡಿಸಲಿದ್ದಾರೆ ಎಂದರು.

2015ರಿಂದ ವೈರಾಗ್ಯನಿಧಿ ಪ್ರಶಸ್ತಿ ನೀಡಲಾಗುತ್ತಿದೆ. ಈ ಬಾರಿ ಬಿಬಿಎಂಪಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಲ್ಲದೆ, ಈ ಭಾಗದ ಹಿರಿಯ ಚಿತ್ರ ಕಲಾವಿದೆಯರನ್ನು ಸನ್ಮಾನಿಸಲಾಗುತ್ತದೆ ಎಂದು ಹೇಳಿದರು.

ಶರಣಬಸವೇಶ್ವರ ಸಂಸ್ಥಾನದ ಆವರಣದಲ್ಲಿ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ. ಅಲ್ಲಿಂದ ವಾಹನದಲ್ಲಿ ಜಯನಗರದ ಮೊದಲನೇ ಕ್ರಾಸ್‌ಗೆ ಬಂದು ನಂತರ ಅನುಭವ ಮಂಟಪದವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.

ಬಳಗದ ಗೌರವಾಧ್ಯಕ್ಷೆ ಡಾ.ವಿಲಾಸವತಿ ಖೂಬಾ, ಕಾರ್ಯದರ್ಶಿ ಅನಸೂಯಾ ನಡಕಟ್ಟಿ, ಗೌರವಾಧ್ಯಕ್ಷೆ ಶರಣಮ್ಮ, ಸಾವಿತ್ರಿ ಪಾಟೀಲ ಅವರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.