ADVERTISEMENT

ಹಲಗೆ ಹೆಗಲೇರಿಸಿಕೊಂಡ ವನಿತೆಯರು

ತಾರತಮ್ಯದ ಗೋಡೆ ಒಡೆದ ಕುರಕುಂಟ ಗ್ರಾಮದ ಮಹೇಶ್ವರಿ ಹಲಗೆ ಮೇಳ

ಸಂತೋಷ ಈ.ಚಿನಗುಡಿ
Published 8 ಮಾರ್ಚ್ 2021, 5:34 IST
Last Updated 8 ಮಾರ್ಚ್ 2021, 5:34 IST
ಕುರಕುಂಟ ಗ್ರಾಮದ ಮಹೇಶ್ವರಿ ಹಲಗೆ ತಂಡಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.
ಕುರಕುಂಟ ಗ್ರಾಮದ ಮಹೇಶ್ವರಿ ಹಲಗೆ ತಂಡಪ್ರಜಾವಾಣಿ ಚಿತ್ರ: ಪ್ರಶಾಂತ್‌ ಎಚ್‌.ಜಿ.   

ಕಲಬುರ್ಗಿ:ಢಂಡನಕ, ಟಂಟನಕ... ಢಂಡನಕ, ಟಂಟನಕ...ಎಂದು ಆ ವನಿತೆಯರು ಹಲಗೆ ಬಾರಿಸುತ್ತಿದ್ದರೆ, ಸುತ್ತ ಸೇರಿದವರ ಕಾಲುಗಳು ಕುಣಿಯದೇ ಇರಲಾರವು. ಅವರ ಒಗ್ಗಟ್ಟು, ಹೆಜ್ಜೆ ಹಾಕುವ ಪರಿ, ಏಕಕಾಲಕ್ಕೆ ಚಿಮ್ಮುವ ನಾದ, ಉತ್ಸಾಹ ಪುರುಷರನ್ನೂ ಮೀರಿಸುವಂಥದ್ದು.

ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಕುರಕುಂಟ ಗ್ರಾಮದ ಹತ್ತು ಮಹಿಳೆಯರು ಒಂದಾಗಿ ಕಟ್ಟಿಕೊಂಡ ಈ ತಂಡದ ಹೆಸರು ಮಹೇಶ್ವರಿ ಹಲಗೆ ಮೇಳ. ತಂಡದಲ್ಲಿರುವ ಎಲ್ಲರೂ 40 ರಿಂದ 50 ವರ್ಷದ ಆಸುಪಾಸಿನವರು! ಹಾಗಾಗಿ, ಇದನ್ನು ತಾಯಂದಿರ ಹಲಗೆ ಮೇಳ ಎಂದೇ ಹೇಳಬೇಕು. ಈ ಬಾರಿಯ ವಿಶ್ವ ಮಹಿಳಾ ದಿನಾಚರಣೆಗೆ ಪ್ರೇರಣಾ ನಾದವಾಗಿ ಹೊರಹೊಮ್ಮಿದ್ದಾರೆ ಈ ತಾಯಂದಿರು.

ಮನೆಯಿಂದ ಹೊರ ಬರಲು ಸಂಕೋಚ ಪಡುವಂಥ ಪ್ರದೇಶದಲ್ಲಿ, ಈ ಗಟ್ಟಿಗಿತ್ತಿಯರು ತಮ್ಮೊಳಗಿನ ಕಲೆಯನ್ನೂ ಒರೆಗೆ ಹಚ್ಚಿದ್ದಾರೆ. ಪುರುಷರು ಮಾತ್ರ ಬಡಿಯುತ್ತಿದ್ದ ಹಲಗೆಗಳನ್ನು ಹೆಗಲೇರಿಸಿಕೊಂಡು ಸೈ ಎಣಿಸಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಹುರುದುಂಬಿಸುತ್ತ, ಹಲಗೆ ನಾದಕ್ಕೆ ತಕ್ಕಂತೆ ಕುಣಿಯುವ ಇವರನ್ನು ನೋಡುವುದೇ ಹೆಮ್ಮೆ.

ADVERTISEMENT

60 ವರ್ಷ ವಯಸ್ಸಿನ ತಿಪ್ಪಮ್ಮ ಬಾಲಪ್ಪ ಸಿಂಗನೂರ ಈ ತಂಡದ ಹಿರಿಯ ಸದಸ್ಯೆ. ದುರ್ಗಮ್ಮ ಈರಪ್ಪ, ಕೃಷ್ಣಮ್ಮ ದೊಡ್ಡಬಲರಾಮ ಮಟ್ಟಿ, ನರಸಮ್ಮ ಸಣ್ಣಬಲರಾಮ ಮಟ್ಟಿ, ನಾಗಮ್ಮ ದ್ಯಾವಪ್ಪ ಮುದೆಳ್ಳಿ, ನರಸಮ್ಮ ಲಕ್ಷ್ಮಪ್ಪ ಟೈಗರ್, ಸೈದಮ್ಮ ಕೃಷ್ಣಪ್ಪ ಹಲಗಿ, ನರಸಮ್ಮ ತಿಪ್ಪಣ್ಣ ಮಟ್ಟಿ, ಮರೆಮ್ಮ ಬಲರಾಮ ಐದಮನಿ ತಂಡದಲ್ಲಿ ಕ್ರಿಯಾಶೀಲವಾದವರು.ವೆಂಕಟೇಶ ಹಣಮಂತ ಐದಮನಿ ಎಂಬ ಯುವಕ ಇವರ ನೆರವಿಗೆ ಇದ್ದಾರೆ.

ಮೇಲು–ಕೀಳಿನ ಗೋಡೆ ಒಡೆದು: ಕುರಕುಂಟ ಗ್ರಾಮವು ತೆಲಂಗಾಣ ರಾಜ್ಯಕ್ಕೆ ಅಂಟಿಕೊಂಡಿರುವ ಕರ್ನಾಟಕದ ಕೊನೆಯ ಹಳ್ಳಿ. 8 ಸಾವಿರ ಜನಸಂಖ್ಯೆ ಹೊಂದಿರುವ ಈ ಊರಿನಲ್ಲಿ ಬಹುಪಾಲು ಜನ ತೆಲಗು ಭಾಷೆಯನ್ನೇ ಮಾತನಾಡುತ್ತಾರೆ. ಹಲಗೆ ಮೇಳದ ಎಲ್ಲ ಮಹಿಳೆಯರು ತೆಲುಗು ಹಾಗೂ ಕನ್ನಡ ಮಾತನಾಡುವವರು. ಅನಾದಿ ಕಾಲದಿಂದಲೂ ಪುರುಷರು ಮಾತ್ರ ಹಲಗೆ ಬಡಿಯುವ ರೂಢಿ ಇತ್ತು.

ಈ ಸಂಪ್ರದಾಯವನ್ನು ಮೆಟ್ಟಿನಿಂತ ಕುರಕುಂಟ ಗ್ರಾಮದ ‘ವೀರ ವನಿತೆಯರು’ ಹಲಗೆ ಹೆಗಲೇರಿಸಿಕೊಂಡರು. ಆರಂಭದಲ್ಲಿ ಮನೆಯ ಪುರುಷರು ಕಿರಿಕಿರಿ ಮಾಡಿದರು. ಊರಿನ ಜನ ಮೂದಲಿಸಿದರು. ಆದರೆ, ಹಲಗೆ ನಾದದ ಗುಂಗಿನಲ್ಲಿ ಮಿಂದಿದ್ದ ಈ ಹೆಣ್ಣುಮಕ್ಕಳು ಮಾತ್ರ ತಮ್ಮಲ್ಲಿ ಕೀಳರಿಮೆ ಮೂಡಲು ಬಿಡಲಿಲ್ಲ.

ತಮ್ಮೂರಿನ ಜಾತ್ರೆ, ಪಕ್ಕದೂರಿನ ಉತ್ಸವಗಳಂಥ ಸಣ್ಣಪುಟ್ಟ ಕಾರ್ಯಕ್ರಮಗಳಲ್ಲಿ ಹಲಗೆ ಗುಂಗು ಹಿಡಿಸಿದ ಈ ತಂಡಕ್ಕೆ ನೋಡನೋಡುತ್ತಿದ್ದಂತೆ ಜಿಲ್ಲೆಯ ಮೂಲೆಮೂಲೆಯಿಂದ ಬೇಡಿಕೆ ಬರಲಾರಂಭಿಸಿತು. ಅರ್ಧ ಆಯಸ್ಸಿನ ನಂತರವೂ ತಮ್ಮೊಳಗೆ ಹುದುಗಿದ್ದ ಕಲಾವಿದೆಯನ್ನು ಹುಡುಕುವಲ್ಲಿ ಈ ತಾಯಂದಿರು ತೆಗೆದುಕೊಂಡ ನಿರ್ಧಾರ ಮಾದರಿಯಾದದ್ದು.

ಜಿಲ್ಲಾಮಟ್ಟದ ರಾಜ್ಯೋತ್ಸವ, ಮಹಾತ್ಮರ ಜಯಂತಿ ಕಾರ್ಯಕ್ರಮ, ಜಾತ್ರೆ, ಉತ್ಸವ ಮುಂತಾದ ಸಮಾರಂಭಗಳಲ್ಲಿಯೂ ಇವರ ಹಲಗೆ ಸದ್ದು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.