ಯಡ್ರಾಮಿ: ತಾಲ್ಲೂಕಿನ ಮಲ್ಲಾಬಾದ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಹುತೇಕ ಎಲ್ಲ ಕೊಠಡಿಗಳು ಮಳೆಗಾಲದಲ್ಲಿ ಸೋರುತ್ತಿದ್ದು, ಜೀವ ಭಯದಲ್ಲಿಯೇ ವಿದ್ಯಾರ್ಥಿಗಳನ್ನು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.
ಶಾಲೆಯಲ್ಲಿ 1 ರಿಂದ 8ನೇ ತರಗತಿವರೆಗೆ 106 ಬಾಲಕಿಯರು ಹಾಗೂ 108 ಬಾಲಕರು ಸೇರಿ ಒಟ್ಟು 214 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಶಾಲೆಯಲ್ಲಿ ಅಡುಗೆ ಕೋಣೆ, ಕಚೇರಿ ಸೇರಿ ಒಟ್ಟು 9 ಕೊಠಡಿಗಳಿವೆ.
ಶಾಲೆಯ ಕೊಠಡಿಗಳು ಸುಮಾರು 20 ವರ್ಷಗಳ ಹಳೆಯದ್ದಾಗಿದ್ದು, ಮಳೆಗಾಲದಲ್ಲಿ 9 ಕೊಠಡಿಗಳ ಪೈಕಿ 7 ಕೊಠಡಿಗಳು ಸೋರುತ್ತಿವೆ. ಉಳಿದ ಎರಡು ಕೊಠಡಿಯಲ್ಲಿಯೇ 214 ಮಕ್ಕಳಿಗೆ ಪಾಠ ಮಾಡುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದ 9 ವರ್ಷಗಳಿಂದ ಶಾಲಾ ಕೊಠಡಿಗಳು ಸೋರುತ್ತಿದ್ದು, ಈ ಕುರಿತು ಜನಪ್ರತಿನಿಧಿ ಹಾಗೂ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಲಾಗಿದೆ, ಆದರೂ ಪ್ರಯೋಜವಾಗಿಲ್ಲ. ಇನ್ನು ಶಾಲೆಯ ಆವರಣದಲ್ಲಿ ವಿದ್ಯಾರ್ಥಿನಿಯರಿಗಾಗಿ ಶೌಚಾಲಯ ನಿರ್ಮಿಸಲಾಗಿದ್ದು, ನೀರಿನ ಸಮಸ್ಯೆಯಿಂದಾಗಿ ಬಳಕೆ ಇಲ್ಲದಂತಾಗಿದೆ.
ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಸರ್ಕಾರಿ ಶಾಲೆಗಳನ್ನು ಆರಂಭಿಸಿದೆ. ಆದರೆ ಅಗತ್ಯ ಸೌಕರ್ಯ ಇಲ್ಲದ ಕಾರಣ ಮಕ್ಕಳು ಸರ್ಕಾರಿ ಶಾಲೆಗಳಿಂದ ಹೋಗುವ ಸ್ಥಿತಿ ನಿರ್ಮಾಣವಾಗಿದೆ.
‘ಗ್ರಾಮ ಪಂಚಾಯಿತಿಯಿಂದ ಸಣ್ಣಪುಟ್ಟ ದುರಸ್ತಿ ಕಾರ್ಯಗಳೂ ಆಗಿಲ್ಲ. ಕೆಲವೊಮ್ಮೆ ಕಾಟಾಚಾರಕ್ಕೆ ಕೆಲಸ ಮಾಡಿ ಬಿಲ್ ತೆಗೆಯಲಾಗಿದೆ ಎಂದು ದೂರುಗಳಿವೆ. ತಾಲ್ಲೂಕು ಪಂಚಾಯಿತಿಯಲ್ಲಿ ಪ್ರತಿ ವರ್ಷ ಶಿಕ್ಷಣಕ್ಕಾಗಿ ಹಣ ಮೀಸಲಿರುತ್ತದೆ. ಆದರೆ ತಾಲ್ಲೂಕ ಪಂಚಾಯಿತಿ ಅಧಿಕಾರಿಗಳು ಶಾಲೆಯತ್ತ ಗಮನಹರಿಸಿಲ್ಲ’ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
‘ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿ, ಜನಪ್ರತಿನಿಧಿ ಗಮನಹರಿಸಿ ಶಾಲೆಯ ದುರಸ್ತಿಗೆ ಮುಂದಾಗಬೇಕು. ಮಕ್ಕಳಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿ ಕೊಡಬೇಕು’ ಎನ್ನುತ್ತಾರೆ ಗ್ರಾಮಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.