ADVERTISEMENT

ಕಲಬುರಗಿ | ಮುಖ್ಯಮಂತ್ರಿಗಳಿಗೆ ಮನವಿಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2025, 15:51 IST
Last Updated 16 ಏಪ್ರಿಲ್ 2025, 15:51 IST
ಕಲಬುರಗಿಯಲ್ಲಿ ಬುಧವಾರ ಸಂಘಟನೆಗಳ ಮುಖ್ಯಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು
ಕಲಬುರಗಿಯಲ್ಲಿ ಬುಧವಾರ ಸಂಘಟನೆಗಳ ಮುಖ್ಯಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು   

ಕಲಬುರಗಿ: ವಿವಿಧ ಸಂಘ– ಸಂಸ್ಥೆಗಳ ಪ್ರತಿನಿಧಿಗಳು, ಸಂಘಟನೆಗಳ ಮುಖ್ಯಸ್ಥರು, ರಾಜಕೀಯ ನಾಯಕರು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿಗಳನ್ನು ಸಲ್ಲಿಸಿದರು.

ಶಕ್ತಿ ಯೋಜನೆ ಜಾರಿಯ ಬಳಿಕ ಟ್ಯಾಕ್ಸಿ ಚಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜತೆಗೆ ಡೀಸೆಲ್ ದರ ಏರಿಕೆಯಿಂದಾಗಿ ಆರ್ಥಿಕ ಹೊರೆಯೂ ಹೆಚ್ಚಾಗಿದೆ. ಟ್ಯಾಕ್ಸಿ ಚಾಲಕರ ನಿಗಮ ಮಂಡಳಿ ಮಾಡಿದ್ದರೂ ಅನುದಾನ ಬಿಡುಗಡೆಯಾಗಿಲ್ಲ. ಚಾಲಕರ ಸಮಸ್ಯೆಗಳತ್ತ ಗಮನಹರಿಸಿ ಟ್ಯಾಕ್ಸಿ ಚಾಲಕರ ಕಾರ್ಡ್ ವಿತರಣೆ ಮಾಡಬೇಕು ಎಂದು ಕಲ್ಯಾಣ ಕರ್ನಾಟಕ ಸಾರಥಿ ಚಾಲಕ ಅಭಿವೃದ್ಧಿ ಸಂಘದ ಅಧ್ಯಕ್ಷ ಜಗದೀಶ ದೇಸಾಯಿ ಕೋರಿದರು.

ಜಿಲ್ಲೆಯ ವಿವಿಧೆಡೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳು ಕಳಪೆ ಕಾಮಗಾರಿಯಿಂದ ಕೂಡಿವೆ. ಬಾಗಿಲು, ಕಿಟಕಿಗಳು ಹಾಳಾಗಿದ್ದು, ಸ್ವಲ್ಪವೇ ಮಳೆ ಬಂದರು ಮೇಲ್ಛಾವಣಿ ಸೋರುತ್ತಿವೆ. ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಕಲ್ಯಾಣ ಕರ್ನಾಟಕ ಸೇನೆ ಮುಖಂಡರು ಮನವಿ ಸಲ್ಲಿಸಿದರು.

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯದ ನೌಕರರು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲವು ವರ್ಷಗಳಿಂದ ಬೋಧಕ ಮತ್ತು ಬೋಧಕೇತರ ನೌಕರರ ನೇಮಕಾತಿ ನಡೆದಿಲ್ಲ. ನಿವೃತ್ತರಿಗೆ ಸರಿಯಾಗಿ ಪಿಂಚಿಣಿ ಪಾವತಿ ಆಗುತ್ತಿಲ್ಲ. ಕೆಲವು ಸಿಂಡಿಕೇಟ್ ಸದಸ್ಯರು ಆಡಳಿತ ವಿಷಯದಲ್ಲಿ ಅನಗತ್ಯವಾಗಿ ಪ್ರವೇಶಿಸಿ ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದು ಗುಲಬರ್ಗಾ ವಿವಿ ಶಿಕ್ಷಕೇತರ ನೌಕರರ ಸಂಘದ ಅಧ್ಯಕ್ಷ ಖೇಮಣ್ಣ ವಿ. ಅಲ್ದಿ ಮನವಿ ಮಾಡಿದರು.

ತಳವಾರ ಹಾಗೂ ಪರಿವಾರ ಜಾತಿಗಳ ಎಸ್‌ಟಿ ಮೀಸಲಾತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ರಾಜ್ಯ ತಳವಾದ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಕಾಂತ ತಳವಾರ ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.