ADVERTISEMENT

ಸಚಿವ, ಸಂಸದರಿಂದ ಅಧಿಕಾರ ದುರುಪಯೋಗ: ಮಣಿಕಂಠ ರಾಠೋಡ ಆರೋಪ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:28 IST
Last Updated 26 ಅಕ್ಟೋಬರ್ 2024, 15:28 IST
ಮಣಿಕಂಠ ರಾಠೋಡ
ಮಣಿಕಂಠ ರಾಠೋಡ   

ಕಲಬುರಗಿ: ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಅಧಿಕಾರಿಗಳನ್ನು ಕೈಗೊಂಬೆ ಮಾಡಿಕೊಂಡ ಕಾರಣ ಚಿತ್ತಾಪುರದಲ್ಲಿ ಶುಕ್ರವಾರ ಕಾಂಗ್ರೆಸ್ ಪಕ್ಷ ಹಮ್ಮಿಕೊಂಡಿದ್ದ ಸಂಸದ ರಾಧಾಕೃಷ್ಣ ದೊಡ್ಡಮನಿ ಅವರ ಅಭಿನಂದನಾ ಸಮಾರಂಭದಲ್ಲಿ ಪಿಡಿಒಗಳು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು’ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಆರೋಪಿಸಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರ ದುರುಪಯೋಗ ಪಡಿಸಿಕೊಂಡ ಸಚಿವರು, ಸಂಸದರು ಮತ್ತು ಕಚೇರಿ ಸಮಯದಲ್ಲಿ ಖಾಸಗಿ ಸಮಾರಂಭದಲ್ಲಿ ಪಾಲ್ಗೊಂಡ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಇ–ಮೇಲ್‌ ಮೂಲಕ ದೂರು ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

‘ಕಚೇರಿ ವೇಳೆಯಲ್ಲಿ ಕಡಬೂರ ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಗ್ರಾ.ಪಂ.ಗಳನ್ನು ಮುಚ್ಚಲಾಗಿತ್ತು. ಪಿಡಿಒಗಳು, ಇಒ ಮತ್ತು ಕೆಲ ಸರ್ಕಾರಿ ಅಧಿಕಾರಿಗಳು ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಇದರಿಂದ ಕೆಲ ಸರ್ಕಾರಿ ಕಚೇರಿಗಳು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ’ ಎಂದು ದೂರಿದರು.

ADVERTISEMENT

ಹಣ ಹಂಚಿಕೆ: ‘ಅಭಿನಂದನಾ ಸಮಾರಂಭದಲ್ಲಿ ಹಣದ ಆಮಿಷ ತೋರಿಸಿ ಜನರನ್ನು ಸೇರಿಸಲಾಗಿತ್ತು. ಪಾಲ್ಗೊಂಡ ಪ್ರತಿಯೊಬ್ಬರಿಗೂ ಮುಚ್ಚಿದ ಲಕೋಟೆಯಲ್ಲಿ ₹200 ಹಂಚಲಾಗಿದೆ. ಇಷ್ಟೊಂದು ಹಣ ಎಲ್ಲಿಂದ ಬಂತು? ಎಂದು ಸಚಿವರು ಮತ್ತು ಸಂಸದರು ಉತ್ತರಿಸಬೇಕು’ ಎಂದು ಮಣಿಕಂಠ ರಾಠೋಡ ಆಗ್ರಹಿಸಿದರು. ಜೊತೆಗೆ ಹಣ ಹಂಚಿಕೆ ಮಾಡಿದ ಬಗ್ಗೆ ವಿಡಿಯೊ ಬಿಡುಗಡೆ ಮಾಡಿದರು.

‘ನಿಮ್ಮ ವಿರುದ್ಧ ಮಾತನಾಡಿದರೆ ಜೈಲಿಗೆ ಕಳುಹಿಸುವುದು, ಅಕ್ರಮ ಚಟುವಟಿಕೆಗಳ ಬಗ್ಗೆ ಜನರಿಗೆ ತಲುಪಿಸಿದರೆ ಸುಳ್ಳು ಕೇಸ್‌ ಹಾಕುವುದು ಮಾಡುತ್ತಿದ್ದೀರಿ. ಇದಕ್ಕೆ ಹೆದರುವುದಿಲ್ಲ. ನಾವು ಕೂಡ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ನಿಮ್ಮ ಗುಣ, ಅಧಿಕಾರ ದುರುಪಯೋಗ ನೋಡಿ ಜನ ನಿಮ್ಮನ್ನು ನಿರಾಕರಿಸುತ್ತಿದ್ದಾರೆ’ ಎಂದರು.

ಸಂಸದರು ಐದು ತಿಂಗಳಿಗೊಮ್ಮೆ ಕ್ಷೇತ್ರಕ್ಕೆ ಬರುತ್ತಾರೆ. ಜನರ ಮಧ್ಯೆ ಇರುವುದಿಲ್ಲ. ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು
ಮಣಿಕಂಠ ರಾಠೋಡ ಬಿಜೆಪಿ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.