ವಾಡಿ: ಮಗುವನ್ನು ಹೆತ್ತು ಹೊತ್ತು ಸಾಕಿ ಸಲುಹಬೇಕು ಎಂದು ಕವಿತಾ ಪತ್ರಿ ಏಳು ವರ್ಷಗಳಿಂದ ಕನಸು ಕಂಡಿದ್ದಳು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆಗತಾನೇ ಜನಿಸಿದ ಗಂಡುಮಗು ಹೆತ್ತಮ್ಮನ ತೊಡೆಯ ಮೇಲೆ ಬಿಸಿ ಅಪ್ಪುಗೆಯ ಭಾವ ಅನುಭವಿಸುತ್ತಿತ್ತು. ಆದರೆ, ವಿಧಿಯಾಟವೇ ಬೇರೆಯಾಗಿತ್ತು!
ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ ಕೆಲವೇ ಗಂಟೆಗಳಲ್ಲಿ ಕವಿತಾ ಹಸುಳೆಯನ್ನು ಅನಾಥಗೊಳಿಸಿ ಇಹಲೋಕ ತ್ಯಜಿಸಿದ್ದು ಕುಟುಂಬಸ್ಥರನ್ನು ಕಣ್ಣೀರ ಕಡಲಲ್ಲಿ ಮುಳುಗುವಂತೆ ಮಾಡಿದೆ. ಮಗು ಹುಟ್ಟಿದ ಸಂಭ್ರಮದಲ್ಲಿದ್ದ ಕುಟುಂಬಸ್ಥರ ಮನೆಯಲ್ಲಿ ಸೂತಕ ಮನೆ ಮಾಡಿದೆ. ಅನಾಥ ಹಸುಳೆಯ ಆಕ್ರಂದನ ಅಂತ್ಯಕ್ರಿಯೆಗೆ ಬಂದವರ ಕಣ್ಣಾಲಿ ತೇವಗೊಳಿಸಿದೆ.
ಇಂಗಳಗಿ ಗ್ರಾಮದ ಕವಿತಾ ಚನ್ನಯ್ಯ ಪತ್ರಿ (27) ಸೋಮವಾರ ಬೆಳಿಗ್ಗೆ ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವದಿಂದ ಕಲಬುರಗಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಜನ್ಮತಾಳಿದ ಕೆಲವೇ ಗಂಟೆಗಳಲ್ಲಿ ಮಗು ತಾಯಿಯನ್ನು ಅಗಲಿ ಅನಾಥವಾಗಿದೆ.
ಎಸಿಸಿ ಕಾರ್ಖಾನೆಯ ಉದ್ಯೋಗಿ ಚನ್ನಯ್ಯ ಪತ್ರಿಯೊಂದಿಗೆ ಕವಿತಾ 7 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಳು. ಮಗುವಿಗಾಗಿ ಸತತ ಹಂಬಲಿಸಿದ ತಾಯಿ ಹೃದಯದ ಕನಸು ನನಸಾಗುವ ಮೊದಲೇ ಕವಿತಾ ಮಸಣ ಸೇರಿದ್ದಾರೆ. ಏನೂ ಅರಿಯದ ಹಸುಳೆ ಹೆತ್ತಮ್ಮ ಇಲ್ಲದೆ ಅನಾಥವಾಗಿದೆ. ಇದು ಇಡೀ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.
ಕವಿತಾ ಅವರ ಅಂತ್ಯಕ್ರಿಯೆಯನ್ನು ಭಾನುವಾರ ಸಂಜೆ ಇಂಗಳಗಿ ಗ್ರಾಮದ ಸ್ವಂತ ಜಮೀನಿನಲ್ಲಿ ನೆರವೇರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.