ADVERTISEMENT

ಕಲಬುರಗಿ-ಮೇಯರ್, ಉಪಮೇಯರ್ ಚುನಾವಣೆ ಫೆ 5ಕ್ಕೆ: ಯಾರಿಗೆ ಅಧಿಕಾರ ಭಾಗ್ಯ?

ಯಾರಿಗೆ ಅಧಿಕಾರ ಭಾಗ್ಯ?; ಬಿಜೆಪಿ–ಕಾಂಗ್ರೆಸ್ ತೆರೆಮರೆ ಯತ್ನ

​ಪ್ರಜಾವಾಣಿ ವಾರ್ತೆ
Published 28 ಜನವರಿ 2022, 0:30 IST
Last Updated 28 ಜನವರಿ 2022, 0:30 IST
ಮಹಾನಗರ ಪಾಲಿಕೆ
ಮಹಾನಗರ ಪಾಲಿಕೆ   

ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್‌ ಚುನಾವಣೆಯ ಮೀಸಲಾತಿಯನ್ನು ಬದಲಾಯಿಸಿ ಹೊಸ ಆದೇಶ ಹೊರಡಿಸಿದ ಬೆನ್ನಲ್ಲೇ ಗುರುವಾರ ಪ್ರಾದೇಶಿಕ ಆಯುಕ್ತರು ಫೆಬ್ರುವರಿ 5ರಂದು ಮೇಯರ್, ಉಪಮೇಯರ್ ಹಾಗೂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದ್ದಾರೆ.

ಫೆ 5ರಂದು ಬೆಳಿಗ್ಗೆ 10.30ಕ್ಕೆ ನಾಮಪತ್ರವನ್ನು ಉಪ ವಿಭಾಗಾಧಿಕಾರಿಗೆ ಸಲ್ಲಿಸಬೇಕು. ಮಧ್ಯಾಹ್ನ 12ರ ಮತದಾನ ನಡೆಯಲಿದೆ ಎಂದು ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್‌ ತಿಳಿಸಿದ್ದಾರೆ.

ಚುನಾವಣೆ ನಡೆಯುತ್ತಿದ್ದಂತೆಯೇ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಾಳೆಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಕಾಂಗ್ರೆಸ್‌ ಪಾಲಿಕೆ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗಳಿಸಿದ್ದು, ಜೆಡಿಎಸ್ ಬೆಂಬಲ ಕೋರಿದೆ. ಬಿಜೆಪಿ ಸಹ ಜೆಡಿಎಸ್‌ ಮುಖಂಡರನ್ನು ಸಂಪರ್ಕಿಸಿದ್ದು, ಒಂದೊಮ್ಮೆ ಜೆಡಿಎಸ್‌ ಕೈಕೊಟ್ಟರೂ ಅಧಿಕಾರಕ್ಕೆ ಬರಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ತನ್ನ ಏಳು ಜನ ವಿಧಾನಪರಿಷತ್ ಸದಸ್ಯರನ್ನು ಹೆಸರುಗಳನ್ನು ಸ್ಥಳೀಯ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಲು ಯತ್ನಿಸುತ್ತಿದೆ.

ADVERTISEMENT

ಬಿಜೆಪಿಯ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ (ಅಥಣಿ), ತುಳಸಿ ಮುನಿರಾಜುಗೌಡ (ಬೆಂಗಳೂರು), ಪ್ರತಾಪ ಸಿಂಹ ನಾಯಕ್ (ಉಜಿರೆ), ಲೆಹರ್ ಸಿಂಗ್ (ಬೆಂಗಳೂರು), ಭಾರತಿ ಶೆಟ್ಟಿ (ಬೆಂಗಳೂರು), ಡಾ.ಸಾಬಣ್ಣ ತಳವಾರ (ಬೆಳಗಾವಿ) ಹಾಗೂ ರಘುನಾಥರಾವ್ ಮಲ್ಕಾಪುರೆ (ಬೀದರ್‌) ಅವರು ತಮ್ಮ ನೋಡಲ್ ಜಿಲ್ಲೆಯನ್ನಾಗಿ ಕಲಬುರಗಿ ಆಯ್ಕೆ ಮಾಡಿಕೊಂಡಿದ್ದೇವೆ. ಆದ್ದರಿಂದ ಮತದಾರರ ಪಟ್ಟಿಯಲ್ಲಿ ಸೇರಿಸಿ ಎಂದು ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಏಳು ಜನರ ಪೈಕಿ ದಾಖಲೆಗಳನ್ನು ಪರಿಶೀಲಿಸಿದ ಸಹಾಯಕ ಆಯುಕ್ತೆ ಮೋನಾ ರೋತ್ ಅವರು ಡಾ. ತಳವಾರ ಸಾಬಣ್ಣ ಹಾಗೂ ‍ಪ್ರತಾಪ ಸಿಂಹ ನಾಯಕ್‌ ಅವರ ಮನವಿಗಳನ್ನು ತಿರಸ್ಕರಿಸಿದ್ದಾರೆ. ಉಳಿದ ಐವರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ.

ಪಾಲಿಕೆಯ ಮೇಯರ್‌ ಚುನಾವಣೆಯಲ್ಲಿ ಮತದಾನ ಮಾಡಲೆಂದೇ ಪರಿಷತ್ ಸದಸ್ಯರು ಕಲಬುರಗಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿದ್ದಾರೆ. ವಾಸ್ತವವಾಗಿ ಅವರು ಇಲ್ಲಿರುವುದೇ ಇಲ್ಲ ಎಂದು ಕಾಂಗ್ರೆಸ್‌ ತಕರಾರು ತೆಗೆದಿದ್ದು, ಈ ಸಂಬಂಧ ಜಿಲ್ಲಾಧಿಕಾರಿ ಅವರಿಗೆ ಮೇಲ್ಮನವಿ ಸಲ್ಲಿಸಿದೆ. ಜಿಲ್ಲಾಧಿಕಾರಿ ಅವರು ಇನ್ನಷ್ಟೇ ಈ ಕುರಿತು ವಿಚಾರಣೆ ನಡೆಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.