ADVERTISEMENT

ಕಲಬುರಗಿ | ಮೇಳಕುಂದಿ ಚಲೋ ಹೋರಾಟ 11ರಂದು: ಗುರುನಾಥ್‌ ಪೂಜಾರಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 13:24 IST
Last Updated 8 ಏಪ್ರಿಲ್ 2025, 13:24 IST
ಗುರುನಾಥ್‌ ಪೂಜಾರಿ
ಗುರುನಾಥ್‌ ಪೂಜಾರಿ   

ಕಲಬುರಗಿ: ತಾಲ್ಲೂಕಿನ ಮೇಳಕುಂದಾ(ಬಿ) ಗ್ರಾಮದಲ್ಲಿನ ಮಾಳಿಂಗರಾಯ ದೇವಸ್ಥಾನದ ಪೂಜಾ ಹಕ್ಕನ್ನು ಪಡೆಯುವ ಸಲುವಾಗಿ ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಶಾಖೆಯಿಂದ ಏ.11ರಂದು ಮೇಳಕುಂದಿ ಚಲೋ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಗುರುನಾಥ್‌ ಎಸ್‌.ಪೂಜಾರಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10 ಗಂಟೆಗೆ ಕಲಬುರಗಿ ಹೈಕೋರ್ಟ್‌ ಕ್ರಾಸ್‌ನಿಂದ ವಾಹನಗಳಲ್ಲಿ ಮೇಳಕುಂದಾ(ಬಿ)ಕ್ಕೆ ತೆರಳಲಾಗುವುದು. ನಂತರ ಗ್ರಾಮದ ಡಾ. ಬಿ.ಆರ್‌. ಅಂಬೇಡ್ಕರ್ ಕ್ರಾಸ್‌ನಿಂದ ಭವ್ಯ ಮೆರವಣಿಗೆಯೊಂದಿಗೆ ತೆರಳಿ ಮಾಳಿಂಗರಾಯನ ದೇವಸ್ಥಾನದಲ್ಲಿ ಬಹಿರಂಗ ಸಭೆ ನಡೆಸಲಾಗುವುದು’ ಎಂದರು.

‘ಸಭೆ ಬಳಿಕ ಮಾಳಿಂಗರಾಯನ ಗದ್ದುಗೆಗೆ ಮಹಾಭಿಷೇಕ ಹಾಗೂ ವಿಶೇಷ ಪೂಜೆ ಸಲ್ಲಿಸಲಾಗುವುದು. ಡೊಳ್ಳುಗಳೊಂದಿಗೆ ಸಮಾಜದ ಜಿಲ್ಲೆಯ ಎಲ್ಲ ಸಂಘಟನೆಯವರು, ಪಟ್ಟದ ಪೂಜಾರಿಗಳು ಸೇರಿ ಸುಮಾರು 5 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ’ ಎಂದು ತಿಳಿಸಿದರು.

ADVERTISEMENT

‘ಪುರಾತನ ಮಾಳಿಂಗರಾಯ ದೇವಸ್ಥಾನದಲ್ಲಿ ಕುರುಬ ಸಮಾಜದವರೇ ಹಾಲುಮತ ಸಂಪ್ರದಾಯದ ಪ್ರಕಾರ ಪೂಜೆ ಮಾಡುತ್ತಾ ಬಂದಿದ್ದಾರೆ. ದೇವಸ್ಥಾನ ಕುರುಬ ಸಮಾಜಕ್ಕೆ ಸೇರಿದ್ದು ಎಂದು ಮುಜರಾಯಿ ಮತ್ತು ಕಂದಾಯ ಇಲಾಖೆಯ ದಾಖಲಾತಿಗಳು ಹೇಳುತ್ತವೆ. ಅನುದಾನ ಕೂಡ ಬಂದಿದೆ. ಆದರೆ, ಕೆಲವರು ಸಿದ್ದೇಶ್ವರ ದೇವಸ್ಥಾನ ಟ್ರಸ್ಟ್‌ ಮಾಡಿಕೊಂಡು ಜೀವಬೆದರಿಕೆ ಹಾಕಿ, 2016ರಲ್ಲಿ ಪೂಜಾರಿ ಮೇಲೆ ಹಲ್ಲೆ ನಡೆಸಿ ಕೀಲಿ ಕಸಿದುಕೊಂಡು ದೇವಸ್ಥಾನದಿಂದ ಹೊರಹಾಕಿದ್ದಾರೆ. ದೇವಸ್ಥಾನದ ಪ್ರಕರಣ ಸದ್ಯ ಕಲಬುರಗಿ ಸಿವಿಲ್‌ ಕೋರ್ಟ್‌ನಲ್ಲಿದೆ’ ಎಂದು ವಿವರಿಸಿದರು.

‘ವಂಶ ಪರಂಪರೆಯ ಪೂಜಾರಿಕೆಯನ್ನು ತಹಶೀಲ್ದಾರರು ಇನ್ನೊಬ್ಬರಿಗೆ ಹಸ್ತಾಂತರ ಮಾಡಿರುವುದನ್ನು ಖಂಡಿಸಿ ಮತ್ತು ಪೂಜಾ ಹಕ್ಕನ್ನು ಪಡೆಯುವ ಸಲುವಾಗಿ ಈ ಹೋರಾಟ ಹಮ್ಮಿಕೊಳ್ಳಲಾಗಿದೆ’ ಎಂದರು.

ದೇವಸ್ಥಾನದ ಪೂಜಾರಿ ಮಹಾದೇವಪ್ಪ ಮುತ್ಯಾ, ವಕೀಲ ಮಂಜುನಾಥ, ಗಣಪತಿ ಮಿಣಜಗಿ, ನಿರ್ಮಲಾ ಬರಗಾಲಿ, ರವಿಗೊಂಡ ಕಟ್ಟಿಮನಿ, ನಾಗೀಂದ್ರಪ್ಪ ಪೂಜಾರಿ, ಕುಸನೂರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಪೇಂದ್ರ ಬರಗಾಲಿ, ಸಾವಳಗಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಮೇಶ ಕನ್ನಗೊಂಡ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.