ADVERTISEMENT

ಕಲಬುರಗಿ | ಕೆಲಸ ಅರಸಿ ಗುಳೆಹೋದ ಜನ; ಸುನಾರ ತಾಂಡಾದಲ್ಲಿ ಸ್ಮಶಾನ ಮೌನ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2024, 21:22 IST
Last Updated 21 ಏಪ್ರಿಲ್ 2024, 21:22 IST
ಕಲಬುರಗಿ ಜಿಲ್ಲೆ ಕಮಲಾಪುರ ಸಮೀಪದ ಸುನಾರ ತಾಂಡಾದ ಜನ ಗುಳೆ ಹೋಗುವಾಗ ಮನೆಗೆ ಬೀಗಹಾಕಿ ಫರಸಿ, ಪತ್ರಾಸ್ ಹಚ್ಚಿರುವುದು
ಕಲಬುರಗಿ ಜಿಲ್ಲೆ ಕಮಲಾಪುರ ಸಮೀಪದ ಸುನಾರ ತಾಂಡಾದ ಜನ ಗುಳೆ ಹೋಗುವಾಗ ಮನೆಗೆ ಬೀಗಹಾಕಿ ಫರಸಿ, ಪತ್ರಾಸ್ ಹಚ್ಚಿರುವುದು   

ಕಮಲಾಪುರ (ಕಲಬುರಗಿ ಜಿಲ್ಲೆ): ಸುತ್ತಲೂ ಬಂಜರು ಭೂಮಿ, ಮನುಷ್ಯರ ಸಂಚಾರವೂ ಇಲ್ಲ. ತಾಂಡಾದಲ್ಲಿ ಕಾಲಿಡುತ್ತಿದ್ದಂತೆ ಬಾಗಿಲಿಗೆ ಬೀಗ ಜಡಿದ ಮನೆಗಳು, ಸಾಲದೆಂಬಂತೆ ಮನೆಯ ಬಾಗಿಲಿಗೆ ತಗಡಿನ ಹಚ್ಚಿರುವ ದೃಶ್ಯ. ಜನರೆಲ್ಲ ಕೆಲಸ ಅರಸಿ ಮುಂಬೈ, ಪುಣೆ, ಹೈದರಾಬಾದ್, ಬೆಂಗಳೂರು, ದುಬೈ ಮತ್ತಿತರ ನಗರಗಳಿಗೆ ಗುಳೆ ಹೋಗಿ ಅಕ್ಷರಶಃ ಸ್ಮಶಾನ ಮೌನ ಆವರಿಸಿದ ಚಿತ್ರಣ.

ತಾಲ್ಲೂಕಿನ ಸುನಾರ ತಾಂಡಾದಲ್ಲಿರುವ 60 ಮನೆಗಳಲ್ಲಿ 50 ಮನೆಗಳಿಗೆ ಬೀಗ ಹಾಕಲಾಗಿದೆ. ಸುಮಾರು 400 ಜನಸಂಖ್ಯೆ ಇದೆ. ಇವರಲ್ಲಿ ಸುಮಾರು 350 ಜನ ಗುಳೆ ಹೋಗಿದ್ದಾರೆ. ಇಲ್ಲಿ ಜನರಿಗಿಂತ ಜಾನುವಾರುಗಳೇ ಹೆಚ್ಚಾಗಿದ್ದು, ಅಲ್ಲೊ–ಇಲ್ಲೋ ವೃದ್ಧರು, ಚಿಕ್ಕ ಮಕ್ಕಳು ಕಾಣಸಿಗುತ್ತಾರೆ. ಯಾರನ್ನು ಕೇಳಿದರೂ ‘ನಮ್ಮ ಅಪ್ಪ, ಅಮ್ಮ ಮುಂಬೈನಲ್ಲಿದ್ದಾರೆ, ದುಬೈನಲ್ಲಿದ್ದಾರೆ’ ಎಂಬ ಉತ್ತರಗಳೇ ಕೇಳಿಬರುತ್ತವೆ.

ಇಲ್ಲಿ ಕೃಷಿ ಕಾರ್ಯ ಕೈಗೊಳ್ಳಲು ಬೇಸಾಯಕ್ಕೆ ಯೋಗ್ಯ ಭೂಮಿ ಇಲ್ಲ. ಕೆಲಸಕ್ಕೆ ಹೋಗಬೇಕು ಎಂದರೆ ಸುತ್ತಲೂ ಯಾವುದೇ ಕೈಗಾರಿಕೆ, ಕಾರ್ಖಾನೆಗಳಿಲ್ಲ. ಕೂಲಿ ಕೆಲಸ ಸಿಗುವುದಿಲ್ಲ, ಸುಮ್ಮನೆ ಕುಳಿತರೆ ಹೊಟ್ಟೆ, ಬಟ್ಟೆಗೆ ಏನು ಮಾಡಬೇಕು? ಹೀಗಾಗಿ ಪ್ರತಿ ವರ್ಷ ಜುಲೈ–ಆಗಸ್ಟ್‌ನಲ್ಲಿ ಗುಳೆ ಹೋಗಿ, ಮೇ ತಿಂಗಳ ಕೊನೆಯ ವಾರದಲ್ಲಿ ಮರಳುತ್ತಾರೆ. ಅದುವರೆಗೂ ತಾಂಡಾದಲ್ಲಿ ವೃದ್ಧರು, ಮಕ್ಕಳು ಮಾತ್ರ ಕಾಣಸಿಗುತ್ತಾರೆ.

ADVERTISEMENT

‘ಹೊಟ್ಟೆ ತುಂಬಿಸಿಕೊಳ್ಳುವುದೇ ಕಷ್ಟವಾದಾಗ ಮಕ್ಕಳ ಶಿಕ್ಷಣ, ಭವಿಷ್ಯದ ಚಿಂತೆ ದೂರದ ಮಾತಾಗಿದೆ’ ಎನ್ನುತ್ತಾರೆ ಇಲ್ಲಿಯ ನಿವಾಸಿ ವಿಠಲ ಮಾಣಿಕ ಸೋನಾರ.

‘ನಮಗೆ ಹೊಲ ಇಲ್ಲ. ಬೆಳಿಗ್ಗೆ 7ರಿಂದ ಮಧ್ಯಾಹ್ನ 2 ಗಂಟೆಯವರೆಗೆ ದುಡಿದರೆ ₹100 ಕೂಲಿ ಸಿಗುತ್ತದೆ. ತಾಂಡಾದಲ್ಲಿ ನೀರಿನ ವ್ಯವಸ್ಥೆ ಇಲ್ಲ. ಕೆಲಸವೂ ಇಲ್ಲ. ಕೆಲಸ ಅರಸಿ ಮನೆಮಂದಿಯೆಲ್ಲಾ ದೂರದ ಊರುಗಳಿಗೆ ಗುಳೆ ಹೋಗುತ್ತಿದ್ದಾರೆ. ಹೆತ್ತ ಮಕ್ಕಳ ಮುಖ ನೋಡುವ ಭಾಗ್ಯ ನಮಗಿಲ್ಲದಂತಾಗಿದೆ. ಇದನ್ನು ತಡೆಯಲು ಯಾವುದಾದರೊಂದು ದಾರಿ ತೋರಿಸಿ’ ಎಂದು ವೃದ್ಧೆ ಸೋನಾಬಾಯಿ ಸೋನಾರ ಅಂಗಲಾಚುವ ಪರಿ ಮನಕುಲಕುವಂತಿತ್ತು.

‘ಬೇರೆ ಕೆಲ ತಾಂಡಾಗಳಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ನಡೆದಿದೆ. ನಾವು ಕೇಳಲು ಹೋದರೆ ಮುಂದಿನ ವಾರ ಎನ್ನುತ್ತಾ ದಿನ ದೂಡುತ್ತಾರೆ. ಈ ತಾಂಡಾದ ಒಬ್ಬರಿಗೂ ಉದ್ಯೋಗ ಖಾತ್ರಿ ಕೆಲಸ ಸಿಕ್ಕಿಲ್ಲ ಎನ್ನುತ್ತಾರೆ’ ವಿಠಲ ಸೋನಾರ. ಗ್ರಾಮ ಪಂಚಾಯಿತಿಯವರಿಗೆ ಕೇಳಲು ಹೋದರೆ ಇಲ್ಲದೊಂದು ಸಬೂಬು ಹೇಳಿ ಕಳುಹಿಸುತ್ತಾರೆ ಎನ್ನುತ್ತಾರೆ ಇಲ್ಲಿಯ ಉಳಿದ ಜನ. 

ಸುನಾರ ತಾಂಡಾ ಒಂದು ನಿದರ್ಶನ ಮಾತ್ರ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕೆಲಸ ಅರಸಿ ಕಾರ್ಮಿಕರು ಗುಳೆ ಹೋಗುತ್ತಿದ್ದಾರೆ. ಸ್ಥಳೀಯವಾಗಿ ಕೆಲಸ ಸಿಗುವಂತಹ ಕೈಗಾರಿಕೆಗಳ ಸ್ಥಾಪನೆಗೆ ಸರ್ಕಾರ ಮುಂದಾಗಬೇಕು ಎನ್ನುತ್ತಾರೆ ತಾಂಡಾ ನಿವಾಸಿಗಳು.

ಪ್ರತಿ ವರ್ಷ ಕಲಬುರಗಿ ಜಿಲ್ಲೆಯ ಚಿತ್ತಾಪುರ, ಚಿಂಚೋಳಿ, ಕಾಳಗಿ ತಾಲ್ಲೂಕಿನಿಂದಲೂ ಸಾವಿರಾರು ಜನರು ಮುಂಬೈ, ಪುಣೆಗೆ ಗುಳೆ ಹೋಗುವುದು ನಡೆದೇ ಇದೆ.

ಕಮಲಾಪುರ ಸಮೀಪದ ಸುನಾರ ತಾಂಡಾದ ಜನ ಗುಳ ಹೋದ ಮನೆಗೆ ಬೀಗ ಹಾಕಿ ಕಟ್ಟಿಗೆ ಅಡ್ಡಲಾಗಿ ಕಟ್ಟಿರುವುದು

ಮೂಲ ವೃತ್ತಿ ಆಭರಣ ತಯಾರಿಕೆ

ಕಮಲಾಪುರ ತಾಲ್ಲೂಕಿನ ತಾಂಡಾ ಜನ ಲಂಬಾಣಿ ಆಭರಣ ತಯಾರಿಸುತ್ತಿದ್ದರು. ಹೀಗಾಗಿ ಈ ತಾಂಡಾ ಹೆಸರೂ ಸುನಾರ ತಾಂಡಾ ಎಂತಲೇ ಇದೆ. ಈಗ ಲಂಬಾಣಿ ಆಭರಣಗಳ ಬೇಡಿಕೆ ಕಡಿಮೆಯಾಗಿದ್ದು ಕೆಲಸ ಸಿಗುತ್ತಿಲ್ಲ. ಹೀಗಾಗಿ ಬಹುತೇಕರು ಈ ಕೆಲಸವನ್ನು ಬಿಟ್ಟು ಗುಳೆ ಹೋಗುತ್ತಿದ್ದಾರೆ ತಾಂಡಾದ ಎರಡು ಮೂರು ಮನೆಗಳಲ್ಲಿ ಆಭರಣ ತಯಾರಿಕೆ ಸಲಕರಣೆಗಳಿವೆ. ಆದರೆ ಯಾರೂ ಆಭರಣ ತಯಾರಿಕೆ ಕೆಲಸ ಮಾಡುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.