ADVERTISEMENT

ಹೆಚ್ಚಿನ ಪಿಂಚಣಿಗೆ ನಿವೃತ್ತ ನೌಕರರ ಅಲೆದಾಟ

ಉದ್ಯೋಗ ನೀಡಿದ ಸಂಸ್ಥೆ, ಉದ್ಯೋಗಿ ಜಂಟಿಯಾಗಿ ನೀಡಿದ ಒಪ್ಪಿಗೆ ‍ಪತ್ರ ಕೇಳುತ್ತಿರುವ ಪಿಎಫ್‌ ಸಂಸ್ಥೆ

ಮನೋಜ ಕುಮಾರ್ ಗುದ್ದಿ
Published 18 ಮಾರ್ಚ್ 2023, 5:38 IST
Last Updated 18 ಮಾರ್ಚ್ 2023, 5:38 IST
ಇಪಿಎಫ್‌ ಲಾಂಛನ
ಇಪಿಎಫ್‌ ಲಾಂಛನ   

ಕಲಬುರಗಿ: ಪಿಂಚಣಿ ಮೊತ್ತ ಹೆಚ್ಚಾಗಲಿದೆ ಎಂಬ ಸುದ್ದಿ ತಿಳಿದು ನಿವೃತ್ತ ನೌಕರರು ಅರ್ಜಿ ಹಿಡಿದು ಇಲ್ಲಿನ ಭವಿಷ್ಯ ನಿಧಿ (ಪಿಎಫ್‌) ಕಚೇರಿಗೆ ಅಲೆಯುತ್ತಿದ್ದಾರೆ. ಆದರೆ, ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸುವಂತೆ ಪಿಎಫ್‌ ಕಚೇರಿ ಸಿಬ್ಬಂದಿ ಸೂಚಿಸಿದ್ದು, ಅವರಲ್ಲಿ ನಿರಾಸೆ ಮೂಡಿಸಿದೆ.

ನಗರದ ಆಳಂದ ರಸ್ತೆಯಲ್ಲಿರುವ ಪಿಎಫ್‌ ಪ್ರಾದೇಶಿಕ ಕಚೇರಿಯು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಮತ್ತು ಪಕ್ಕದ ವಿಜಯಪುರ ಜಿಲ್ಲೆಯ ವ್ಯಾಪ್ತಿ ಒಳಗೊಂಡಿದೆ. ಸುಪ್ರೀಂಕೋರ್ಟ್ ಕಳೆದ ನವೆಂಬರ್‌ನಲ್ಲಿ ನೀಡಿದ ತೀರ್ಪಿನಿಂದ ಕೆಲವೇ ತಿಂಗಳಲ್ಲಿ ತಮ್ಮ ಪಿಂಚಣಿ ಹೆಚ್ಚಳ ಆಗುವುದೆಂದು ನಿವೃತ್ತ ನೌಕರರು ತಮ್ಮ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಮತ್ತು ಪಿಎಫ್‌ ಸಂಸ್ಥೆ ನೀಡಿದೆ ಎನ್ನಲಾದ ಅರ್ಜಿ ನಮೂನೆ ಸಮೇತ ಇಲ್ಲಿನ ಕಚೇರಿಗೆ ಬರುತ್ತಿದ್ದಾರೆ. ಆದರೆ, ಪಿಎಫ್‌ ಸಂಸ್ಥೆಯ ನಿಯಮಾವಳಿಗಳು ಅವರಲ್ಲಿ ಗೊಂದಲ ಮೂಡಿಸಿವೆ.

‘ಕಲಬುರಗಿಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (ಕೆಕೆಆರ್‌ಟಿಸಿ) ಬಹುತೇಕ ನಿವೃತ್ತ ನೌಕರರ ಪಿಂಚಣಿ ₹ 2,700 ಇದೆ. ಅವರ ಮೂಲ ವೇತನ ಮತ್ತು ತುಟ್ಟಿಭತ್ಯೆ ಲೆಕ್ಕ ಹಾಕಿ ವೇತನದ ಒಂದು ಭಾಗವನ್ನು ಭವಿಷ್ಯನಿಧಿ ಸಂಸ್ಥೆಯ ಪಿಂಚಣಿ ನಿಧಿಗೆ ನಿಗಮವು ಹಣವನ್ನು ವರ್ಗಾಯಿಸಿತ್ತು. ಹೆಚ್ಚಿನ ಮೊತ್ತದ ಪಿಂಚಣಿ ಬರಬೇಕೆಂದರೆ, ನೌಕರರು ಉದ್ಯೋಗಕ್ಕೆ ಸೇರುವ ಸಂದರ್ಭದಲ್ಲೇ ನಿಗಮ ಮತ್ತು ನೌಕರರು ಜಂಟಿಯಾಗಿ ಹೆಚ್ಚುವರಿ ಪಿಂಚಣಿಯ ಒಪ್ಪಂದಕ್ಕೆ ಸಹಿ ಹಾಕಿರಬೇಕು. ಅದನ್ನು ಪಿಎಫ್‌ ಸಂಸ್ಥೆ ಅನುಮೋದಿಸಿರಬೇಕು. ಆಗ ಮಾತ್ರ ಹೆಚ್ಚುವರಿ ಪಿಂಚಣಿಗೆ ಅರ್ಹರಾಗುತ್ತಾರೆ. ಆದರೆ, ಬಹುತೇಕ ಸಿಬ್ಬಂದಿ ಆ ಒಪ್ಪಂದಕ್ಕೆ ಸಹಿಯೇ ಹಾಕಿಲ್ಲ’ ಎಂದು ಪಿಎಫ್‌ ಸಂಸ್ಥೆಯ ಕಲಬುರಗಿ ಪ್ರಾದೇಶಿಕ ಕಚೇರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಬಹುತೇಕ ನಿವೃತ್ತ ನೌಕರರು ನಮಗೆ ಅಗತ್ಯವಿಲ್ಲದ ದಾಖಲೆಪತ್ರ ಕೊಡುತ್ತಿದ್ದಾರೆ. ಹಲವರ ಬಳಿ ಹೆಚ್ಚುವರಿ ಪಿಂಚಣಿಗಾಗಿ ಮಾಡಿಕೊಂಡ ಒಪ್ಪಂದ ಪತ್ರ ಇಲ್ಲ. ಹೀಗಾಗಿ, ಅಂಥವರಿಗೆ ಹೆಚ್ಚುವರಿ ಪಿಂಚಣಿ ಸಿಗುವ ಸಾಧ್ಯತೆ ಇಲ್ಲ. ಪಿಎಫ್‌ ಸಂಸ್ಥೆಯಿಂದ ನೀಡಲಾಗುವ ನಿಗದಿತ ಅರ್ಜಿ ನಮೂನೆ ಬದಲು ಬೇರೆ ಅರ್ಜಿ ನಮೂನೆ ನೀಡಿ ಕೆಲ ಮಧ್ಯವರ್ತಿಗಳು ಪಿಂಚಣಿದಾರರ ಹಾದಿ ತಪ್ಪಿಸುತ್ತಿದ್ದಾರೆ’ ಎಂದರು.

‘ಹೆಚ್ಚಿನ ಪಿಂಚಣಿ ಪಡೆಯಲು ಅರ್ಜಿ ನಮೂನೆ ಸಲ್ಲಿಸಲು ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ. ಅದರಂತೆ ವೆಬ್‌ಸೈಟ್‌ಗೆ ಅಪ್‌ಲೋಡ್ ಮಾಡಲು ಸಮಸ್ಯೆ ಆಗುತ್ತಿದೆ. ಇಷ್ಟೆಲ್ಲ ಮಾಡಿದರೂ ಪಿಂಚಣಿ ಹೆಚ್ಚಾಗುವ ಭರವಸೆ ಇಲ್ಲ’ ಎಂದು ಸಾರಿಗೆ ನಿಗಮದ ನಿವೃತ್ತ ಉದ್ಯೋಗಿ ಮಲ್ಲಪ್ಪ ತಳವಾರ ಹೇಳಿದರು.

‘ಇನ್ನೂ ಮಾಹಿತಿ ಬಂದಿಲ್ಲ’

ಹೆಚ್ಚುವರಿ ಪಿಂಚಣಿ ಬಯಸುವ ನಿವೃತ್ತ ಹಾಗೂ ಹಾಲಿ ಸಿಬ್ಬಂದಿ ಪಿಎಫ್‌ ಕಚೇರಿಗೆ ಅರ್ಜಿ ನಮೂನೆಯನ್ನು ಸಲ್ಲಿಸಬೇಕಿದೆ. ನಿವೃತ್ತರಾದವರು ತಮ್ಮ ವಂತಿಗೆಯನ್ನು ಹೇಗೆ ಸಲ್ಲಿಸಬೇಕು ಎಂಬ ಬಗ್ಗೆ ಪಿಎಫ್‌ ಕಚೇರಿಯಿಂದ ಇನ್ನೂ ಮಾಹಿತಿ ಬಂದಿಲ್ಲ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.