ADVERTISEMENT

ಕ್ಷೇತ್ರದ ಜನರನ್ನು ಕಾಶಿ ಯಾತ್ರೆಗೆ ಕಳುಹಿಸಿದ ಶಾಸಕ!

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 17:26 IST
Last Updated 4 ಫೆಬ್ರುವರಿ 2023, 17:26 IST
ಕಲಬುರಗಿ ದಕ್ಷಿಣ ಕ್ಷೇತ್ರದ ಜನರನ್ನು ಕರೆದೊಯ್ಯಲು ನಿಂತಿದ್ದ ವಿಶೇಷ ರೈಲು
ಕಲಬುರಗಿ ದಕ್ಷಿಣ ಕ್ಷೇತ್ರದ ಜನರನ್ನು ಕರೆದೊಯ್ಯಲು ನಿಂತಿದ್ದ ವಿಶೇಷ ರೈಲು   

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಕೆಆರ್‌ ಡಿಬಿ) ಅಧ್ಯಕ್ಷರೂ ಆದ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಕ್ಷೇತ್ರದ ಜನರನ್ನು ಕಾಶಿ ಯಾತ್ರೆಗೆ ಕಳುಹಿಸಿ ಕೊಟ್ಟಿದ್ದಾರೆ.

ಇದಕ್ಕಾಗಿ ತಮ್ಮ ತಂದೆ ಹೆಸರಿನಲ್ಲಿರುವ ದಿ. ಚಂದ್ರಶೇಖರ ಪಾಟೀಲ ರೇವೂರ ಫೌಂಡೇಷನ್‌ ಮೂಲಕ ವಿಶೇಷ ರೈಲಿನ ವ್ಯವಸ್ಥೆ ಮಾಡಿದ್ದು, ಶನಿವಾರ ವಿವಿಧ ಮಠಾಧೀಶರ ನೇತೃತ್ವದಲ್ಲಿ ರೈಲಿಗೆ ಹಸಿರು ನಿಶಾನೆ ತೋರಿಸಿದರು. ಯಾತ್ರಿಕರೊಂದಿಗೆ ದತ್ತಾತ್ರೇಯ ಅವರ ತಾಯಿ, ಮಾಜಿ ಶಾಸಕಿ ಅರುಣಾದೇವಿ ಪಾಟೀಲ, ಪತ್ನಿ ಲಕ್ಷ್ಮಿ ಪಾಟೀಲ, ಸಹೋದರ ಡಾ. ಅಲೋಕ್ ಪಾಟೀಲ ಸೇರಿದಂತೆ ಅವರ ಕುಟುಂಬ ಸದಸ್ಯರು ತೆರಳಿದ್ದಾರೆ.

‘ಸುಮಾರು 2 ಸಾವಿರ ಜನರನ್ನು ಕರೆದೊಯ್ಯಲು ತೀರ್ಮಾನಿಸಲಾಗಿತ್ತು. ಆದರೆ, ಕೊನೆಕ್ಷಣದಲ್ಲಿ 3,600ಕ್ಕೂ ಅಧಿಕ ಜನರು ರೈಲು ನಿಲ್ದಾಣಕ್ಕೆ ದೌಡಾಯಿಸಿದರು. ದತ್ತಾತ್ರೇಯ ಪಾಟೀಲ ಪ್ರತಿನಿಧಿಸುವ ಕ್ಷೇತ್ರದವರಲ್ಲದವರೂ ಕಾಶಿಯಾತ್ರೆಗೆ ಬಂದಿದ್ದಾರೆ. ಹೀಗಾಗಿ, ಯಾರನ್ನೂ ವಾಪಸ್ ಕಳಿಸಿಲ್ಲ’ ಎಂದು ಯಾತ್ರಿಕರೊಂದಿಗೆ ತೆರಳಿರುವ ಬಿಜೆಪಿ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.