ADVERTISEMENT

ಮೋದಿ ನೇತೃತ್ವದ ನಾಯಕತ್ವದಲ್ಲಿ ಮತ್ತೆ ಅಧಿಕಾರಕ್ಕೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 21 ಜನವರಿ 2023, 8:37 IST
Last Updated 21 ಜನವರಿ 2023, 8:37 IST
ಯಡಿಯೂರಪ್ಪ
ಯಡಿಯೂರಪ್ಪ   

ಕಲಬುರಗಿ: ‘ನರೇಂದ್ರ ಮೋದಿ ಅಂತಹ ಪ್ರಧಾನಿ ದೇಶಕ್ಕೆ ಲಭಿಸಿದ್ದು ನಮ್ಮ ಸೌಭಾಗ್ಯ. ಇಂತಹ ಮಹಾನಾಯಕನ ನೇತೃತ್ವದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ’ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ ಹೇಳಿದರು.

ಶನಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯದಾದ್ಯಂತ ಬಿಜೆಪಿ ಪರವಾದ ವಾತಾರಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ಬಾರಿ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ’ ಎಂದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ಯಾವುದೇ ಶಕ್ತಿಯಿಂದ ತಡೆಯಲು ಸಾಧ್ಯವಿಲ್ಲ. ಹಲವರು ತಾವೇ ಮುಖ್ಯಮಂತ್ರಿ ಅಭ್ಯರ್ಥಿಗಳು ಎಂದು ಹೇಳಿಕೊಂಡು ತಿರುಕನ ಕನಸು ಕಾಣುತ್ತಾ ಓಡಾಡುತ್ತಿದ್ದಾರೆ’ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರನ್ನು ಟೀಕಿಸಿದರು.

ADVERTISEMENT

ಬಿಜೆಪಿಯಲ್ಲಿ ನಾಯಕತ್ವ ಕೊರತೆ ಇದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ ಅವರು, ‘ಕಾಂಗ್ರೆಸ್ ನಾಯಕರು ಏನು ಮಾಡಿದ್ದಾರೆ ಎಂಬುದನ್ನು ಒಂದೆರಡು ಮಾತುಗಳಲ್ಲಿ ಹೇಳಲಿ ನೋಡಣ. ನಾವು ಮಾಡಿರುವ ಕೆಲಸವನ್ನು ಜನರು ಹಾಡಿ ಹೋಗಳುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ನಾಯಕರು ಒಳ್ಳೆಯ ಕೆಲಸ ಮಾಡಿದ್ದರೆ ಅಧಿಕಾರವನ್ನು ಏಕೆ ಕಳೆದುಕೊಂಡರು? ಡಿ.ಕೆ ಶಿವಕುಮಾರ ಮತ್ತು ಸಿದ್ದರಾಮಯ್ಯ ಅವರು ಈ ರೀತಿ ಮಾತನಾಡುವುದು ಸರಿಯಲ. ವಿರೋಧ ಪಕ್ಷದ ಮುಖಂಡರಾಗಿ ಜವಾಬ್ದಾರಿಯುತವಾಗಿ ಮಾತನಾಡಲಿ’ ಎಂದರು.

‘ನನ್ನನ್ನು ಪಕ್ಷದಲ್ಲಿ ನಿರ್ಲಕ್ಷ್ಯ ಮಾಡುತ್ತಿಲ್ಲ. ರಾಜ್ಯ ಮತ್ತು ಕೇಂದ್ರ ಮಟ್ಟದಲ್ಲಿ ಗೌರವಯುತ ಸ್ಥಾನ ನೀಡಲಾಗಿದೆ. ಇದಕ್ಕೆ ನಾನು ಪಕ್ಷಕ್ಕೆ ಅಭಾರಿಯಾಗಿದ್ದೇನೆ’ ಎಂದು ಹೇಳಿದರು.

ಜೆ.ಪಿ.ನಡ್ಡಾ ಆಗಮನ: ವಿಜಯಪುರದಲ್ಲಿ ನಡೆಯಲಿರುವ ವಿಜಯ್ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ವಿಶೇಷ ವಿಮಾನದ ಮೂಲಕ ಶನಿವಾರ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಬಿ.ಎಸ್.ಯಡಿಯೂರಪ್ಪ, ಸಚಿವ ಸಚಿವ ಅಶ್ವತ್ಥನಾರಾಯಣ ಸೇರಿ ಸ್ಥಳೀಯ ನಾಯಕರು ಬರಮಾಡಿಕೊಂಡರು.

ವಿಜಯಪುರದ ಸಿದ್ಧೇಶ್ವರ ಸ್ವಾಮೀಜಿ ಆಶ್ರಮಕ್ಕೆ ಭೇಟಿ ನೀಡಿ, ಸಿಂದಗಿಯಲ್ಲಿ ನಡೆಯುವ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಈ ವೇಳೆ ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ಡಾ. ಅವಿನಾಶ್ ಜಾಧವ್, ಸುಭಾಷ ಗುತ್ತೇದಾರ, ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಸೇರಿ ಪ್ರಮುಖ ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.