ADVERTISEMENT

ಸಂಸದ ಖೂಬಾ ಹೇಳಿಕೆಗೆ ಮಹಿಳಾ ಸಂಘಟನೆ ಖಂಡನೆ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಡಿ.16ರಂದು ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 11:08 IST
Last Updated 24 ನವೆಂಬರ್ 2019, 11:08 IST

ಕಲಬುರ್ಗಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ (ಮನ್ರೇಗಾ) 100 ದಿನದ ಕೆಲಸವನ್ನು 250 ದಿನಕ್ಕೆ ಹೆಚ್ಚಿಸಬೇಕು. ದಲಿತ ಹಾಗೂ ದೇವದಾಸಿ ಮಹಿಳೆಯರಿಗೆ ದಿನದ ಕೆಲಸಕ್ಕೆ ₹ 600ಗೆ ಹೆಚ್ಚಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಉದ್ಯೋಗ ಖಾತ್ರಿ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಡಿಸೆಂಬರ್‌ 16ರಂದು ಬೆಂಗಳೂರಿಲ್ಲಿ ಬೃಹತ್ ರ್‍ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯಕ್ಷೆ ಕೆ.ನೀಲಾ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಆಳಂದ ಹಾಗೂ ಚಿಂಚೋಳಿ ತಾಲ್ಲೂಕಿನಲ್ಲಿ ಕೆರೆಗಳ ಹೂಳು ಎತ್ತುವ ಕೆಲಸ ನಿಲ್ಲಿಸಿ ಎಂಬಸಂಸದ ಖೂಬಾ ಹೇಳಿಕೆಗೆ ಖಂಡಿಸುತ್ತೇವೆ. ಇಂತಹ ಹೇಳಿಕೆ ಹೇಳಿರುವ ಸಂಸದ ಖೂಬಾ ಅವರಿಗೆ ಶೋಭೆಯಲ್ಲ ಎಂದರು.

‘ಉದ್ಯೋಗಖಾತ್ರಿ ಯೋಜನೆಯ ಬಗ್ಗೆ ಖೂಬಾ ಅವರು ತಿಳಿದುಕೊಳ್ಳುವ ಕೆಲಸಕ್ಕೆ ಮುಂದಾಗಬೇಕು. ಇದು ಕೇವಲ ಒಂದು ಯೋಜನೆ ಅಲ್ಲ. ಅದು ಜನರ ಕಾಯ್ದೆ’ ಎಂದು ಸಲಹೆ ಹೇಳಿದರು.

ADVERTISEMENT

‘ಭಗವಂತ ಖೂಬಾ ಒಂದು ವಾರದಲ್ಲಿ ಈ ಹೇಳಿಕೆ ವಾಪಸ್‌ ಪಡೆಯದಿದ್ದರೆ ಅವರಿಗೆ ಘೇರಾವ್‌ ಹಾಕಲಾಗುವುದು. ಇಲ್ಲದಿದ್ದರೆ ಉದ್ಯೋಗ ಖಾತ್ರಿ ಯೋಜನೆಯ ನಿಯಮ ಉಲ್ಲಂಘನೆಯಾಗಿದ್ದು, ನಿಮ್ಮ ವಿರುದ್ಧ ಪ್ರಕರಣ ದಾಖಲಿಸುವ ಹಕ್ಕು ನಮಗಿದೆ’ ಎಂದು ಎಚ್ಚರಿಸಿದರು.

‘ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಸಂಪೂರ್ಣವಾಗಿ ಬಲಪಡಿಸಬೇಕು. ಮೋದಿ ಸರ್ಕಾರ ಬಜೆಟ್‌ನಲ್ಲಿ ಕೇವಲ ₹ 1 ಸಾವಿರ ಕೋಟಿ ಮಾತ್ರ ಹಣ ನೀಡುತ್ತಾರೆ. ಅದನ್ನು ಹೆಚ್ಚಿಸಬೇಕು. ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು. ವಲಸೆ ಹೋಗುವುದನ್ನು ತಡೆಗಟ್ಟುವ ಕೆಲಸ ಮಾಡಬೇಕು. ಉದ್ಯೋಗ ಖಾತ್ರಿ ಯೋಜನೆಯನ್ನು ನಗರ ಪ್ರದೇಶಕ್ಕೂ ಜಾರಿಗೊಳಿಸಬೇಕು. ಖಾತ್ರಿ ಯೋಜನೆಯಡಿ ಬಾಕಿ ಇರುವ ಹಣ ಬಿಡುಗಡೆಗೊಳಿಸಬೇಕು. ಚೆಕ್‌ಡ್ಯಾಂ ನಿರ್ಮಿಸುವ ಕೆಲಸ ಮಾಡಬೇಕು. ರಾಷ್ಟ್ರೀಯ ಸಂಪತ್ತು ನಿರ್ಮಾಣ ಮಾಡಬೇಕು. ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ಮಾಡಬೇಕು. ಕೆರೆಗಳ ಸಂರಕ್ಷಣೆಗೆ ಮುಂದಾಗಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಜನರಿಗೆ ಉದ್ಯೋಗ ದೊರಕಿಸುವ ಕೆಲಸ ಮಾಡಿ’ ಎಂದು ಖೂಬಾ ಅವರಿಗೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಾಧ್ಯಾಪಕ ಡಾ.ಪ್ರಭು ಖಾನಾಪುರೆ, ಚಂದ್ರಪ್ಪ ಪೂಜಾರಿ, ಅಶ್ವಿನಿ, ಪವಿತ್ರಾ ವಸ್ತ್ರದ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.