ಕಲಬುರಗಿ: ಡಿಜಿಟಲ್ ಮಾರ್ಕೆಟಿಂಗ್‌ನಿಂದ ಔದ್ಯಮಿಕ ಬೆಳವಣಿಗೆ ಹೆಚ್ಚಾಗುತ್ತಿದ್ದು ಸ್ವಾಗತಾರ್ಹ. ಆದರೆ, ಕೆಲ ನ್ಯೂನ್ಯತೆಗಳೂ ಇದ್ದು, ಕಾಸ್ಮೆಟಿಕ್, ಆಹಾರ ಪದಾರ್ಥ ಸೇರಿದಂತೆ ವಿವಿಧ ಉತ್ಪನ್ನಗಳ ಮಾರಾಟದಲ್ಲಿ ಕಳಪೆ ಉತ್ಪನ್ನಗಳನ್ನು ಕಳುಹಿಸುತ್ತಿರುವುದು ಕಂಡು ಬರುತ್ತಿದೆ. ಇದು ಡಿಜಿಟಲ್ ಮಾರ್ಕೆಟಿಂಗ್‌ನ ವಿಶ್ವಾಸಕ್ಕೆ ಧಕ್ಕೆ ತರುತ್ತಿದೆ ಎಂದು ಕಲ್ಯಾಣ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ ಕಳವಳ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಎಂಎಸ್‌ಎಂಇ ಡೆವಲಪ್‌ಮೆಂಟ್ ಅಂಡ್ ಫೆಲಿಸಿಟೇಶನ್ ಸೆಂಟರ್, ಜಿಲ್ಲಾ ಕೈಗಾರಿಕಾ ಕೇಂದ್ರ, ಎಚ್‌ಕೆಸಿಸಿಐ ಸಹಯೋಗದಲ್ಲಿ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಡಿಜಿಟಲ್ ಮಾರ್ಕೆಟಿಂಗ್ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಎಂಎಸ್‌ಎಂಇ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎಸ್.ಜವಳಗಿ ಮಾತನಾಡಿ, ‘ಸಣ್ಣ, ಸೂಕ್ಷ್ಮ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆ ಇಲಾಖೆಯಿಂದಲೇ ಉತ್ಪನ್ನಗಳ ತಯಾರಿಕೆಗೆ ಶೇ 90ರಷ್ಟು ಹಣಕಾಸು ನೆರವು ನೀಡಲಾಗುವುದು. ನಾವೇ ಉತ್ಪಾದಿಸಿದ ಉತ್ಪನ್ನಗಳ ಮಾರಾಟಕ್ಕೆ ಮಾಲ್‌ಗೆ ಹೋಗುವ ಸ್ಥಿತಿ ಇತ್ತು. ಇದೀಗ ಡಿಜಿಟಲ್ ಮಾರುಕಟ್ಟೆಯಿಂದಾಗಿ ಮನೆಯಲ್ಲಿಯೇ ಕುಳಿತು ವಿಶ್ವದ ಯಾವುದೇ ದೇಶಕ್ಕೂ ಮಾರಾಟ ಮಾಡಬಹುದು. ಎಂಎಸ್‌ಎಇಯಿಂದಲೇ ಗುಣಮಟ್ಟ, ಬ್ರಾಂಡಿಂಗ್, ಪ್ಯಾಕಿಂಗ್, ಕ್ಯೂಆರ್ ಕೋಡ್ ಸೇರಿ ಎಲ್ಲ ವ್ಯವಸ್ಥೆಗಳನ್ನು ಉಚಿತವಾಗಿ ಮಾಡಿ ಕೊಡಲಾಗುವುದು. ಇದರ ಲಾಭ ಪಡೆಯಬೇಕು. ಇದಕ್ಕಾಗಿ ಬೇರೆ ಊರಿಗೆ ಹೋಗುವ ಅಗತ್ಯವಿಲ್ಲ. ಆ್ಯಪ್‌ನಲ್ಲಿಯೇ ಎಲ್ಲ ವಿವರ ಭರ್ತಿ ಮಾಡಿದರೆ ಸಾಕು’ ಎಂದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕಿ ರೂಪಾಲಿ ಮಾತನಾಡಿ, ‘ಆನ್‌ಲೈನ್‌ನಲ್ಲಿ ಮಹಿಳೆಯರೇ ಹೆಚ್ಚಿನ ಪ್ರಮಾಣದಲ್ಲಿ ಖರೀದಿ ಮಾಡುತ್ತಿದ್ದಾರೆ’ ಎಂದು ಶ್ಲಾಘಿಸಿದರು.
ನಂತರ ಐಟಿ ಉದ್ಯಮಿ ಆಕಾಶ ತೊನಸಳ್ಳಿ, ಆನ್‌ಲೈನ್‌ನಲ್ಲಿ ನಮ್ಮ ಉತ್ಪನ್ನಗಳು ಮಾರಾಟ ಮಾಡುವುದಕ್ಕೆ ಇರುವ ಪೋರ್ಟಲ್, ಬಾರ್ ಕೋಡ್ ಸೃಷ್ಟಿಯಿಂದಾಗಿ ಆಗುವ ಅನುಕೂಲಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.