ಅಫಜಲಪುರ: ‘ತಾಲ್ಲೂಕಿನಲ್ಲಿ ಸುಮಾರು 20 ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅನುದಾನದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಾಣ ಮಾಡಿದರೂ ಇಲ್ಲಿಯವರೆಗೆ ಕಳಪೆ ಕಾಮಗಾರಿಯಿಂದ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಒಂದು ಹನಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಅದಕ್ಕಾಗಿ ಉನ್ನತಮಟ್ಟದ ತನಿಖೆ ನಡೆಸಿ ಗುತ್ತಿಗೆದಾರರ ಲೈಸೆನ್ಸ್ ಕಪ್ಪುಪಟ್ಟಿಗೆ ಸೇರಿಸಬೇಕು. ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ತಾಲ್ಲೂಕು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ ಬಿರಾದಾರ ಒತ್ತಾಯಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ಪ್ರಗತಿ ಪರಿಶೀಲನೆ ಸಭೆಯಲ್ಲಿ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಯೋಜನೆಗಳು ನಿಷ್ಕ್ರಿಯವಾಗಿರುವ ಬಗ್ಗೆ ಸಭೆಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಅವರು ಮಾತನಾಡಿದರು.
‘ತಾಲ್ಲೂಕಿನ ಗೌರ ಬಿ, ಮಾಶಾಳ, ಕರಜಗಿ, ಆನೂರ, ಬಂದರವಾಡ, ದೇವಲಗಣಗಾಪುರ ಗ್ರಾಮಗಳಲ್ಲಿ ಕುಡಿಯುವ ನೀರಿನ ಯೋಜನೆಗಳು ನಿಷ್ಕ್ರಿಯವಾಗಿವೆ’ ಎಂದು ತಿಳಿಸಿದರು.
ತಾಲ್ಲೂಕು ಉಸ್ತುವಾರಿ ಅಧಿಕಾರಿ ಮಲ್ಲೇಶಿ ತಂಗಾ ಅವರು, ರೈತ ಸಂಘದವರು ನೀಡಿರುವ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿ, ‘ನಿಮ್ಮ ಬೇಡಿಕೆಗಳನ್ನು ಪರಿಶೀಲಿಸಿ ಯಾವ ಹಂತದಲ್ಲಿ ಏನಾಗಿದೆ ಎಂಬುದರ ಬಗ್ಗೆ ತಿಳಿದುಕೊಳ್ಳುತ್ತೇವೆ’ ಎಂದರು.
ಸಭೆಯಲ್ಲಿ ತಹಶೀಲ್ದಾರ್ ಸಂಜು ಕುಮಾರ್ ದಾಸರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವೀರಣ್ಣ ಕೌಲಗಿ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.