ಸಾಂದರ್ಭಿಕ ಚಿತ್ರ
ಕಲಬುರಗಿ: ಆಸ್ತಿ ವ್ಯಾಜ್ಯ ಸಂಬಂಧ ದೊಡ್ಡಪ್ಪನ ಮಗಳನ್ನು ಕೊಲೆ ಮಾಡಿದ ಆರೋಪ ಸಾಬೀತು ಆಗಿದ್ದರಿಂದ ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಕಲಬುರಗಿ ಪೀಠಾಸೀನ ಸೇಡಂ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಸೇಡಂ ಸಂತೆಯಲ್ಲಿ ಶರಭಾವತಿ ಅವರನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಕಾಳಗಿ ತಾಲ್ಲೂಕಿನ ಕೊಡದೂರು ಗ್ರಾಮದ ದಿನೇಶ ನಾಗೇಂದ್ರಪ್ಪ ಶಿಕ್ಷೆಗೆ ಒಳಗಾದ ಅಪರಾಧಿ.
2019ರ ಜನವರಿ 27ರ ಸಂಜೆ 6ರ ಸುಮಾರಿಗೆ ಶರಭಾವತಿ ಅವರು ಸೇಡಂ ಸಂತೆಯಲ್ಲಿ ತರಕಾರಿ ಖರೀದಿಸುತ್ತಿದ್ದರು. ಬೈಕ್ ಮೇಲೆ ಬಂದ ದಿನೇಶ, ಮಚ್ಚಿನಿಂದ ಶರಭಾವತಿಯ ಕತ್ತು ಕೊಯ್ದು ಪರಾರಿಯಾಗಿದ್ದ.
ಈ ಸಂಬಂಧ ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ ಪೊಲೀಸರಿಗೆ ಆಸ್ತಿ ವ್ಯಾಜ್ಯಕ್ಕಾಗಿ ಕೊಲೆ ಮಾಡಿದ್ದು ಗೊತ್ತಾಯಿತು. ತಂದೆಯ ಆಸ್ತಿಯಲ್ಲಿ ಪಾಲು ಕೊಡುವಂತೆ ತಂದೆಯ ತಮ್ಮನಾದ ನಾಗೇಂದ್ರಪ್ಪ ವಿರುದ್ಧ ನ್ಯಾಯಾಲದಲ್ಲಿ ದಾವೆ ಹೂಡಿದ್ದರು. ವಿವಿಧ ನ್ಯಾಯಾಲಯಗಳಲ್ಲಿ ಸುದೀರ್ಘ ವಿಚಾರಣೆ ನಡೆಯಿತು. ಕೊನೆಗೆ 20 ಎಕರೆ ಜಮೀನು, ಲಾಂಭಾಂಶವನ್ನು ಶರಭಾವತಿಗೆ ನೀಡುವಂತೆ ಕೋರ್ಟ್ ಆದೇಶಿಸಿತ್ತು. ನ್ಯಾಯಾಲದಿಂದ ಆದೇಶವಾಗಿದ್ದರೂ ಆಸ್ತಿಯಲ್ಲಿ ಪಾಲು ಕೊಡದೆ ಚಿಕ್ಕಪ್ಪನ ಮಕ್ಕಳು ಆಕೆಯ ಕೊಲೆಗೆ ಸಂಚು ಮಾಡಿದ್ದರು. ಅಂತೆಯೇ ಸೇಡಂ ಸಂತೆಗೆ ಬಂದಿದ್ದ ಶರಭಾವತಿಯನ್ನು ಆಕೆಯ ಚಿಕ್ಕಪ್ಪನ ಮಗ ದಿನೇಶ ಮಚ್ಚಿನಿಂದ ಕತ್ತು ಕೊಯ್ದು ಕೊಲೆ ಮಾಡಿದ್ದ.
ಈ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಸಿಪಿಐ, ಈಗಿನ ಡಿವೈಎಸ್‌ಪಿ ಶಂಕರಗೌಡ ಪಾಟೀಲ ಹಾಗೂ ಸಿಪಿಐ ಪಸಿಯೊದ್ದೀನ್ ಅವರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ವಾದ– ಪ್ರತಿವಾದ ಆಲಿಸಿದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ಕಲಬುರಗಿ ಪೀಠಾಸೀನ ಸೇಡಂ ನ್ಯಾಯಾಲಯದ ನ್ಯಾಯಾಧೀಶ ಕರಣ ಗುಜ್ಜರ್ ಅವರು ಅಪರಾಧಿ ದಿನೇಶಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ಪರವಾಗಿ 4ನೇ ಹೆಚ್ಚುವರಿ ಸರ್ಕಾರಿ ಅಭಿಯೋಜಕ ನಾಗರಾಜ ಕಳ್ಳಿಮನಿ ಮಸ್ಕಿ ಅವರು ವಾದ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.