ಚಿತ್ತಾಪುರ: ತಾಲ್ಲೂಕಿನ ಡೋಣಗಾಂವ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷೆಯಾಗಿ ಡೋಣಗಾಂವ ಗ್ರಾಮದ ನಾಗರತ್ನಾ ಮಲ್ಲಿಕಾರ್ಜುನ ಹೊನ್ನಪುರ, ಉಪಾಧ್ಯಕ್ಷೆಯಾಗಿ ರಾಜೋಳಾ ಗ್ರಾಮದ ಶಾಂತಮ್ಮ ಶರಣಪ್ಪ ಆಯ್ಕೆಯಾದರು.
13 ಸದಸ್ಯ ಬಲ ಹೊಂದಿರುವ ಗ್ರಾಮ ಪಂಚಾಯಿತಿಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಾಗರತ್ನಾ ಹಾಗೂ ದೇವೀಂದ್ರಪ್ಪ ಉಮೇದುವಾರಿಕೆ ಸಲ್ಲಿಸಿದ್ದರು. ನಾಗರತ್ನ ಅವರಿಗೆ ಒಂಬತ್ತು ಮತ್ತು ದೇವೀಂದ್ರಪ್ಪ ಅವರಿಗೆ ನಾಲ್ಕು ಮತಗಳು ಲಭಿಸಿದವು. ಪರಿಶಿಷ್ಟ ಜಾತಿ (ಮಹಿಳೆ) ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಶಾಂತಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.
ತಹಶೀಲ್ದಾರ್ ಅಮರೇಶ ಬಿರಾದಾರ ಚುನಾವಣೆ ಅಧಿಕಾರಿಯಾಗಿದ್ದರು. ಸಹಾಯಕ ಚುನಾವಣೆ ಅಧಿಕಾರಿಯಾಗಿ ಶಿರಸ್ತೇದಾರ್ ಅಶ್ವತ್ಥನಾರಾಯಣ ಹಾಗೂ ಪಿಡಿಒ ಬೀರಪ್ಪ ಪೂಜಾರಿ ಅವರು ಇದ್ದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ನೂತನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷೆ ಹಾಗೂ ಬೆಂಬಲಿಸಿದ ಎಲ್ಲಾ ಸದಸ್ಯರನ್ನು ಸನ್ಮಾನಿಸಿ, ಪಟಾಕಿ ಸಿಡಿಸಿ, ಬಣ್ಣ ಎರಚಿ, ಸಿಹಿ ಹಂಚಿ ಸಂಭ್ರಮಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಕಾಂಗ್ರೆಸ್ ಮುಖಂಡ ಜಗಣ್ಣಗೌಡ ಪಾಟೀಲ್, ಮಲ್ಲಿಕಾರ್ಜುನ ಹೊನ್ನಪುರ ಮಾತನಾಡಿದರು.
ಗ್ರಾಮದ ಕಾಂಗ್ರೆಸ್ ಮುಖಂಡರಾದ ನಿಂಗಣ್ಣ ಹೆಗಲೇರಿ, ಶರಣು ಡೋಣಗಾಂವ, ಅಲ್ಲೂರ್(ಬಿ) ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಲಿಂಗ, ರಾಮಲಿಂಗ ಬಾನರ ಹೊಸೂರು, ಗೂಳಿನಾಥ ರಾಮತೀರ್ಥ್, ದೇವು ಯಾಬಾಳ ದಿಗ್ಗಾಂವ ಮತ್ತಿತರರು ಇದ್ದರು. ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಚಂದ್ರಾಮಪ್ಪ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.