ADVERTISEMENT

ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವ: ರಸ್ತೆಯುದ್ದಕ್ಕೂ ಪುಷ್ಪಾರ್ಚನೆ ಮಾಡಿದ ಭಕ್ತರು

ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವ ಸರಳ ಆಚರಣೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 3:29 IST
Last Updated 1 ನವೆಂಬರ್ 2020, 3:29 IST
ಚಿತ್ತಾಪುರದ ಲಚ್ಚಪ್ಪ ಸರಾಫ್ ಅವರ ಮನೆಯಿಂದ ಶನಿವಾರ ನಾಗಾವಿ ಯಲ್ಲಮ್ಮ ಪಲ್ಲಕ್ಕಿಯನ್ನು ಹೊತ್ತುಕೊಂಡು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಉತ್ಸವಕ್ಕೆ ಚಾಲನೆ ನೀಡಿದರು.
ಚಿತ್ತಾಪುರದ ಲಚ್ಚಪ್ಪ ಸರಾಫ್ ಅವರ ಮನೆಯಿಂದ ಶನಿವಾರ ನಾಗಾವಿ ಯಲ್ಲಮ್ಮ ಪಲ್ಲಕ್ಕಿಯನ್ನು ಹೊತ್ತುಕೊಂಡು ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಉತ್ಸವಕ್ಕೆ ಚಾಲನೆ ನೀಡಿದರು.   

ಚಿತ್ತಾಪುರ: ಪ್ರತಿ ವರ್ಷ ಸೀಗಿ ಹುಣ್ಣಿಮೆಯಂದು ನಡೆಯುವ ನಾಗಾವಿ ಯಲ್ಲಮ್ಮ ದೇವಿಯ ಜಾತ್ರೆ ಮತ್ತು ಪಲ್ಲಕ್ಕಿ ಉತ್ಸವವನ್ನು ಈ ಬಾರಿ ಕೊರೊನಾ ವೈರಸ್ ಹರಡುವ ಆತಂಕದಿಂದ ತಾಲ್ಲೂಕು ಆಡಳಿತದಿಂದ ಶನಿವಾರ ಸರಳವಾಗಿ ಆಚರಿಸಲಾಯಿತು.

ಪಟ್ಟಣದ ಲಚ್ಚಪ್ಪ ಸರಾಫ್ ಅವರ ಮನೆಯಲ್ಲಿ ರತ್ನಾಕರ ನಾಯಕ, ಕಣ್ವ ನಾಯಕ ಅವರ ಉಪಸ್ಥಿತಿಯಲ್ಲಿ ಜಾತ್ರೆಯ ಸಂಪ್ರದಾಯದಂತೆ ವಿಘ್ನೇಶ್ವರ ಪೂಜೆ, ದೇವಿಯ ಪೂಜೆ, ಆರತಿ ನೆರವೇರಿಸಿದ ತಹಶೀಲ್ದಾರ್ ಉಮಾಕಾಂತ ಹಳ್ಳೆ ಅವರು ಪಲ್ಲಕ್ಕಿ ಹೊತ್ತುಕೊಂಡು ಸಂಪ್ರದಾಯಿಕ ಆಚರಣೆಗೆ ಚಾಲನೆ ನೀಡಿದರು.

ತಾಲ್ಲೂಕು ಆಡಳಿತವು ಜಾತ್ರೆಯನ್ನು ರದ್ದು ಮಾಡಿದ್ದರಿಂದ ದೇವಿಯ ಮೂರ್ತಿಯಿಟ್ಟ ಪಲ್ಲಕ್ಕಿಯನ್ನು ಹೂವಿನಿಂದ ವಿಶೇಷವಾಗಿ ಅಲಂಕರಿಸಿದ್ದ ತೆರೆದ ವಾಹನದಲ್ಲಿ ನಾಗಾವಿಯಲ್ಲಿರುವ ಯಲ್ಲಮ್ಮ ದೇವಿ ದೇವಸ್ಥಾನದವರೆಗೆ ತೆಗೆದುಕೊಂಡು ಹೋಗಲಾಯಿತು.

ADVERTISEMENT

ಪಲ್ಲಕ್ಕಿ ಹೊತ್ತ ವಾಹನ ಸರಾಫ್ ಅವರ ಮನೆಯಿಂದ ರಸ್ತೆಯಲ್ಲಿ ಆಗಮಿಸುತ್ತಿದ್ದಂತೆ ಭಕ್ತರು ಪುಷ್ಪಾರ್ಚನೆ ಮಾಡಿ ದೇವಿಗೆ ಭಕ್ತಿ ಸಮರ್ಪಿಸಿದರು. ಚಿತಾವಲಿ ಚೌಕದಿಂದ ನಾಗಾವಿ ಚೌಕ್ ವರೆಗೆ ವಿವಿಧ ಅಂಗಡಿಯವರು ಪಲ್ಲಕ್ಕಿಯತ್ತ ಪುಷ್ಪಾರ್ಚನೆ ಮಾಡಿ ಶ್ರದ್ಧಾಭಕ್ತಿಯಿಂದ ನಮಿಸಿದರು. ಹಲಿಗೆ ಮತ್ತು ಡೊಳ್ಳು ಬಾರಿಸುವವರು ಪಲ್ಲಕ್ಕಿ ಹೊತ್ತ ವಾಹನದ ಮುಂದೆ ಚಲಿಸುತ್ತಿದ್ದ ಸಣ್ಣ ಟಾಟಾ ಏಸಿ ವಾಹನದಲ್ಲಿ ಕುಳಿತು ಹಲಿಗೆ ಡೊಳ್ಳು ಬಾರಿಸುತ್ತಿದ್ದರು. ಪಲ್ಲಕ್ಕಿ ಹೊತ್ತು ಸಾಗುತ್ತಿದ್ದ ವಾಹನದ ಹತ್ತಿರ ಭಕ್ತರು ಬಾರದಂತೆ ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದರು.

ನೈವೇದ್ಯ ನಿಷೇಧ: ಕೊರೊನಾ ವೈರಸ್ ಹರಡುವ ಆತಂಕದಿಂದಾಗಿ ಪಲ್ಲಕ್ಕಿಗೆ ಕಾಯಿ–ಕರ್ಪೂರ ಅರ್ಪಿಸುವುದು ಮತ್ತು ದೇವಸ್ಥಾನದಲ್ಲಿ ದೇವಿಯ ದರ್ಶನ, ನೈವೇದ್ಯ ಅರ್ಪಣೆ ನಿಷೇಧಿಸಲಾಗಿತ್ತು.

ಪಲ್ಲಕ್ಕಿ ದೇವಸ್ಥಾನಕ್ಕೆ ತಲುಪುತ್ತಿದ್ದಂತೆ ಸಂಪ್ರದಾಯದಂತೆ ರತ್ನಾಕರ ನಾಯಕ ಅವರು ಮಂಗಳಾರತಿ ಮಾಡುವ ಮೂಲಕ ಪಲ್ಲಕ್ಕಿಯನ್ನು ಸ್ವಾಗತಿಸಿಕೊಂಡರು.

ಗರ್ಭಗುಡಿಯ ಪಾದಕಟ್ಟೆಯ ಹತ್ತಿರ ಜರುಗಿದ ಮಂಗಳಾರತಿ ಕಾರ್ಯಕ್ರಮದಲ್ಲಿ ಸೇಡಂ ಉಪ ವಿಭಾಗಾಧಿಕಾರಿ ರಮೇಶ ಕೋಲಾರ, ತಹಶೀಲ್ದಾರ್ ಉಮಾಕಾಂತ ಹಳ್ಳೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ, ಸಿಪಿಐ ಕೃಷ್ಣಪ್ಪ ಕಲ್ಲದೇವರ್, ಪಿಎಸ್ಐ ಶ್ರೀಶೈಲ್ ಅಂಬಾಟಿ, ದೇವಸ್ತಾನ ಸಮಿತಿ ಕಾರ್ಯದರ್ಶಿ ದಶರಥ ಮಂತಟ್ಟಿ ಅವರು ಪಾಲ್ಗೊಂಡಿದ್ದರು.

ಹೊರಗೆ ಭಕ್ತ ಗಣ ಒಳಗೆ ಭಣ ಭಣ: ಯಲ್ಲಮ್ಮ ದೇವಿಯ ಜಾತ್ರೆ ರದ್ದು ಮಾಡಿ ದೇವಿಯ ದರ್ಶನ ನಿಷೇಧ ಮಾಡಿದ್ದರಿಂದ ಶನಿವಾರ ದೇವಸ್ಥಾನಕ್ಕೆ ಪೊಲೀಸ್ ಸರ್ಪಗಾವಲು ಕಂಡು ಬಂತು.

ದೇವಸ್ಥಾನದ ಬಾಗಿಲು ಬಂದ್ ಮಾಡಿದ್ದರಿಂದ ಭಕ್ತರಿಲ್ಲದೆ ದೇವಸ್ಥಾನದ ಗರ್ಭಗುಡಿಯ ಆವರಣ ಭಣ ಭಣ ಎನ್ನುತ್ತಿತ್ತು. ನಿಷೇಧದ ನಡುವೆಯೂ ಅಪಾರ ಸಂಖ್ಯೆಯಲ್ಲಿ ದೇವಿಯ ಭಕ್ತಗಣ ದೇವಸ್ಥಾನದ ಹೊರಗೆ ಜಮಾಯಿಸಿದ್ದರು. ಯಾರೂ ಒಳಗೆ ಹೋಗದಂತೆ ಕೈಗೊಂಡಿದ್ದ ಪೊಲೀಸ್ ಬಂದೋಬಸ್ತ್ ನಡುವೆಯೂ ಜನರು ದೇವಸ್ಥಾನದ ಬಾಗಿಲಿನವರೆಗೆ ತೆರಳಿ ನಮಸ್ಕರಿಸುತ್ತಿದ್ದರು.

ರಸ್ತೆಯ ಪಕ್ಕದಲ್ಲಿರುವ ಕಟ್ಟೆಯ ಮೇಲೆ ನೂರಾರು ಭಕ್ತಜನರು ತೆಂಗಿನ ಕಾಯಿ ಒಡೆದು ಭಕ್ತಿ ಅರ್ಪಿಸಿದರು. ಜನರು ಬಾರದಂತೆ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ದೇವಸ್ಥಾನದಲ್ಲಿ ಪಲ್ಲಕ್ಕಿ ಪ್ರದಕ್ಷಿಣೆ ನಡೆಯುವಾಗ ಕೆಲವು ಮಹಿಳೆಯರು ಒಳಗೆ ನುಗ್ಗಿ ಹಲಿಗೆ ವಾದನಕ್ಕೆ ತಕ್ಕಂತೆ ಕುಣಿಯುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.